ADVERTISEMENT

ಜನಾಂದೋಲನ ರೂಪಿಸಲು ಸಿದ್ಧರಾದ ಮಲೆನಾಡಿಗರು

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಗೆ ವಿರೋಧ

ಎಂ.ರಾಘವೇಂದ್ರ
Published 20 ಜೂನ್ 2019, 18:43 IST
Last Updated 20 ಜೂನ್ 2019, 18:43 IST
ಸಾಗರ ತಾಲ್ಲೂಕಿನಲ್ಲಿರುವ ಲಿಂಗನಮಕ್ಕಿ ಜಲಾಶಯ (ಸಂಗ್ರಹ ಚಿತ್ರ)
ಸಾಗರ ತಾಲ್ಲೂಕಿನಲ್ಲಿರುವ ಲಿಂಗನಮಕ್ಕಿ ಜಲಾಶಯ (ಸಂಗ್ರಹ ಚಿತ್ರ)   

ಸಾಗರ: ಬೆಂಗಳೂರು ನಗರದ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಲಿಂಗನಮಕ್ಕಿ ಜಲಾಶಯದಿಂದ ಅಲ್ಲಿಗೆ ನೀರು ಹರಿಸಬೇಕು ಎಂಬ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಅದರ ವಿರುದ್ಧ ಜನಾಂದೋಲನ ರೂಪಿಸಲು ವಿವಿಧ ಸಂಘ–ಸಂಸ್ಥೆಗಳು ಸಜ್ಜಾಗಿವೆ.

ಮಲೆನಾಡಿನ ಪರಿಸರ ಪ್ರಿಯರು, ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು ಗಟ್ಟಿ ಧ್ವನಿಯಲ್ಲಿ ಈ ಯೋಜನೆಯನ್ನು ಪ್ರಬಲವಾಗಿ ವಿರೋಧಿಸಲು ಸಂಕಲ್ಪ ಮಾಡಿದ್ದಾರೆ. 2,600 ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ 430 ಕಿ.ಮೀ. ದೂರ ಪೈಪ್‌ಲೈನ್ ಅಳವಡಿಸಿ ಅದರ ಮೂಲಕ ನೀರು ಹರಿಸುವುದು ತೀರಾ ಅವೈಜ್ಞಾನಿಕ ಎಂಬುದು ಈ ಭಾಗದ ಜನರ ವಾದವಾಗಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ ಪೂರ್ತಿ 1,819 ಅಡಿ. ತುಂಬಿದಾಗ 151 ಟಿಎಂಸಿ ಅಡಿ ನೀರು ಇರುತ್ತದೆ. 6 ಟಿಎಂಸಿ ಅಡಿ ನೀರನ್ನು ಜಲಾಶಯದ ಸಂಗ್ರಹದಲ್ಲಿ ಸದಾ ಇಡಲೇಬೇಕು. ಈಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಜಲಾಶಯ ತುಂಬುವುದೇ ತೀರಾ ಅಪರೂಪವಾಗಿದೆ. ಹೀಗಿರುವಾಗ ಬೆಂಗಳೂರಿಗೆ 30 ಟಿಎಂಸಿ ಅಡಿ ನೀರು ದೊರಕುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ಈ ಭಾಗದ ಜನರದ್ದು.

ADVERTISEMENT

ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಸುವಾಗ ಜಲಾಯಶದ ನೀರನ್ನು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸಬೇಕು ಎಂದು ಸರ್ಕಾರ ಹಾಗೂ ಕರ್ನಾಟಕ ವಿದ್ಯುತ್ ನಿಗಮದ ನಡುವೆ ಒಡಂಬಡಿಕೆಯಾಗಿದೆ. ಇದರ ವಿರುದ್ಧ ಸರ್ಕಾರವೇ ಹೋಗಲು ಹೇಗೆ ಸಾಧ್ಯ ಎಂದು ಕೂಡ ಇಲ್ಲಿನ ಜನರು ಕೇಳುತ್ತಿದ್ದಾರೆ.

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಪೈಪ್‌ಲೈನ್ ಅಳವಡಿಸಲು ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಹೆದ್ದಾರಿಯನ್ನು ಬಿಟ್ಟು ಉಳಿದ ಪ್ರದೇಶಗಳಲ್ಲಿ ಮಾತ್ರ ಅನುಮತಿ ಸಿಗುತ್ತದೆ. ಹೀಗಾಗಿ ಯೋಜನೆಗಾಗಿ ಸಾವಿರಾರು ಮಂದಿ ತಮ್ಮ ಕೃಷಿ ಭೂಮಿ, ಮನೆಗಳನ್ನು ಕಳೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಭೂ ಸ್ವಾಧೀನ ಪ್ರಕ್ರಿಯೆ ಮೂಲಕ ಭೂಮಿ ವಶಪಡಿಸಿಕೊಂಡು ಸರ್ಕಾರ ಕೋಟ್ಯಂತರ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ. ಈ ಕಾರಣಕ್ಕೂ ಈ ಯೋಜನೆ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ಮಲೆನಾಡಿಗರದ್ದು.

