
ಚಂದ್ರು ಲಮಾಣಿ
ಗದಗ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್ ನಾಯಕರು ಷಡ್ಯಂತ್ರ ನಡೆಸಿ ಲೋಕಾಯುಕ್ತ ಬಲೆಗೆ ಕೆಡುವಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಲಂಬಾಣಿ ಸಮಾಜದ ಸ್ವಾಮೀಜಿಯೊಬ್ಬರು ಕಾಂಗ್ರೆಸ್ ಕಾರ್ಯಕರ್ತನ ಜತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಶಾಸಕ ಚಂದ್ರು ಲಮಾಣಿ ಧೈರ್ಯ ಎಂತದ್ದು ಇರಬಹುದು. ಮುಂದೆ ಅವನಿಗೆ ಟಿಕೆಟ್ ತಪ್ಪಿಸಲೇ ಬೇಕು. ಅದನ್ನು ಮಾಡದ ಹೊರತು ಸಮಾಧಾನ ಇಲ್ಲ. ಇಂತವರಿಗೆ ಸೂತ್ರದ ಗಾಳ ಹಾಕಿ ಸಿಕ್ಕಿಹಾಕಿಸಲು ಬೆಂಗಳೂರಿನಲ್ಲಿ ಒಂದು ಟೀಮ್ ಇದೆ. ಕೆಲಸ ಕೊಡಿಸಿ ಅಂತ ಬರುತ್ತಾರೆ. ನೋಟಿಗೆ ಪೌಡರ್ ಹಚ್ಚಿ ಐಟಿಗೆ ಒಗಿಸಿಬಿಟ್ರೆ ಆಯ್ತು. ಅಲ್ಲಿಗೆ ಸುಮ್ಮನೆ ಕೂರುತ್ತಾನೆ’ ಎಂಬ ಸಂಭಾಷಣೆ ಆಡಿಯೊದಲ್ಲಿದೆ.
ದೂರುದಾರ ಕಾಂಗ್ರೆಸ್ ಮುಖಂಡ: ಬಿಜೆಪಿ ಆರೋಪ
ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಕಾಮಗಾರಿ ಮುಂದುವರಿಸಲು ಶಾಸಕ ಡಾ. ಚಂದ್ರು ಲಮಾಣಿ 12 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ವಿಜಯ್ ಪೂಜಾರ ಫೆ.18ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಶನಿವಾರ ₹5 ಲಕ್ಷ ಪಡೆಯುವ ವೇಳೆ ಡಾ. ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಲೋಕಾಯುಕ್ತ ದಾಳಿಯನ್ನು ಈಗ ಬಿಡುಗಡೆಯಾಗಿರುವ ಆಡಿಯೊ ಜತೆಗೆ ತಳಕು ಹಾಕಿರುವ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಗುತ್ತಿಗೆದಾರ ವಿಜಯ್ ಪೂಜಾರ ಕಾಂಗ್ರೆಸ್ ಕಾರ್ಯಕರ್ತರೂ ಹೌದು. ಬೇಕಂತಲೇ ಟ್ರ್ಯಾಪ್ ಮಾಡಿಸಿದ್ದು, ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ’ ಎಂದು ಶಿರಹಟ್ಟಿ ಗುತ್ತಿಗೆದಾರರ ಸಂಘದ ಸದಸ್ಯ ವಿಶ್ವನಾಥ ಪಾಟೀಲ ಆರೋಪ ಮಾಡಿದ್ದಾರೆ.
ಶಿರಹಟ್ಟಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಮಂದಿ ಗುತ್ತಿಗೆದಾರರು ಇದ್ದಾರೆ. ಆದರೆ, ನಮ್ಮ ಯಾರ ಬಳಿಯೂ ಶಾಸಕರು ಈವರೆಗೆ ಕಮಿಷನ್‌ಗೆ ಬೇಡಿಕೆ ಇಟ್ಟಿಲ್ಲ. ಅಂಥವರ ವಿರುದ್ಧ ಈಗ ಷಡ್ಯಂತ್ರ ನಡೆದಿದೆ’ ಎಂದು ದೂರಿದರು.
‘ಗುತ್ತಿಗೆದಾರರು ಮೊದಲೇ ಸಾಕಷ್ಟು ತೊಂದರೆಯಲ್ಲಿದ್ದಾರೆ. ಈ ಘಟನೆಯಿಂದ ಇನ್ನಷ್ಟು ತೊಂದರೆ ಆಗಬಾರದು. ಇದು ರಾಜಕೀಯ ಪ್ರೇರಿತ ದಾಳಿ ಆಗಿರುವ ಸಾಧ್ಯತೆ ಇದ್ದು, ಸತ್ಯಾಸತ್ಯತೆ ಹೊರತರಬೇಕಿದೆ’ ಎಂದು ಆಗ್ರಹಿಸಿದ್ದಾರೆ.
