ಗಂಗಾವತಿ (ಕೊಪ್ಪಳ ಜಿಲ್ಲೆ): ಹೋಳಿ ಹುಣ್ಣಿಮೆ ಬಂತೆಂದರೆ ಸಾಕು; ತಾಲ್ಲೂಕಿನ ಪ್ರಸಿದ್ಧ ರಮಣೀಯ ತಾಣ ಸಾಣಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದೇಶಿ ಪ್ರವಾಸಿಗರಿಂದ ದೊಡ್ಡಮಟ್ಟದಲ್ಲಿ ಸಂಭ್ರಮ ಮನೆ ಮಾಡಿರುತ್ತಿತ್ತು. ಈಗ ಖಾಲಿಖಾಲಿಯಾಗಿದೆ.
ವಿದೇಶಿಗರು ವರ್ಷಪೂರ್ತಿ ಹಂಪಿ, ಕಮಲಾಪುರ, ಆನೆಗೊಂದಿ, ಪಂಪಾ ಸರೋವರ ಹೀಗೆ ಅನೇಕ ಐಸಿಹಾಸಿಕ ಪ್ರದೇಶಗಳಲ್ಲಿ ಓಡಾಡಿ ಹೋಳಿ ಹಬ್ಬದ ವೇಳೆಗೆ ಸಾಣಾಪುರ ಕೆರೆ ಬಳಿ ಬಂದು ಬಣ್ಣದ ಹಬ್ಬದ ಖುಷಿಯಲ್ಲಿ ಭಾಗಿಯಾಗುತ್ತಿದ್ದರು. ಈ ಬಾರಿ ಇದೇ ಸಾಣಾಪುರದಲ್ಲಿ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಮತ್ತು ಯುವಕನ ಕೊಲೆ ನಡೆದ ಘಟನೆ ವಿದೇಶಿಯರಲ್ಲಿ ಆತಂಕ ಮೂಡಿಸಿದೆ.
ವಿದೇಶಿಗರಿಗೆ ಬಣ್ಣದ ಹಬ್ಬ ಅಚ್ಚುಮೆಚ್ಚಾಗಿದ್ದು, ಪ್ರತಿವರ್ಷ ಸ್ಥಳೀಯರ ಜೊತೆ ಸೇರಿ ಓಕುಳಿ ಆಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಪರಸ್ಪರ ಬಣ್ಣ ಎರಚುತ್ತ, ಡಿಜೆ ಸದ್ದಿಗೆ ಕುಣಿದು ಓಕುಳಿಯ ಸಂಭ್ರಮದಲ್ಲಿ ಮಿಂದೇಳುತ್ತಿದ್ದರು. ಪ್ರತಿ ವರ್ಷ ಇಷ್ಟೊಂದು ಸಂಭ್ರಮ ತುಂಬಿರುತ್ತಿದ್ದ ಸಾಣಾಪುರದಲ್ಲಿ ಈಗ ಆತಂಕದ ಛಾಯೆ ಮನೆಮಾಡಿದೆ. ರೆಸಾರ್ಟ್‌ಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರವಿದ್ದರೂ ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ.
ವಿದೇಶಿಗರು ಭಯದಿಂದ ಸಾಣಾಪುರ ತೊರೆಯುತ್ತಿದ್ದಾರೆ; ಯಾರೇ ಬಂದರೂ ಅನುಮಾನದಿಂದ ನೋಡುವಂತಾಗಿದೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವ ಪ್ರವಾಸಿಗರು ಹೊಸಪೇಟೆ, ಬೆಂಗಳೂರು ಭಾಗಕ್ಕೆ ಹೋಗುತ್ತಿದ್ದಾರೆ. ಸ್ಥಳೀಯರು ಹಾಗೂ ರೆಸಾರ್ಟ್‌ಗಳ ಮಾಲೀಕರು ಭದ್ರತೆಯ ಭರವಸೆ ನೀಡಿ ಮನವೊಲಿಸಿದರೂ ಒಪ್ಪದೆ ಕೊಠಡಿ ಖಾಲಿ ಮಾಡುತ್ತಿದ್ದಾರೆ. ಬೆರಳೆಣಿಕೆಯಷ್ಟೇ ಪ್ರಮಾಣದಲ್ಲಿ ಉಳಿದ ಕೆಲ ಇಸ್ರೇಲ್ ಪ್ರವಾಸಿಗರು ‘ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸುತ್ತಿದ್ದಾರೆ. ಹೋಳಿ ಆಚರಣೆಗಾಗಿ ದೇಶಿ ಹಾಗೂ ವಿದೇಶದ 400ಕ್ಕೂ ಹೆಚ್ಚು ಪ್ರವಾಸಿಗರು ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ ಭಾಗದ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಮಾಡಿದ್ದ ಮುಂಗಡ ಬುಕ್ಕಿಂಗ್ ರದ್ದು ಮಾಡಿದ್ದಾರೆ.
