ADVERTISEMENT

ರೈತ ಮಹಿಳಾ ಸಮಾವೇಶದಲ್ಲಿ ಸಿದ್ದರಾಮಯ್ಯ ಭರವಸೆ ಸುರಿಮಳೆ

ಕಾಂಗ್ರೆಸ್‌ ಗೆದ್ದರೆ ಸ್ತ್ರೀಶಕ್ತಿ ಸಂಘದ ಸಾಲಮನ್ನಾ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 13:15 IST
Last Updated 13 ಫೆಬ್ರುವರಿ 2023, 13:15 IST
   

ವೇಮಗಲ್‌ (ಕೋಲಾರ): ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರು, ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 1 ಲಕ್ಷದವರೆಗೆ ಹಾಗೂ ರೈತರಿಗೆ ₹ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಸಾಲದ ಕಂತು ಸಮರ್ಪಕವಾಗಿ ಪಾವತಿಸಿದ ಸ್ತ್ರೀಶಕ್ತಿ ಸಂಘಗಳ ಉಳಿದ ಸಾಲ ಮನ್ನಾ ಮಾಡಲಾಗುವುದು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದರು.

ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟಣದ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರೈತ ಮಹಿಳೆಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರೈತರಿಗೆ ಶೇ 3 ಬಡ್ಡಿ ದರದಲ್ಲಿ ನೀಡುತ್ತಿರುವ ₹ 10 ಲಕ್ಷದವರೆಗಿನ ಸಾಲವನ್ನು ₹ 20 ಲಕ್ಷಕ್ಕೆ ಏರಿಸಲಾಗುವುದು. ಹಾಲಿನ ಪ್ರೋತ್ಸಾಹ ಧನವನ್ನು ₹ 5ರಿಂದ 6 ಕ್ಕೆ ಹೆಚ್ಚಿಸಲಾಗುವುದು. ರೈತರಿಗೆ ಮಾರಕವಾಗಿರುವ ಎಪಿಎಂಸಿ ಕಾಯ್ದೆ ವಾಪಸ್‌ ಪಡೆಯುತ್ತೇವೆ’ ಎಂದರು.

ADVERTISEMENT

‘ಶ್ರೀಮಂತರ ಮೇಲಿನ ತೆರಿಗೆ ಕಡಿಮೆ ಮಾಡಿ ಬಡವರು, ಜನ ಸಾಮಾನ್ಯರಿಂದ ಹೆಚ್ಚು ತೆರಿಗೆ ವಸೂಲಿ ಮಾಡುತ್ತಿರುವುದು ಈ ದೇಶಕ್ಕೆ ಮಾರಕವಾಗಿದೆ. ಶ್ರೀಮಂತರ ಸಾಲ ಮನ್ನಾ ಮಾಡುವ ಬಿಜೆಪಿ ಸರ್ಕಾರಕ್ಕೆ ರೈತರ, ಮಹಿಳೆಯರ ಸಾಲ ಮನ್ನಾ ಮಾಡಲು ಏನು ರೋಗ’ ಎಂದು ಪ್ರಶ್ನಿಸಿದರು.

‘ಮೋದಿ ಬಂದ ಮೇಲೆ ಅಂಬಾನಿ, ಅದಾನಿ ಅವರಂಥ ಕುಳಗಳು ಹಾಗೂ ಉದ್ಯಮಿಗಳ ₹ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಆದರೆ, ಬಡವರು, ಮಹಿಳೆಯರ ಒಂದು ರೂಪಾಯಿ ಸಾಲಮನ್ನಾವನ್ನೂ ಮಾಡಿಲ್ಲ’ ಎಂದು ಟೀಕಾ ಪ್ರಹಾರ ನಡೆಸಿದರು.

‘ತೇಜಸ್ವಿ ಸೂರ್ಯ ಎಂಬ ಸಂಸದ ರೈತರ ಸಾಲ ಮನ್ನಾ ಮಾಡುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಾಗಿ ಹೇಳಿದ್ದಾರೆ. ಹಾಗಾದರೆ ಶ್ರೀಮಂತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಅನುಕೂಲವಾಗುತ್ತದೆಯೇ’ ಎಂದು ಕೇಳಿದರು.

