ADVERTISEMENT

ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ: ಬಂಧನ

ಎನ್‌ಸಿಬಿ ಕಾರ್ಯಾಚರಣೆ; 750 ಎಂಡಿಎಂಎ ಮಾತ್ರೆ ಜಪ್ತಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 21:19 IST
Last Updated 29 ಸೆಪ್ಟೆಂಬರ್ 2020, 21:19 IST
   

ಬೆಂಗಳೂರು: ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ಖರೀದಿಸಿ ತಂದು ಉಡುಪಿ ಜಿಲ್ಲೆಯ ಮಣಿಪಾಲ ಸೇರಿದಂತೆ ಹಲವು ನಗರಗಳ ಕೆಲ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ರಾಷ್ಟ್ರೀಯ ಮಾದಕ ವಸ್ತುಗಳ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಭೇದಿಸಿದ್ದು, ಜಾಲದಲ್ಲಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿಗಳಾದ ಕೇರಳದ ಫಾಹಿಮ್ (23), ಕಾರ್ತಿಕ್ ಪ್ರಮೋದ್ (25), ಕರ್ನಾಟಕದ ಅಬು ಹಶೀರ್ (22) ಹಾಗೂಸಹಿತ್ಶೆಟ್ಟಿ (22) ಎಂಬುವರನ್ನು ಬಂಧಿಸಲಾಗಿದೆ.

‘ಆರೋಪಿಗಳು 2 ವರ್ಷಗಳಿಂದ ವ್ಯವಸ್ಥಿತವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಮಣಿಪಾಲ ವಿಶ್ವವಿದ್ಯಾಲಯ, ಎನ್‌ಎಂಎಎಂಐಟಿ ಕಾಲೇಜು, ಮಣಿಪಾಲ್ ಕ್ಲಬ್‌ಗಳು, ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದರು. ಆ ಸಂಬಂಧ ಪುರಾವೆಗಳು ಸಿಕ್ಕಿವೆ. ಮತ್ತಷ್ಟು ಮಂದಿಯನ್ನು ವಿಚಾರಣೆ ನಡೆಸಲಾಗುವುದು’ ಎಂದು ಎನ್‌ಸಿಬಿ ಬೆಂಗಳೂರು ವಲಯ ಅಧಿಕಾರಿ ಅಮಿತ್ ಘಾವಟೆ ತಿಳಿಸಿದರು.

ADVERTISEMENT

‘ನೆದರ್‌ಲ್ಯಾಂಡ್‌ನಿಂದ ಭಾರತಕ್ಕೆ ಅಂಚೆ ಪಾರ್ಸೆಲ್ ಮೂಲಕ 750 ಎಂಡಿಎಂಎ ಮಾತ್ರೆಗಳು ಬಂದಿದ್ದವು. ಜುಲೈ 30ರಂದು ಅಂಚೆ ಕಚೇರಿ ಮೇಲೆ ದಾಳಿ ಮಾಡಿ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಆದರೆ, ಪಾರ್ಸೆಲ್ ಮೇಲೆ ಅದನ್ನು ಕಳುಹಿಸಿದವರು ಹಾಗೂ ಸ್ವೀಕರಿಸುವವರ ಮಾಹಿತಿ ಇರಲಿಲ್ಲ. ಪಾರ್ಸೆಲ್ ಬಗ್ಗೆ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಯಿತು. ಜಾಲದ ರೂವಾರಿ ಫಾಹಿಮ್ ಸೇರಿ ನಾಲ್ವರನ್ನು ಇದೇ 24ರಂದು ಬಂಧಿಸಲಾಗಿದೆ’ಎಂದು ಅವರು ತಿಳಿಸಿದರು.

‘ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿದ್ದ ವೆಬ್ ಸರಣಿಗಳನ್ನು ನೋಡುತ್ತಿದ್ದ ಫಾಹಿಮ್‌, ಅಲ್ಲಿನ ಮಾಹಿತಿ ಪಡೆದು, ಗ್ಯಾಂಗ್‌ ಕಟ್ಟಿಕೊಂಡು ಮಾರಾಟ ಮಾಡಲಾರಂಭಿಸಿದ್ದ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.