ADVERTISEMENT

‘ವೈದಿಕ ಕಪಿಮುಷ್ಟಿಯಲ್ಲಿ ಲಿಂಗಾಯತರು’

ಕೂಡಲಸಂಗಮದಲ್ಲಿ ನಡೆದ 34ನೇ ಶರಣ ಮೇಳ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 19:09 IST
Last Updated 14 ಜನವರಿ 2021, 19:09 IST

ಕೂಡಲಸಂಗಮ: ‘ಕೆಲವು ಲಿಂಗಾಯತರು ವೈದಿಕ ಪುರೋಹಿತಶಾಹಿ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನೂ ಕೆಲವರು ವೈದಿಕ ಧರ್ಮದ ಪ್ರಭಾವಕ್ಕೆ ಒಳಗಾಗಿ ಗುಡಿಗಳಿಗೆ ಮೊರೆ ಹೋಗುತ್ತಿದ್ದಾರೆ. ಇಂತಹ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ’ ಎಂದು ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಕೂಡಲಸಂಗಮದಲ್ಲಿ ನಡೆದ 34ನೇ ಶರಣ ಮೇಳದ ಮೂರನೇ ದಿನವಾದ ಗುರುವಾರ ಬಸವ ಕ್ರಾಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವೈದಿಕ ಪುರೋಹಿತಶಾಹಿಗಳಿಂದ ಸಮಾಜದಲ್ಲಿ ನಡೆದ ಶೋಷಣೆ, ಅಜ್ಞಾನ, ಅಸಮಾನತೆ ಹೋಗಲಾಡಿಸಲು 12ನೇ ಶತಮಾನದಲ್ಲಿ ವೈಶಿಷ್ಟ ಪೂರ್ಣವಾದ ಲಿಂಗಾಯತ ಧರ್ಮವನ್ನು ಬಸವಣ್ಣ ಸ್ಥಾಪಿಸಿದರು’ ಎಂದರು.

ADVERTISEMENT

ಬುಧವಾರ ತಡರಾತ್ರಿ ನಡೆದ ಮೇಳದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ‘ಸನಾತನ ಧರ್ಮದ ಆಧಾರದ ಮೇಲೆ ಅನುಭವ ಮಂಟಪ ನಿರ್ಮಿಸಲು ಸರ್ಕಾರ ಹೊರಟಿದೆ. ಶರಣರ ಧರ್ಮಕ್ಕೆ ಸನಾತನ ಧರ್ಮ ಸೇರಿಸುವ ಕಾರ್ಯವನ್ನು ಸರ್ಕಾರ ಮಾಡಬಾರದು’ ಎಂದರು.

ಜಗದ್ಗುರು ಮಾತೆ ಗಂಗಾದೇವಿ ಮಾತನಾಡಿ, ‘ಸನಾತನ ಧರ್ಮದಲ್ಲಿ ಪ್ರಗತಿಪರ ಚಿಂತನೆಗಳು ಇಲ್ಲ. ಮಹಿಳೆಯರಿಗೆ, ದೀನ ದಲಿತರಿಗೆ ಯಾವುದೇ ಸ್ಥಾನಮಾನವೂ ಇಲ್ಲ. ಪ್ರಗತಿಪರ ಚಿಂತನೆಗಳು ಸನಾತನ ಧರ್ಮದಲ್ಲಿ ಇಲ್ಲದೇ ಇದ್ದರಿಂದ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು’ ಎಂದರು.

ಗುರುವಾರ ಲಿಂಗಾಯತ ಧರ್ಮ ಸಂಸ್ಥಾಪನಾ ದಿನವನ್ನೂ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.