ಶರಾವತಿ ನದಿಯ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತದೆ ಎಂಬ ಸರ್ಕಾರದ ವರಿಷ್ಠರ ಹೇಳಿಕೆಗೆ ಇಲ್ಲಿನ ಪರಿಸರಪ್ರಿಯರು ತೀವ್ರ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಬಿದ್ದ ಮಳೆಯ ನೀರು ಜನರು ಬಳಸಿದ ನಂತರ ಹಲವರ ಬದುಕು ಕಟ್ಟಿಕೊಟ್ಟು ತದನಂತರ ಸಮುದ್ರ ಸೇರುತ್ತದೆ. ಈ ನೀರು ಆವಿಯಾಗಿ ಮೋಡ ಕಟ್ಟಿದರೆ ಮಾತ್ರ ಮತ್ತೆ ಮಳೆ ಮಾರುತ ಕಾಣಲು ಸಾಧ್ಯ. ನಿಸರ್ಗದ ಈ ಸಹಜ ಪ್ರಕ್ರಿಯೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳದೇ ಹೇಳಿಕೆ ನೀಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಲಿಂಗನಮಕ್ಕಿ ಜಲಾಶಯದಿಂದ ಕೇವಲ 30 ಕಿ.ಮೀ. ದೂರದಲ್ಲಿರುವ ಸಾಗರ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ ಈಗ ಚಾಲ್ತಿಯಲ್ಲಿದೆ. ಈ ಯೋಜನೆಗಾಗಿ ಇಲ್ಲಿನ ನಗರಸಭೆ ಪ್ರತಿ ತಿಂಗಳು ₹ 9 ಲಕ್ಷ ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ. ಇನ್ನು 430 ಕಿ.ಮೀ. ದೂರ ನೀರು ಹರಿಸಲು ಎಷ್ಟು ವೆಚ್ಚವಾಗಬಹುದು ಎಂಬ ಪ್ರಶ್ನೆ ಕೂಡ ಈಗ ಉದ್ಭವವಾಗಿದೆ.

22ಕ್ಕೆ ಸಮಾಲೋಚನಾ ಸಭೆ
ಲಿಂಗನಮಕ್ಕಿ ಜಲಾಯಶದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಯನ್ನು ವಿರೋಧಿಸಲು ರೂಪಿಸಬೇಕಾದ ಹೋರಾಟದ ಕುರಿತು ಚರ್ಚಿಸಲು ಇಲ್ಲಿನ ವಿವಿಧ ಸಂಘಟನೆಗಳ ಪ್ರಮುಖರು ಜೂನ್ 22ರಂದು ಸಂಜೆ 5ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಸಮಾಲೋಚನಾ ಸಭೆಯನ್ನು ಆಯೋಜಿಸಿದೆ.

ಸಾರ್ವಜನಿಕರು, ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಭೇಟಿ ಮಾಡಿದ ಶಾಸಕ ಹಾಲಪ್ಪ
ಸಾಗರ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಹರತಾಳು ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಪ್ರಸ್ತಾವಿತ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.

**

ಬೆಂಗಳೂರಿನಲ್ಲಿ ಈಗ ಆಗುತ್ತಿರುವ ಮಳೆಯ ನೀರನ್ನು ಸಮರ್ಪಕವಾಗಿ ಹಿಡಿದಿಡುವ ಮತ್ತು ನೀರಿನ ಸೋರಿಕೆ ತಡೆಯುವ ಕೆಲಸ ಆದರೆ 15 ಟಿಎಂಸಿಯಷ್ಟು ನೀರನ್ನು ಬೆಂಗಳೂರಿನಲ್ಲೆ ಸಂಗ್ರಹಿಸಬಹುದು.
-ಅಖಿಲೇಶ್ ಚಿಪ್ಪು..ಪರಿಸರ ಕಾರ್ಯಕರ್ತ.

**

ಮಲೆನಾಡಿನಲ್ಲಿ ವರ್ಷಕ್ಕೆ 370 ಇಂಚು ಮಳೆಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದು 70-80 ಇಂಚಿಗೆ ಇಳಿದಿದೆ..ಇಲ್ಲಿ ಬೀಳುವ ಮಳೆಯ ನೀರು ಇಲ್ಲಿನವರಿಗೆ ಸಾಕಾಗದೆ ಸ್ಥಿತಿ ಇರುವಾಗ ಇಂತಹ ಯೋಜನೆ ಮಾಡಲು ಮುಂದಾಗುವುದು ಮೂರ್ಖತನ.
-ನಾ.ಡಿಸೋಜ..ಸಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.