‘ಹಳ್ಳಿಗಾಡಿನಲ್ಲಿ ಸಂಸಾರದ ಜವಾಬ್ದಾರಿ ಹೊತ್ತಿರುವ ಹೆಣ್ಣು ಮಕ್ಕಳು ಬೆಲೆ ಏರಿಕೆ ಬಿಸಿಯಿಂದ ಕಂಗಾಲಾಗಿದ್ದಾರೆ. ಬಿಜೆಪಿಯವರು ಯಾವತ್ತೂ ಮಹಿಳೆಯರಿಗೆ ನ್ಯಾಯಯುತ ಹಕ್ಕು ನೀಡುವ ಕೆಲಸ ಮಾಡಿಲ್ಲ. ಹೆಣ್ಣು ಮಕ್ಕಳು ಮನೆಗಳಿಗೇ ಸೀಮಿತ ಎಂಬ ಮನಸ್ಥಿತಿಯನ್ನು ಅವರು ಹೊಂದಿದ್ದಾರೆ’ ಎಂದು ಕುಟುಕಿದರು.

‘ಬಿಜೆಪಿಯವರು ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ದುರ್ಬಲ ವರ್ಗದ ಜನರಿಗೆ ಯಾವ ಕೆಲಸ ಮಾಡದೆ ಸಮಾಜದಲ್ಲಿ ದ್ವೇಷ ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ, ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಾಯಿ ಮಾತಿಗೆ ಸಬ್‌ಕಾ ಸಾಥ್‌, ಸಬ್‌ಕಾ‌ ವಿಕಾಸ್‌ ಎನ್ನುತ್ತಾರೆ. ಈ ವಿಕಾಸದೊಳಗೆ ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು, ರೈತರು, ಮಹಿಳೆಯರು ಬರುವುದಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ಡಿಸಿಸಿ ಬ್ಯಾಂಕ್ ನಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದಿದ್ದ ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಘ ಹಾಗೂ ರೈತ ಮಹಿಳೆಯರನ್ನು ಈ ಕಾರ್ಯಕ್ರಮಕ್ಕೆ ಸೇರಿಸಲಾಗಿತ್ತು. ಈ ಜವಾಬ್ದಾರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೊತ್ತಿದ್ದರು. ಇದೇ ಕಾರಣದಿಂದ ಡಿಸಿಸಿ ಬ್ಯಾಂಕ್‌ ಅನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ಟೀಕಿಸಿವೆ.

ಕಳೆದ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ಅವರ ನಾಲ್ಕನೇ ಭೇಟಿ ಇದಾಗಿದೆ. ಬೆಳಿಗ್ಗೆ ನರಸಾಪುರ ಹೋಬಳಿಯ ಬೆಳ್ಳೂರಿನಲ್ಲಿ ಅಂತರರಾಷ್ಟ್ರೀಯ ಯೋಗ ಕೇಂದ್ರಕ್ಕೆ ಭೇಟಿ ನೀಡಿ ದಿವಂಗತ ಬಿ.ಕೆ.ಎಸ್.ಅಯ್ಯಂಗಾರ್ ಅವರಿಗೆ ಗೌರವ ಸಮರ್ಪಿಸಿದರು. ಬಳಿಕ ವೇಮಗಲ್‌ನಲ್ಲಿ ಮಸೀದಿ ಹಾಗೂ ದೇಗುಲಕ್ಕೆ ಭೇಟಿ ನೀಡಿದರು.

ವಾರ್‌ ರೂಂಗೆ ಚಾಲನೆ:

ಸಂಜೆ ಕೋಲಾರದ ಟೇಕಲ್‌ ರಸ್ತೆಯ ಸಮೃದ್ಧಿ ಬಡಾವಣೆಯಲ್ಲಿ ಕೋಲಾರ ಕ್ಷೇತ್ರದ ಕಾಂಗ್ರೆಸ್‌ನ ಸುಸಜ್ಜಿತ ‘ವಾರ್‌ ರೂಮ್‌‘ ಉದ್ಘಾಟಿಸಿದರು. ಇಲ್ಲಿಂದಲೇ ಕ್ಷೇತ್ರದ ಚುನಾವಣಾ ಕೆಲಸ, ಪ್ರಚಾರದ ಯೋಜನೆ ರೂಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.