ADVERTISEMENT

ಶೂಟೌಟ್‌ ಸೂಚನೆಗೆ ಟೀಕೆ, ಕ್ಷಮೆಯಾಚನೆಗೆ ಬಿಎಸ್‌ವೈ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:25 IST
Last Updated 25 ಡಿಸೆಂಬರ್ 2018, 17:25 IST
   

ಬೆಂಗಳೂರು: ಜೆಡಿಎಸ್‌ ಕಾರ್ಯಕರ್ತನ ಹತ್ಯೆ ಮಾಡಿದ ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗೆ ನೀಡಿದ ಸೂಚನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

‘ಈ ಹೇಳಿಕೆ ಭಾವಾವೇಶದಿಂದ ಹೇಳಿದ್ದೇ ಹೊರತು, ಮುಖ್ಯಮಂತ್ರಿಯಾಗಿ ಆದೇಶ ನೀಡಿದ್ದಲ್ಲ’ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದರೂ, ರಾಷ್ಟ್ರೀಯ ವಾಹಿನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ‘ಮುಖ್ಯಮಂತ್ರಿಯವರು ತಾವು ನೀಡಿರುವ ಹೇಳಿಕೆಯ ಬಗ್ಗೆ ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು. ಈ ಹೇಳಿಕೆಯು ವ್ಯಾಪಕ ಪರಿಣಾಮ ಉಂಟು ಮಾಡುವಂತಹದ್ದು, ಪೊಲೀಸರಿಗೆ ಗುಂಡಿಕ್ಕಲು ಮುಕ್ತ ಅವಕಾಶ ನೀಡಿದಂತಾಗಿದೆ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿಯಾಗಿ ಹೇಳಿಲ್ಲ. ಭಾವಾವೇಶಕ್ಕೆ ಒಳಗಾಗಿ ಹೇಳಿದ್ದು ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಅವರು ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಆಗಿರದಿದ್ದರೆ ಬೇರೆ ಮಾತು’ ಎಂದು ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಅರಾಜಕತೆಗೆ ತಳ್ಳುವ ಯತ್ನ: ‘ಮುಖ್ಯಮಂತ್ರಿ ಹೇಳಿಕೆ ರಾಜ್ಯವನ್ನು ಅರಾಜಕತೆಯತ್ತ ದೂಡುವ ಯತ್ನ’ ಎಂದು ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಟ್ವೀಟ್‌ ಮಾಡಿದ್ದಾರೆ.

‘ಪೊಲೀಸರಿಗೆ ಬಹಿರಂಗ ಕರೆ ನೀಡುವ ಮೂಲಕ ವ್ಯವಸ್ಥೆಯನ್ನೇ ಹಿಂಸೆಯಲ್ಲಿ ತೊಡಗಲು ಪ್ರಚೋದನೆ ನೀಡಿದಂತಾಗಿದೆ. ಇದು ನಿಜಕ್ಕೂ ಸರ್ವಾಧಿಕಾರಿ ಧೋರಣೆ’ ಎಂದು ಅವರು ಕಿಡಿ ಕಾರಿದ್ದಾರೆ.

**

ಕುಮಾರಸ್ವಾಮಿ ಅವರಿಂದ ಬಂದ ‘ಶೂಟ್ ಮಾಡಿ’ ಎಂಬ ಮಾತು, ಸರ್ಕಾರದ ಅಸ್ಥಿರತೆಯಿಂದಾಗಿ ಅವರು ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ

–ಪ್ರಹ್ಲಾದ ಜೋಶಿ,ಸಂಸದ

**

ಕುಮಾರಸ್ವಾಮಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತವರೇ ಈ ಹೇಳಿಕೆ ನೀಡುವುದು ಎಷ್ಟು ಸರಿ

–ಶ್ರೀರಾಮುಲು,ಶಾಸಕ

**

ಮುಖ್ಯಮಂತ್ರಿಯಾದವರು ಯಾವುದೇ ಸಂದರ್ಭದಲ್ಲೂ ಭಾವಾವೇಶದಿಂದ ಮಾತನಾಡಬಾರದು. ಆದರೆ, ಕುಮಾರಸ್ವಾಮಿ ತಮ್ಮ ಹುದ್ದೆಯ ಘನತೆ ಮರೆತಿದ್ದಾರೆ.

–ಜಗದೀಶ ಶೆಟ್ಟರ್,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.