
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಬುಧವಾರ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ನಮಿಸಿದರು. ಶಿವಸಿದ್ಧೇಶ್ವರ ಸ್ವಾಮೀಜಿ, ಟಿ.ಬಿ.ಜಯಚಂದ್ರ, ಡಾ.ಸಿ.ಎನ್.ಮಂಜುನಾಥ್, ಮಧುಸೂದನ ಸಾಯಿ, ವಿ.ಸೋಮಣ್ಣ, ಥಾವರಚಂದ್ ಗೆಹಲೋತ್, ಸಿದ್ಧಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ತುಮಕೂರು: ನಾಡಿನ ವಿವಿಧೆಡೆಗಳಿಂದ ಬಂದಿದ್ದ ಭಕ್ತ ಸಮೂಹ ಶಿವಕುಮಾರ ಸ್ವಾಮೀಜಿ ಸಂಸ್ಮರಣೋತ್ಸವಕ್ಕೆ ಸಾಕ್ಷಿಯಾಯಿತು. ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ನುಡಿನಮನದ ಮೂಲಕ ತ್ರಿವಿಧ ದಾಸೋಹಿಯ ಸೇವೆಯನ್ನು ಸ್ಮರಿಸಿದರು.
ಸಿದ್ಧಗಂಗಾ ಮಠದಲ್ಲಿ ಬುಧವಾರ ಶಿವಕುಮಾರ ಸ್ವಾಮೀಜಿ 7ನೇ ಸಂಸ್ಮರಣೋತ್ಸವವು ಭಕ್ತಿ, ಭಾವಗಳೊಂದಿಗೆ ನೆರವೇರಿತು. ಸ್ವಾಮೀಜಿ ಗದ್ದುಗೆಗೆ ನಮಿಸಿದ ಭಕ್ತರು ಅನ್ನ, ಅಕ್ಷರ, ಆಶ್ರಯ ನೀಡಿದ ಗುರುವನ್ನು ಸ್ಮರಿಸಿದರು. ಜೀವನಕ್ಕೆ ದಾರಿ ತೋರಿದ ಸಂತನಿಗೆ ಭಕ್ತಿ ಸಮರ್ಪಿಸಿದರು.
ಮುಂಜಾನೆಯಿಂದಲೇ ಮಠದತ್ತ ಹೆಜ್ಜೆ ಹಾಕಿದ ಸಾವಿರಾರು ಭಕ್ತರು ಗದ್ದುಗೆಯ ದರ್ಶನ ಪಡೆದರು. ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಗದ್ದುಗೆಗೆ ಪೂಜೆ ಸಲ್ಲಿಸಿದರು. ಸ್ವಾಮೀಜಿಯವರ ಸೇವೆಯನ್ನು ಮೆಲುಕು ಹಾಕಿದರು.
ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿರುವ ಶಿವಯೋಗಿ ಮಂದಿರದಲ್ಲಿ ಮುಂಜಾನೆ ಸಿದ್ಧಲಿಂಗ ಸ್ವಾಮೀಜಿ ಇಷ್ಟಲಿಂಗ ಪೂಜೆ, ಗದ್ದುಗೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದರು. ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆ ನೆರವೇರಿದವು. ಇಡೀ ದಿನ ಸ್ವಾಮೀಜಿಯವರ ನೆನಪಿನಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ಶಿವಕುಮಾರ ಸ್ವಾಮೀಜಿ ಭಾವಚಿತ್ರವನ್ನು ರುದ್ರಾಕ್ಷಿ ಮಂಟಪದಲ್ಲಿಟ್ಟು ಮಠದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಸುಮಂಗಲಿಯರು ಮೆರವಣಿಗೆಯಲ್ಲಿ ಕಳಸ ಹೊತ್ತು ಸಾಗಿದರು. ವಿವಿಧ ಜಾನಪದ ಕಲಾ ತಂಡಗಳು, ವಾದ್ಯ ಮೇಳಗಳು ಮೆರವಣಿಗೆಗೆ ಮೆರುಗು ತಂದವು.
ಪ್ರಸಾದ: ಸಹಸ್ರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರ ದಾಸೋಹ ನೆರವೇರಿತು. ಭಕ್ತರು ತಮ್ಮ ಗುರುವಿಗೆ ನಮಿಸಿ, ಪ್ರಸಾದ ಸೇವಿಸಿದರು.
‘ಸದಾ ಪ್ರಜ್ವಲಿಸುವ ದೀಪ’
ಕಾರ್ಯಕ್ರಮದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ‘ಶಿವಕುಮಾರ ಸ್ವಾಮೀಜಿ ಸದಾ ಪ್ರಜ್ವಲಿಸುವ ದೀಪದಂತಿದ್ದರು’ ಎಂದರು. ‘ಅವರು ನಾಡಿನ ಮಹಾನ್ ಸಂತ ತ್ಯಾಗಮಯಿ ಸರಳ ಜೀವಿ. ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಮುಡುಪಾಗಿಟ್ಟಿದ್ದರು. ದಾಸೋಹದ ಮೂಲಕ ನಾಡಿಗೆ ದೊಡ್ಡ ಕೊಡುಗೆ ಸಂದೇಶ ನೀಡಿದ್ದಾರೆ’ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.