ADVERTISEMENT

ಸಕ್ಕರೆ ಬೈಲು | ಆನೆ ಚಿಕಿತ್ಸೆಗೆ ನಿರ್ಲಕ್ಷ್ಯ: ಶಿಸ್ತುಕ್ರಮಕ್ಕೆ ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 19:31 IST
Last Updated 23 ಅಕ್ಟೋಬರ್ 2025, 19:31 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ‘ಶಿವಮೊಗ್ಗದ ಸಕ್ಕರೆ ಬೈಲು ಆನೆ ಶಿಬಿರದ ಬಾಲಣ್ಣ ಎಂಬ ಆನೆಗೆ ಚುಚ್ಚುಮದ್ದು ನೀಡುವಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ’ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಸೂಚಿಸಿದ್ದಾರೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿರುವ ಅವರು, ‘ಬಾಲಣ್ಣ ಆನೆಯನ್ನು ಶಿವಮೊಗ್ಗ ದಸರಾಗೆ ಕಳುಹಿಸಲಾಗಿತ್ತು. ಆ ವೇಳೆ ಗಾಯಗೊಂಡಿದ್ದ ಆನೆಗೆ ಚುಚ್ಚುಮದ್ದು ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಸೋಂಕು ತಗುಲಿದೆ. ಜತೆಗೆ ಶಿಬಿರದಲ್ಲಿರುವ ನಾಲ್ಕು ಆನೆಗಳು ಗಾಯಗಳಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲು ವೈದ್ಯಾಧಿಕಾರಿ ಇಲ್ಲ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಬಗ್ಗೆ ವಿವರಣೆ ನೀಡಿ’ ಎಂದು ಸೂಚಿಸಿದ್ದಾರೆ.

‘ಆನೆ ಶಿಬಿರಗಳಲ್ಲಿ ವೈದ್ಯಾಧಿಕಾರಿಗಳು ಇರಲೇಬೇಕು. ಇಲ್ಲದೇ ಇದ್ದರೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಈ ಹಿಂದೆಯೇ ಸೂಚಿಸಲಾಗಿತ್ತು. ಹೀಗಿದ್ದೂ ಶಿಬಿರಗಳಲ್ಲಿ ವೈದ್ಯಾಧಿಕಾರಿಗಳ ನೇಮಕ ಏಕೆ ನಡೆದಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಬಾಲಣ್ಣ ಆನೆಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಏಕಾಯಿತು ಎಂಬುದನ್ನು ಪತ್ತೆ ಮಾಡಿ. ಅದಕ್ಕೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಿ. ಈ ಬಗ್ಗೆ ಒಂದು ವಾರದ ಒಳಗೆ ವರದಿ ಸಲ್ಲಿಸಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.