ADVERTISEMENT

ಹೋಟೆಲ್‌ಗಳಿಗೂ ಹಾಲಿನ ಕೊರತೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 20:21 IST
Last Updated 9 ಮಾರ್ಚ್ 2023, 20:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಾಲು ಉತ್ಪಾದನೆ ಕುಸಿತದ ಬಿಸಿ ಹೋಟೆಲ್‌ ಉದ್ಯಮಕ್ಕೂ ತಟ್ಟಿದೆ.

ನಗರದ ಹೋಟೆಲ್‌ಗಳಿಗೆ ಪ್ರತಿನಿತ್ಯ ಸುಮಾರು 4.5 ಲಕ್ಷ ಲೀಟರ್‌ ಹಾಲು ಮತ್ತು 3 ಲಕ್ಷ ಲೀಟರ್‌ ಮೊಸರು ಅಗತ್ಯವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಗತ್ಯವಿರುವಷ್ಟು ಹಾಲು ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ ಎಂದು ಹೋಟೆಲ್‌ ಮಾಲೀಕರು
ದೂರಿದ್ದಾರೆ.

ಕೋವಿಡ್‌ ನಂತರ ಹೋಟೆಲ್‌ಗಳಲ್ಲಿ ಮತ್ತೆ ವಹಿವಾಟು ಹೆಚ್ಚಿದೆ. ಹೀಗಾಗಿ, ಹಾಲಿನ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಯಷ್ಟು ಪೂರೈಕೆಯಾಗದಿದ್ದರೆ ಖಾಸಗಿ ಸಂಸ್ಥೆಗಳಿಂದ ಖರೀದಿಸುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಾರೆ.

ADVERTISEMENT

‘ನಂದಿನಿ ಬ್ರ್ಯಾಂಡ್‌ ಗುಣಮಟ್ಟದ ಹಾಲು. ನಮ್ಮ ನಾಡಿನ ಹೆಮ್ಮೆ. ಖಾಸಗಿ ಸಂಸ್ಥೆಗಳ ಹಾಲು ಖರೀದಿಸಲು ನಮಗೂ ಇಷ್ಟ ಇಲ್ಲ. ಆದರೆ, ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಬೇರೆ ರಾಜ್ಯಗಳಿಗೆ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಬೇಕು. ಆಗ ಇಲ್ಲಿಯೂ ಹಾಲು ಲಭ್ಯವಾಗುತ್ತದೆ. ಹೋಟೆಲ್‌ ಉದ್ಯಮಕ್ಕೆ ತೊಂದರೆಯಾಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಹೇಳಿದ್ದಾರೆ.

‘ಸರ್ಕಾರವು ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ರೂಪಿಸಬೇಕು ಮತ್ತು ಮನೆಗೊಂದು ಹಸು ಎನ್ನುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸದ್ಯಕ್ಕೆ ಖೋವಾ ಮತ್ತಿತರ ಉತ್ಪನ್ನಗಳ ತಯಾರಿಕೆಯನ್ನು ಕಡಿಮೆ ಮಾಡಬೇಕು. ಮದುವೆ ಸಮಾರಂಭಗಳಲ್ಲಿ ಹಾಲಿನ ಉತ್ಪನ್ನಗಳ ಸಿಹಿ ತಿಂಡಿ ಮಾಡುವುದನ್ನು ಸ್ವಲ್ಪ ದಿನಗಳ ಕಾಲ ತಡೆಯಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.