ಶಾಸಕರು ಗುತ್ತಿಗೆದಾರನಿಗೆ ಆವಾಜ್ ಹಾಕಿರುವ ಆಡಿಯೊ ಕೂಡ ಬಿಡುಗಡೆ:
ಲಂಬಾಣಿ ಸಮಾಜದ ಸ್ವಾಮೀಜಿಯೊಬ್ಬರ ಆಡಿಯೊ ಬಿಡುಗಡೆ ಆಗುತ್ತಿದ್ದಂತೆ; ಶಾಸಕ ಡಾ. ಚಂದ್ರು ಲಮಾಣಿ ಅವರು ಗುತ್ತಿಗೆದಾರ ವಿಜಯ್ ಪೂಜಾರಗೆ ಬೆದಿಕೆ ಒಡ್ಡಿದ್ದಾರೆ ಎನ್ನಲಾದ ವಿಡಿಯೊ ಕೂಡ ಹರಿದಾಡಿತು.
‘ಪ್ರೀತಿ, ವಿಶ್ವಾಸದಿಂದ ಹೇಳಿದರೆ ನಾಟಕ ಮಾಡ್ತೀಯಾ’ ಎಂಬಲ್ಲಿಂದ ಆರಂಭಗೊಳ್ಳುವ ಆಡಿಯೊ, ‘ಯಲ್ಲಮ್ಮಂಗೆ ಹೋಗಿನಿ, ಮಲ್ಲಮ್ಮಂಗೆ ಹೋಗಿನಿ, ಕಲ್ಲಮ್ಮಂಗೆ ಹೋಗಿನಿ... ನೀನು ನಿಮ್ಮ ತಾಲ್ಲೂಕಿನಲ್ಲಿ ಮಾಡಿದಂತೆ ನಮ್ಮ ತಾಲ್ಲೂಕಿನಲ್ಲಿ ಮಾಡಿದರೆ ನಡ ಮುರಿದು ಕಳಿಸ್ತೀವಿ’ ಎಂಬಲ್ಲಿಯವರಿಗೆ ಮುಂದುವರಿದಿದೆ.
‘ನೀನೆನಾದರೂ ನನಗೆ ಸರಳವಾಗಿ ಅನ್ಕೊಂಡ್ರೆ ನಡಾನೇ ಮುರಿಸ್ತೀನಿ. ಏನ್ ನಮಗೇನು ನಿನ್ ತರ್ ಲೂಸ್ ಅಂತ ಅನ್ಕೋಂಡಿಯಾ ನೀನು’ ಎಂದು ಬೆದರಿಕೆ ಒಡ್ಡಿರುವುದು ಆಡಿಯೊದಲ್ಲಿದೆ.
ತಡರಾತ್ರಿವರೆಗೆ ವಿಚಾರಣೆ
ಕಾಮಗಾರಿ ಮುಂದುವರಿಸಲು 12 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ ಇಟ್ಟು ₹5 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಶಾಸಕ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಶನಿವಾರ ತಡರಾತ್ರಿ 1.30ರವರೆಗೆ ವಿಚಾರಣೆ ನಡೆಸಿದರು.
ಬಳಿಕ ಅವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
ಇಸಿಜಿ, ಬಿಪಿ, ಶುಗರ್ ಪರೀಕ್ಷೆ ನಡೆಸಿದ ವೈದ್ಯರು ಎಲ್ಲ ನಾರ್ಮಲ್ ಇದೆ ಎಂಬ ವರದಿ ಕೊಟ್ಟರು. ಬಳಿಕ ಲೋಕಾಯುಕ್ತ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆದೊಯ್ದರು.
ಆಸ್ಪತ್ರೆ ಬಳಿಯೂ ಜಮಾಯಿಸಿದ್ದ ಕಾರ್ಯಕರ್ತರು:
ಲಕ್ಷ್ಮೇಶ್ವರದಿಂದ ಗದಗ ಜಿಲ್ಲಾ ಆಸ್ಪತ್ರೆಗೆ ಶಾಸಕ ಚಂದ್ರು ಲಮಾಣಿ ಅವರನ್ನು ಕರೆತಂದಾಗ ತಡರಾತ್ರಿ 2 ಗಂಟೆಯಾಗಿತ್ತು. ಅವರನ್ನು ನೋಡಲು ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಆಸ್ಪತ್ರೆ ಒಳಕ್ಕೆ ನುಗ್ಗಲೂ ಪ್ರಯತ್ನಿಸಿದರು. ಆಗ ಪೊಲೀಸರು ಅವರನ್ನು ತಡೆದು, ಪರಿಸ್ಥಿತಿ ನಿಯಂತ್ರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.