ADVERTISEMENT

ಅಧಿವೇಶನ | ವಿಧಾನ ಪರಿಷತ್ ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 0:13 IST
Last Updated 12 ಡಿಸೆಂಬರ್ 2025, 0:13 IST
   

ಬೆಳಗಾವಿಯ ಸುವರ್ಣ ವಿಧಾನಸಭೆಯಲ್ಲಿ ನಡೆಯತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ನಡೆದ ಪ್ರಶ್ನೋತ್ತರಗಳು ಇಲ್ಲಿವೆ.

‘ಡ್ರಗ್ಸ್‌: ಬಾಡಿಗೆಗೆ ಮನೆ ಕೊಟ್ಟರೆ ಬುಲ್ಡೋಜರ್‌’

ಮಾದಕ ದ್ರವ್ಯಜಾಲ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಲಾಭಕ್ಕಾಗಿ ಅಂತರರಾಜ್ಯ, ಅಂತರರಾಷ್ಟ್ರೀಯ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಅವರನ್ನು ಪತ್ತೆಹಚ್ಚುವ ಸಲುವಾಗಿ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡಿರುವ ಮನೆ ಮಾಲೀಕರ ಮೇಲೆ ನಿಗಾ ವಹಿಸಲಾಗಿದೆ. ಮನೆ ಬಾಡಿಗೆಗೆ ನೀಡಿದರೆ ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲು ಹಿಂಜರಿಯುವುದಿಲ್ಲ. ವಿಶೇಷವಾಗಿ ಆಫ್ರಿಕಾ ಖಂಡದ ವಿದ್ಯಾರ್ಥಿಗಳು ತೊಡಗಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ 300ಕ್ಕಿಂತ ಹೆಚ್ಚು ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಸಮಸ್ಯೆ ಜಾಗತಿಕವಾಗಿದೆ. ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿ ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಸ್ಥಾಪಿಸಲಾಗಿದೆ 

ಗೃಹ ಸಚಿವ ಜಿ.ಪರಮೇಶ್ವರ (ಪ್ರಶ್ನೆ: ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್)

ADVERTISEMENT

₹2,800 ಕೋಟಿ ಕಾಮಗಾರಿ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಸುಮಾರು ₹2,800 ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಪಕ್ಷ, ವ್ಯಕ್ತಿ ಎಲ್ಲವನ್ನೂ ಮೀರಿ ಅಲ್ಲಿನ ಜನರು ಅಭಿವೃದ್ಧಿ ಕೆಲಸಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅರಣ್ಯ ಭೂಮಿ ಬಳಕೆಗೆ ಕೇಂದ್ರದ ಅನುಮತಿ ಸಿಕ್ಕ ತಕ್ಷಣ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (ಪ್ರಶ್ನೆ: ಕಾಂಗ್ರೆಸ್‌ನ ರಮೇಶ್‌ ಬಾಬು)

ಬಜೆಟ್‌ನಲ್ಲಿ ವಸತಿನಿಲಯ

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಭಾಗದ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿನಿಲಯಗಳನ್ನು ನಿರ್ಮಿಸಲು ಮುಂದಿನ ಬಜೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು

ಮುಖ್ಯಮಂತ್ರಿ ಸಿದ್ದರಾಮಯ್ಯ (ಪ್ರಶ್ನೆ: ಬಿಜೆಪಿಯ ಶಾಂತರಾಮ್‌ ಬುಡ್ನಿ)

ಪತ್ತೆಯಾಗದ ಪ್ರಕರಣಗಳೇ ಅಧಿಕ

ದರೋಡೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು. ಮೂರು ವರ್ಷಗಳಲ್ಲಿ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅವುಗಳಲ್ಲಿ ವಾಹನ ಕಳವು ಪ್ರಕರಣಗಳು ಹೆಚ್ಚಿವೆ

ಗೃಹಸಚಿವ ಜಿ.ಪರಮೇಶ್ವರ (ಪ್ರಶ್ನೆ: ಬಿಜೆಪಿಯ ಕಿಶೋರ್‌ ಕುಮಾರ್‌ ಪುತ್ತೂರ್‌)

30 ದಿನಗಳ ವೇತನ: ಪರಿಶೀಲನೆ

ಎಎಸ್‌ಐ ಮತ್ತು ಸಿಬ್ಬಂದಿ ರಜಾ ದಿವಸಗಳಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸ್ತುತ ಲಭ್ಯವಿರುವ 15 ದಿವಸಗಳ ವೇತನವನ್ನು 30 ದಿನಗಳ ವೇತನಕ್ಕೆ ಪರಿಷ್ಕರಿಸುವ ಪ್ರಸ್ತಾವ ಪರಿಶೀಲನೆಯ ಹಂತದಲ್ಲಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಕೆಲವು ನಿರ್ದಿಷ್ಟ ವೃಂದದ ಸಿಬ್ಬಂದಿಯನ್ನೂ ಒಳಗೊಂಡಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗೆ 30 ದಿನಗಳ ಹೆಚ್ಚುವರಿ ವೇತನವನ್ನು ಪಾವತಿಸಲು ಅವಕಾಶವಿರುತ್ತದೆ. ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ ಮತ್ತು ಮುಂಬಡ್ತಿಗೆ 70:30 ಅನುಪಾತವನ್ನು ನಿಗದಿಪಡಿಸಲಾಗಿದೆ

ಗೃಹ ಸಚಿವ ಡಾ.ಜಿ.ಪರಮೇಶ್ವರ , (ಕಾಂಗ್ರೆಸ್‌ನ ಡಿ.ಟಿ. ಶ್ರೀನಿವಾಸ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.