‘ಪ್ರತಿ ವರ್ಷ ಹೋಳಿ ಹಬ್ಬ ಬಂತೆಂದರೆ ವ್ಯಾಪಾರ ದೃಷ್ಟಿಯಿಂದ ನಮಗೆ ಸುಗ್ಗಿಕಾಲ. ಈ ಬಾರಿ ನಮ್ಮ ಭಾಗದಲ್ಲಿ ನಡೆದ ದುರ್ಘಟನೆಯಿಂದಾಗಿ ಯಾವ ಪ್ರವಾಸಿಗರೂ ಬರುತ್ತಿಲ್ಲ. ಶೇ 70ರಷ್ಟು ಜನ ಮುಂಗಡವಾಗಿ ಮಾಡಿದ್ದನ್ನು ಬುಕ್ಕಿಂಗ್ ರದ್ದುಪಡಿಸಿದ್ದಾರೆ’ ಎಂದು ಸಾಣಾಪುರದ ರೆಸಾರ್ಟ್ ಮಾಲೀಕ ಸುನೀಲ್ ಬಾಬು ಬೇಸರ ವ್ಯಕ್ತಪಡಿಸಿದರು.
ಸಾಣಾಪುರ ಭಾಗದಲ್ಲಿ ದುರ್ಘಟನೆ ನಡೆದಿದ್ದರಿಂದ ಪ್ರವಾಸಿಗರು ಹೋಳಿಹಬ್ಬಕ್ಕೂ ಮೊದಲು ಊರು ತೊರೆಯುತ್ತಿದ್ದಾರೆ. ನಮ್ಮ ಆದಾಯಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ-ರವಿಚಂದ್ರ ಸಾಣಾಪುರದ ರೆಸಾರ್ಟ್ ಮಾಲೀಕ
ಹಂಪಿ ಸಾಣಾಪುರ ಸುಂದರವಾದ ಪ್ರದೇಶವಾಗಿದ್ದು ಇಲ್ಲಿನ ಪ್ರವಾಸಿ ತಾಣಗಳು ಗಮನ ಸೆಳೆಯುವಂತಿವೆ. ಇಂಥಲ್ಲಿ ಅತ್ಯಾಚಾರ ಕೊಲೆ ನಡೆಯಬಾರದಿತ್ತು. ಇನ್ನು ಮುಂದಾದರೂ ಪೊಲೀಸರು ಎಚ್ಚರಿಕೆ ವಹಿಸಬೇಕು-ಆದಿ ಇಸ್ರೇಲ್ ಪ್ರವಾಸಿಗ
ಮದ್ಯ ಮಾರಾಟ; ಪೊಲೀಸರ ಚಾಟಿ
ಗಂಗಾವತಿ: ಸಾಣಾಪುರ ಹಾಗೂ ತುಂಗಭದ್ರಾ ನದಿಪಾತ್ರದ ಸುತ್ತಲು ಇರುವ ರೆಸಾರ್ಟ್‌ಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಸೋಮವಾರ ರಾತ್ರಿ ಪರಿಶೀಲನೆ ನಡೆಸಿದರು.
‘ಬರುವ ಪ್ರವಾಸಿಗರ ಕುರಿತು ಸ್ಪಷ್ಟವಾಗಿ ಮಾಹಿತಿ ಸಂಗ್ರಹಿಸಿ ದಾಖಲಿಸಬೇಕು. ಬರುವ ಹಾಗೂ ಹೋಗುವ ವಿವರ ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.
ಇದೇ ವೇಳೆ ತಂಡಗಳಾಗಿ ಪೊಲೀಸರು ಪರಿಶೀಲನೆ ನಡೆಸುವಾಗ ಸಾಣಾಪುರ ಸಮೀಪದ ಬಸಾಪುರ ಭಾಗದ ರೆಸಾರ್ಟ್‌ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ತಂಡವನ್ನು ಕಂಡು ಪೊಲೀಸರು ರೆಸಾರ್ಟ್ ಮಾಲೀಕರಿಗೆ ಚಾಟಿ ಬೀಸಿದರು. ಊಟಕ್ಕೆಂದು ಪ್ರವಾಸಿಗರು ಕುಟುಂಬ ಸಮೇತ ಬರುತ್ತಾರೆ. ಇಂಥ ಸ್ಥಳದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿದ್ದು ಹೇಗೆ? ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.