ADVERTISEMENT

ಮೈತ್ರಿಯಿಂದ ಜೆಡಿಎಸ್‌ ಹೊರಬರಲಿ: ಶೆಟ್ಟರ್ ಸವಾಲು

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:46 IST
Last Updated 23 ಜೂನ್ 2019, 19:46 IST
   

ಹುಬ್ಬಳ್ಳಿ: ‘ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಲು ಇಚ್ಛೆ ಇಲ್ಲದಿದ್ದರೆ ಮೈತ್ರಿಯಿಂದ ಜೆಡಿಎಸ್‌ ಹೊರಬರಲಿ. ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆಯುವವರೆಗೆ ಯಾಕೆ ಕಾಯಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್‌ ಪ್ರಶ್ನಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್‌. ವಿಶ್ವನಾಥ್‌, ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಲು ಕಾಂಗ್ರೆಸ್‌ಗೆ ಇಚ್ಛೆ ಇಲ್ಲದಿದ್ದರೆ ಬೆಂಬಲ ವಾಪಸ್‌ ಪಡೆಯಲಿ ಎಂದು ಹೇಳಿಕೆ ನೀಡಿದರೆ, ಎಚ್‌.ಡಿ.ದೇವೇಗೌಡರು, ಸರ್ಕಾರ ಯಾವಾಗ ಬಿದ್ದು ಹೋಗುತ್ತದೆಯೋ ಗೊತ್ತಿಲ್ಲ ಎಂದು ಹೇಳುತ್ತಾರೆ. ಈ ರೀತಿಯ ಹೇಳಿಕೆ ನೀಡುವ ಬದಲು ಕಾಂಗ್ರೆಸ್‌ನೊಂದಿಗೆ ಮೈತ್ರಿ ಕಡಿದುಕೊಳ್ಳಲಿ. ಸರ್ಕಾರ ರಚನೆ ಮಾಡಲು ಬಿಜೆಪಿ ಎಲ್ಲ ರೀತಿಯಿಂದಲೂ ಸಿದ್ಧವಿದೆ’ ಎಂದರು.

‘ದೇವೇಗೌಡ, ಸಿದ್ದರಾಮಯ್ಯ, ಸಚಿವರು, ಶಾಸಕರು ಪ್ರತಿನಿತ್ಯ ಒಂದಿಲ್ಲೊಂದು ಹೇಳಿಕೆ ನೀಡುತ್ತ ಮೈತ್ರಿ ಸರ್ಕಾರದಲ್ಲಿ ಸಮನ್ವಯತೆ ಇಲ್ಲ ಎಂದು ಸಾಬೀತು ಪಡಿಸುತ್ತಿದ್ದಾರೆ. ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಕಾಂಗ್ರೆಸ್‌ಗೆ ಸೋಲಾಯಿತು ಎಂದು ವೀರಪ್ಪ ಮೊಯಿಲಿ ಹೇಳುತ್ತಾರೆ. ಹೀಗೆ ಒಬ್ಬರನ್ನೊಬ್ಬರು ದೂರುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರದ ಅಸ್ಥಿರತೆಯಿಂದ ಅಭಿವೃದ್ಧಿಗೆ ತೊಡಕಾಗುತ್ತಿದೆ. ಅಧಿಕಾರಿಗಳಲ್ಲಿ ಕ್ರಿಯಾಶೀಲತೆ ಮಾಯವಾಗುತ್ತದೆ. ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟುಕೊಡಲಿ’ ಎಂದು ಸವಾಲು ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.