ADVERTISEMENT

ಷೋಕಾಸ್ ನೋಟಿಸ್‌: ಲೋಕಾಯುಕ್ತ ನ್ಯಾಯಾಧೀಶರಿಗೆ ಹೈಕೋರ್ಟ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 19:40 IST
Last Updated 10 ಜನವರಿ 2025, 19:40 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಸ್ವತಃ ‌‌ಹೈಕೋರ್ಟ್‌ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪ್ರಕರಣದ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ಕೋರ್ಟ್‌ನ ನ್ಯಾಯಾಧೀಶರು ಷೋಕಾಸ್ ನೋಟಿಸ್‌ ನೀಡಿರುವುದನ್ನು ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

‘ಸಿಸಿಎಚ್ 23ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಈ ಕ್ರಮ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಒಳಪಡುತ್ತದೆ. ಹೈಕೋರ್ಟ್‌ ನಿರ್ದೇಶನ ನೀಡದ ಹೊರತು ಎಸ್‌ಐಟಿಗೆ ಸಂಬಂಧಿಸಿದ ಯಾವುದೇ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸುವಾಗ ಎಚ್ಚರಿಕೆ ವಹಿಸಬೇಕು, ನಿಯಂತ್ರಣ ಕಾಪಾಡಿಕೊಳ್ಳಬೇಕು’ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಎಚ್ಚರಿಸಿದೆ.

ADVERTISEMENT

ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಮೊತ್ತದ ಅವ್ಯವಹಾರ ಆರೋಪದ ಪ್ರಕರಣದ ಆರೋಪಿಯಾಗಿದ್ದ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಗೆ ಸಿಬಿಐ ಅಧಿಕಾರಿ ಜೊತೆ ಇಬ್ಬರು ಎಸ್‌.ಪಿ ದರ್ಜೆಯ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ನೇಮಕ ಮಾಡಿದ್ದ ತನ್ನ ಆದೇಶವನ್ನು ಹೈಕೋರ್ಟ್‌ ಸ್ಥಿರೀಕರಿಸಿತ್ತು.

ಇದರ ಬೆನ್ನಲ್ಲೇ; ಮೂವರೂ ಎಸ್‌ಐಟಿ ಅಧಿಕಾರಿಗಳು ಪ್ರಕರಣದ ತನಿಖೆಗಾಗಿ ಮುಖ್ಯ ತನಿಖಾಧಿಕಾರಿಯೊಬ್ಬರನ್ನು ನೇಮಕ ಮಾಡಿಕೊಂಡಿದ್ದರು. ಇದಕ್ಕೆ ಲೋಕಾಯುಕ್ತ ನ್ಯಾಯಾಧೀಶರು ಷೋಕಾಸ್‌ ನೋಟಿಸ್ ಜಾರಿಗೆ ಆದೇಶಿಸಿದ್ದರು. ಈ ನೋಟಿಸ್ ನೀಡಿಕೆ ಕುರಿತಂತೆ ಎಸ್‌ಐಟಿ ಮಧ್ಯಂತರ ಅರ್ಜಿ ಸಲ್ಲಿಸುವ ಮೂಲಕ ಹೈಕೋರ್ಟ್‌ ಗಮನಕ್ಕೆ ತಂದಿತ್ತು.

ಶುಕ್ರವಾರ ಮಧ್ಯಂತರ ಅರ್ಜಿ‌ ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಮತ್ತು ರಾಜ್ಯದ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಅಗತ್ಯಬಿದ್ದಲ್ಲಿ ಎಸ್‌ಐಟಿ; ಬೇರೆ ಅಧಿಕಾರಿಗಳ ನೆರವು ಪಡೆಯಬಹುದು ಎಂಬ ಹೈಕೋರ್ಟ್‌ನ ಇದೇ ನ್ಯಾಯಪೀಠದ ಆದೇಶಕ್ಕೆ ಅನುಗುಣವಾಗಿಯೇ ಎಸ್ಐಟಿ ಬೇರೆ ಅಧಿಕಾರಿಗಳ ಸಹಾಯ ಪಡೆದಿದೆ. ಆದರೆ, ಲೋಕಾಯುಕ್ತ ನ್ಯಾಯಾಧೀಶರ ಕ್ರಮ ಹೈಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಲೋಕಾಯುಕ್ತ ನ್ಯಾಯಾಧೀಶರಿಗೆ ಎಚ್ಚರಿಕೆ ನೀಡಿತಲ್ಲದೆ, ‘ಜೀವಾ ಆತ್ಮಹತ್ಯೆಗೆ ಸಂಬಂಧಿಸಿ ಇದುವರೆಗೆ ನಡೆಸಿರುವ ತನಿಖಾ ವರದಿಯನ್ನು ಮುಂದಿನ ವಿಚಾರಣೆ ವೇಳೆಗೆ ಇದೇ ನ್ಯಾಯಪೀಠಕ್ಕೆ ಎಸ್‌ಐಟಿ ಮಂಡಿಸಬೇಕು’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.