ADVERTISEMENT

ಚಿತ್ರದುರ್ಗ: ವಚನ ಸಂಗೀತ ಕೇಳಿ, ನೃತ್ಯವನ್ನೂ ನೋಡಿ...

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಂದ ಆ್ಯಪ್‌ ಅಭಿವೃದ್ಧಿ

ಎಂ.ಎನ್.ಯೋಗೇಶ್‌
Published 3 ಜನವರಿ 2025, 23:30 IST
Last Updated 3 ಜನವರಿ 2025, 23:30 IST
‘ಶಿವಶರಣ ವಚನ ಸಂಪುಟ’ ಆ್ಯಪ್‌ನ ಮುಖಪುಟ
‘ಶಿವಶರಣ ವಚನ ಸಂಪುಟ’ ಆ್ಯಪ್‌ನ ಮುಖಪುಟ   

ಚಿತ್ರದುರ್ಗ: ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಿದ್ಧಗೊಂಡಿರುವ ‘ಶಿವಶರಣ ವಚನ ಸಂಪುಟ’ ಮೊಬೈಲ್‌ ಆ್ಯಪ್‌ ಹೊಸ ರೂಪ ಪಡೆದಿದ್ದು, ಸಾವಿರಾರು ವಚನಗಳಿಗೆ ನೀಡಲಾದ ಸಂಗೀತ, ಗಾಯನ, ನೃತ್ಯದ ಸ್ಪರ್ಶವು ನೋಡುಗರ ಮನ ತಣಿಸುತ್ತಿದೆ.

ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿ 255 ವಚನಕಾರರ 22 ಸಾವಿರ ವಚನಗಳನ್ನು ಈ ಮೊಬೈಲ್‌ ಆ್ಯಪ್‌ಗೆ ಅಳವಡಿಸಲಾಗಿದೆ. ಸದ್ಯ ವಿಶ್ವದಾದ್ಯಂತ 41 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿವೆ. ಇಲ್ಲಿಯವರೆಗೂ ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮರಾಠಿ ಭಾಷೆಗಳಲ್ಲಿ ವಚನ ಅಳವಡಿಸಲಾಗಿತ್ತು, ಈಗ ಉರ್ದು ಭಾಷೆಯಲ್ಲೂ ದೊರೆಯುತ್ತಿವೆ. ಜರ್ಮನ್‌ ಭಾಷಾಂತರ ಕೆಲಸವೂ ನಡೆಯುತ್ತಿದೆ.

2022ರಲ್ಲಿ ಲೋಕಾರ್ಪಣೆಗೊಂಡ ಮೊಬೈಲ್‌ ಆ್ಯಪ್‌ ಹೊಸ ಲಯ, ವಿನ್ಯಾಸದೊಂದಿಗೆ ವಚನಪ್ರೇಮಿಗಳ ಮನ ತಲುಪುತ್ತಿದೆ. ಇತ್ತೀಚೆಗೆ ಸಂಗೀತ, ನೃತ್ಯ ರೂಪವನ್ನೂ ನೀಡಲಾಗಿದ್ದು, ಒಂದೇ ಕ್ಲಿಕ್‌ನಲ್ಲಿ ಕೇಳುಗರು ಇಷ್ಟದ ವಚನಗಳ ಗಾಯನವನ್ನು ಕೇಳಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಚನಗಳ ನೃತ್ಯವನ್ನೂ ವಿಡಿಯೊ ಮೂಲಕ ವೀಕ್ಷಿಸಬಹುದಾಗಿದೆ.

ADVERTISEMENT

ಆ್ಯಪ್‌ನ ಮುಖಪುಟ ತೆರೆದುಕೊಳ್ಳುತ್ತಿದ್ದಂತೆ ಶಿವಶರಣರ ಭಾವಚಿತ್ರಗಳು ಕಾಣಿಸುತ್ತವೆ. ಇಷ್ಟದ ಶರಣರ ಚಿತ್ರ ಸ್ಪರ್ಶಿಸಿದರೆ ಅವರ ವಚನಗಳು ಮುಂದೆ ಬರುತ್ತವೆ. ಪುಟದ ಕೆಳಗೆ ಭಾಷೆಯ ಕೊಂಡಿಗಳಿದ್ದು ಆಯಾ ಭಾಷೆಯಲ್ಲಿ ಓದಬಹುದಾಗಿದೆ. ಪ್ರತಿ ವಚನದ ಮುಂದೆ ಸಂಗೀತ ಸಂಕೇತವಿದ್ದು ಅದನ್ನು ಸ್ಪರ್ಶಿಸಿ ಗಾಯನ ಕೇಳಬಹುದು, ವಿಡಿಯೊ ಕೊಂಡಿ ತೆರೆದರೆ ಯೂಟ್ಯೂಬ್‌ ಲಿಂಕ್‌ ಮೂಲಕ ನೃತ್ಯವನ್ನೂ ವೀಕ್ಷಿಸಬಹುದು.

