ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿಯಾಗಲಿರುವ ಪ್ರದೇಶದ ಗೂಗಲ್ ನಕ್ಷೆ.
ನವದೆಹಲಿ: ಪ್ರಸ್ತಾವಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸ್ದಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಮಂಡಳಿಯ ಸದಸ್ಯರಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ನಿರ್ದೇಶನ ನೀಡಿದೆ.
ಮಂಡಳಿಯ ಸ್ಥಾಯಿ ಸಮಿತಿಯ 85ನೇ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿರುವುದಕ್ಕೆ ಮಂಡಳಿಯ ಇಬ್ಬರು ಸದಸ್ಯರು ಜೂನ್‌ನಲ್ಲಿ ನಡೆದ ಸ್ಥಾಯಿ ಸಮಿತಿಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಈ ಯೋಜನೆಯು ಪಶ್ಚಿಮ ಘಟ್ಟದ ಹೃದಯ ಭಾಗದಲ್ಲೇ ಅನುಷ್ಠಾನಗೊಳ್ಳಲಿದೆ. ಈ ಪ್ರದೇಶವನ್ನು ಯುನೆಸ್ಕೊದ ಜೀವವೈವಿಧ್ಯ ತಾಣವೆಂದು ಗುರುತಿಸಲಾಗಿದೆ. ಒಂದು ವೇಳೆ, ಯೋಜನೆ ಅನುಷ್ಠಾನಗೊಂಡರೆ ಅಪಾರ ಹಾನಿ ಆಗಲಿದೆ’ ಎಂದು ಎಚ್ಚರಿಸಿದ್ದರು.
‘ಶರಾವತಿ ಪಂಪ್ಡ್ ಸ್ಟೋರೇಜ್‌ನಂತಹ ದೊಡ್ಡ ಯೋಜನೆಗಳನ್ನು ಪರಿಶೀಲಿಸಲು ಸಾಕಷ್ಟು ಸಮಯದ ಅಗತ್ಯ ಇದೆ. ತರಾತುರಿಯಲ್ಲಿ ಅನುಮೋದನೆ ನೀಡಿರುವುದು ಸರಿಯಲ್ಲ. ಪ್ರಸ್ತಾವನೆಯನ್ನು ಮರುಪರಿಶೀಲಿಸುವ ಅಗತ್ಯ ಇದೆ’ ಎಂದು ಸದಸ್ಯರಾದ ಎಚ್.ಎಸ್.ಸಿಂಗ್ ಹಾಗೂ ಆರ್.ಸುಕುಮಾರ್ ಸಭೆಯಲ್ಲಿ ಆಗ್ರಹಿಸಿದ್ದರು.
85ನೇ ಸಭೆಯಲ್ಲಿ ಈ ವಿಷಯ ಮತ್ತೆ ಪ್ರಸ್ತಾಪವಾಯಿತು. ಈ ಯೋಜನೆಗೆ ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂಬ ವಿಷಯವೂ ಚರ್ಚೆಗೆ ಬಂತು. ಸ್ಥಳ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳಬೇಕು ಎಂಬ ಸದಸ್ಯರ ಸಭೆಗೆ ಸಮಿತಿಯ ಅಧ್ಯಕ್ಷರೂ ಆಗಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೆಂದರ್ ಯಾದವ್ ಸಹಮತ ವ್ಯಕ್ತಪಡಿಸಿದರು. ಎಸ್.ಎಸ್.ಸಿಂಗ್, ಆರ್.ಸುಕುಮಾರ್ ಹಾಗೂ ಇಲಾಖೆಯ ನಾಮನಿರ್ದೇಶಿತ ಸದಸ್ಯರ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ಸ್ಥಾಯಿ ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.