ಸಿದ್ದರಾಮಯ್ಯ
– ಪ್ರಜಾವಾಣಿ ಚಿತ್ರ
ಸುವರ್ಣ ವಿಧಾನಸೌಧ (ಬೆಳಗಾವಿ): ನಾಯಕತ್ವ ಬದಲಾವಣೆ ವಿಷಯ ಚರ್ಚೆ ನಡೆಯುತ್ತಿದ್ದಾಗ ಸಚಿವರು ಹಾಗೂ ಕಾಂಗ್ರೆಸ್ ಸದಸ್ಯರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತರು.
‘ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಯಾವುದೇ ಚರ್ಚೆ ಆಗಿಲ್ಲ. ಈ ಚರ್ಚೆಯೇ ಅನವಶ್ಯಕ’ ಎಂದು ಪ್ರತಿಪಾದಿಸಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಆರ್.ವಿ. ದೇಶಪಾಂಡೆ, ‘ಎರಡೂವರೆ ವರ್ಷ ಎಂಬುದೆಲ್ಲ ಇಲ್ಲ. ಉಳಿದೆಲ್ಲವೂ ಅನವಶ್ಯಕ ಚರ್ಚೆ. ಇದನ್ನು ಇಲ್ಲಿಗೆ ನಿಲ್ಲಿಸಿ’ ಎಂದು ಸಲಹೆ ನೀಡಿದರು.
ಅವರಿಗೆ ದನಿಗೂಡಿಸಿದ ಕಾಂಗ್ರೆಸ್‌ನ ಅಪ್ಪಾಜಿ ಸಿ.ಎಸ್. ನಾಡಗೌಡ, ‘ಮುಖ್ಯಮಂತ್ರಿ ಸ್ಥಾನ ಬದಲಾವಣೆ ಇದ್ದಿದ್ದರೆ ಕಾಂಗ್ರೆಸ್ ಶಾಸಕರ ಬಳಿ ಚರ್ಚೆ ಆಗುತ್ತಿತ್ತು. ನಮ್ಮ ಬಳಿ ಆ ಕುರಿತು ಚರ್ಚೆಯೇ ಆಗಿಲ್ಲ’ ಎಂದು ಹೇಳಿದರು.
‘ನಿಮ್ಮಪ್ಪನಾಣೆ ಅಧಿಕಾರಕ್ಕೆ ಬರಲ್ಲ’:
‘ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ನಿಮ್ಮಪ್ಪನಾಣೆ ನೀವು ಅಧಿಕಾರಕ್ಕೆ ಬರುವುದಿಲ್ಲ. 2028ಕ್ಕೂ ನಾವೇ. 2033ಕ್ಕೂ ನಾವೇ ಅಧಿಕಾರಕ್ಕೆ ಬರುವುದು’ ಎಂದು ಸಿದ್ದರಾಮಯ್ಯ ಅವರು ಬಿಜೆಪಿಯವರನ್ನು ಉದ್ದೇಶಿಸಿ ಗುಡುಗಿದರು.
ವಿಪಕ್ಷದ ನಾಯಕ ಆರ್. ಅಶೋಕ, ‘ಯಡಿಯೂರಪ್ಪ ಸಿ.ಎಂ ಆಗುವುದಕ್ಕೂ ಮೊದಲು ನೀವು ಹೀಗೆ ಹೇಳಿದ್ದೀರಿ. ಆದರೆ, ಯಡಿಯೂರಪ್ಪ ಐದು ಬಾರಿ ಮುಖ್ಯಮಂತ್ರಿ ಆದರು’ ಎಂದರು.
ಸಿದ್ದರಾಮಯ್ಯ, ‘ಅದಕ್ಕೆ ಅವರನ್ನು ಮುಖ್ಯಮಂತ್ರಿ ಆಗಿ ಐದು ವರ್ಷ ಪೂರ್ಣಗೊಳಿಸಲು ಬಿಡಲಿಲ್ಲ’ ಎಂದು ತಿರುಗೇಟು ನೀಡಿದರು. ಅದಕ್ಕೆ ಅಶೋಕ, ‘ಈಗ ಎರಡೂವರೆ ವರ್ಷದ ನಂತರ ನೀವು ಬದಲಾಗುತ್ತೀರಿ ಎಂಬ ಮಾಹಿತಿಯಿದೆ’ ಎಂದು ಕುಟುಕಿದರು.
ಆಕ್ರೋಶಗೊಂಡ ಸಿದ್ದರಾಮಯ್ಯ, ‘ನೀನು ವಿರೋಧ ಪಕ್ಷದ ನಾಯಕನಾಗಿ ಐದು ವರ್ಷ ಇರುತ್ತೀಯಾ’ ಎಂದು ಪ್ರಶ್ನಿಸಿದರು. ಅದಕ್ಕೆ ಬಿಜೆಪಿ ಶಾಸಕರು ಒಕ್ಕೊರಲಿನಿಂದ, ‘ಅಶೋಕ ಅವರೇ ಐದು ವರ್ಷ ವಿರೋಧ ಪಕ್ಷದ ನಾಯಕರು. ನಿಮ್ಮ ಕಥೆ ಹೇಳಿ’ ಎಂದು ಕಾಲೆಳೆದರು.
ಆಗ ಸಿದ್ದರಾಮಯ್ಯ, ‘ಯಡಿಯೂರಪ್ಪ ಅವರಿಗೂ ಇದೇ ರೀತಿ ಹೇಳುತ್ತಿದ್ದೀರಿ. ಆದರೆ, ಈಗ ಎಲ್ಲವೂ ಅನವಶ್ಯಕ ಚರ್ಚೆ ಬಿಡಿ’ ಎಂದರು.
ತೋಳು ತಟ್ಟಿ ಹೇಳಿ: ಮುನಿರತ್ನ ಸವಾಲು
‘ಈಗಲೂ ತೋಳು ತಟ್ಟಿ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿ’ ಎಂದು ಬಿಜೆಪಿಯ ಮುನಿರತ್ನ ಆಗ್ರಹಿಸಿದರು. ಚರ್ಚೆಯ ವೇಳೆ ಮಧ್ಯಪ್ರವೇಶಿಸಿದ ಮುನಿರತ್ನ ಅವರು ತಮ್ಮ ತೋಳು ತಟ್ಟುತ್ತಾ, ‘ಸಿದ್ದರಾಮಯ್ಯ ಅವರು ಹಿಂದೆಲ್ಲ ಈ ರೀತಿ ತೋಳು ತಟ್ಟಿ ಸವಾಲು ಹಾಕುತ್ತಿದ್ದರು. ಈಗಲೂ ಅದನ್ನು ಹೇಳಲಿ’ ಎಂದು ತಮ್ಮ ಕಡು ವಿರೋಧಿ ಡಿ.ಕೆ.ಶಿವಕುಮಾರ್ ಅವರನ್ನು ಕೆಣಕುವಂತೆ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.