ಈಗಾಗಲೇ ಹಾಡಿರುವ ಹಲವು ಖ್ಯಾತನಾಮ ಗಾಯಕರ ಗಾಯನವನ್ನೇ ಆ್ಯಪ್‌ಗೆ ಬಳಸಿಕೊಳ್ಳಲಾಗಿದೆ. ಗಾಯಕರ ವಿವರ ನೀಡಲಾಗಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರ ಬಹುತೇಕ ವಚನಗಳ ಸಂಗೀತ ರೂಪ ಆ್ಯಪ್‌ನಲ್ಲಿ ದೊರೆಯುತ್ತಿದೆ. ಇತರ ವಚನಕಾರರ ಗಾಯನ ಸಂಗ್ರಹ ಹಾಗೂ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ವಚನಗಳನ್ನು ಓದಿ, ಕೇಳಿ, ನೋಡಿ ಹಲವು ದೇಶಗಳ, ಹಲವು ಧರ್ಮಗಳ ಜನರು ಸಂದೇಶ ಪ್ರಕಟಿಸಿದ್ದಾರೆ. ಸಂದೇಶಗಳನ್ನು ಆ್ಯಪ್‌ನಲ್ಲೇ ನೋಡಬಹುದಾಗಿದೆ.

ಆ್ಯಪ್‌ ಸೇರಿದ ತಾಳೆಗರಿ: ತರಳಬಾಳು ಬೃಹನ್ಮಠದ ಸಂಗ್ರಹದಲ್ಲಿದ್ದ ತಾಳೆಗರಿ ವಚನಗಳನ್ನು ಆ್ಯಪ್‌ನಲ್ಲಿ ಅಳವಡಿಸಲಾಗಿದೆ. ವಚನದ ಜೊತೆಗೆ ತಾಳೆಗರಿಯೂ ತೆರೆದುಕೊಳ್ಳುವಂತೆ ಅದನ್ನು ಸ್ಕ್ಯಾನ್‌ ಮಾಡಿ ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಬೃಹನ್ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸಂಗ್ರಹದ ತಾಳೆಗರಿ, ದೇವಕವಿ ಮರಳುಸಿದ್ದೇಶ್ವರ ಕಾವ್ಯವನ್ನು ಆ್ಯಪ್‌ನಲ್ಲಿ ಸೇರಿಸಲಾಗಿದೆ.

ತಾಂತ್ರಿಕವಾಗಿ ಅಪಾರ ನೈಪುಣ್ಯ ಹೊಂದಿರುವ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸ್ವತಃ ಪ್ರೋಗ್ರಾಮಿಂಗ್‌ ಕೋಡಿಂಗ್‌ ಅರಿತು ಆ್ಯಪ್‌ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರೊಂದಿಗೆ ದೇಶ– ವಿದೇಶಗಳಲ್ಲಿರುವ ಶಿಷ್ಯಂದಿರು, ತಜ್ಞರ ತಂಡ ಆ್ಯಪ್‌ ರೂಪಿಸುವಲ್ಲಿ ಶ್ರಮಿಸಿದೆ. ಪ್ಲೇ ಸ್ಟೋರ್‌ನಲ್ಲಿ ‘ವಚನ ಸಂಪುಟ’ ಎಂದು ಟೈಪಿಸಿ, ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ‘ಶಿವ’ ಹೆಸರಿನಲ್ಲಿ ವಿನ್ಯಾಸ ಮಾಡಿರುವ ಆ್ಯಪ್‌ ಚಿತ್ರ ಮನ ಸೆಳೆಯುತ್ತದೆ.

ತ್ರಿಪದಿ ಕಗ್ಗ ಕೀರ್ತನೆ

‘ಶಿವಶರಣರ ವಚನ ಸಂಪುಟ’ ಆ್ಯಪ್‌ನಲ್ಲೇ ಸರ್ವಜ್ಞನ ತ್ರಿಪದಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗಗಳನ್ನೂ ಅಳವಡಿಸಿರುವುದು ವಿಶೇಷವಾಗಿದೆ. ಈಗಾಗಲೇ  ಸರ್ವಜ್ಞನ 1925 ತ್ರಿಪದಿ 925 ಕಗ್ಗಗಳನ್ನು ಸೇರಿಸಲಾಗಿದೆ. ‘ಮುಂದೆ ಪುರಂದರದಾಸರ ದೇವರನಾಮ ಕನಕದಾಸರ ಕೀರ್ತನೆಗಳನ್ನೂ ಅಳವಡಿಸಲಾಗುವುದು’ ಎಂದು ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
1994ರಲ್ಲೇ ಪಾಣಿನಿ ಮಹರ್ಷಿಯ ಅಷ್ಟಧ್ಯಾಯ ಸೂತ್ರಗಳನ್ನು ‘ಗಣಕಾಷ್ಟಧ್ಯಾಯ’ ತಂತ್ರಾಂಶಕ್ಕೆ ಅಳವಡಿಸಿದ್ದೆ. ನಂತರ ‘ಗಣಕ ವಚನ ಸಂಪುಟ’ ಕಂಪ್ಯೂಟರ್‌ ಆ್ಯಪ್‌ ರೂಪಿಸಿದ್ದೆ. ಮುಂದುವರಿದು ‘ಶಿವಶರಣರ ವಚನ ಸಂಪುಟ’ ಮೊಬೈಲ್‌ ಆ್ಯಪ್‌ ಬಂದಿದೆ.
-ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪೀಠಾಧಿಪತಿ ತರಳಬಾಳು ಬೃಹನ್ಮಠ ಸಿರಿಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.