ADVERTISEMENT

ಪಿಎಸ್ಐ ನೇಮಕ ಹಗರಣ| ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ವಜಾ ಮಾಡಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 6:23 IST
Last Updated 30 ಏಪ್ರಿಲ್ 2022, 6:23 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: 'ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಆರೋಪಿ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿರುವ, ಸಾಲು ಸಾಲು ವೈಫಲ್ಯಗಳ ಸರದಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ತಕ್ಷಣ ಕಿತ್ತುಹಾಕಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

'ರಾಜ್ಯ ಸರ್ಕಾರವೇ ಅಡಿಯಿಂದ ಮುಡಿವರೆಗೆ ಭ್ರಷ್ಟಗೊಂಡಿರುವಾಗ ಪಿಎಸ್‌ಐ ನೇಮಕಾತಿ ಹಗರಣದ ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಾರದು. ಹೈಕೋರ್ಟ್ ನ್ಯಾಯಮೂರ್ತಿಯ ಮೇಲುಸ್ತುವಾರಿಯ ತನಿಖೆಯೊಂದೇ ಪರಿಹಾರ' ಎಂದು ಅವರು ಹೇಳಿದ್ದಾರೆ.

'ಪಿಎಸ್‌ಐ ನೇಮಕಾತಿ ಪರೀಕ್ಷೆ ರದ್ದುಗೊಳಿಸುವ ಮೂಲಕ ನಡೆದಿರುವ ಅಕ್ರಮವನ್ನು ಒಪ್ಪಿಕೊಂಡ ಆರಗ ಜ್ಞಾನೇಂದ್ರ, ಯಾವ ನೈತಿಕತೆ ಆಧಾರದಲ್ಲಿ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ' ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

'ಭ್ರಷ್ಟರು, ಕೊಲೆಗಡುಕರು, ಅತ್ಯಾಚಾರಿಗಳನ್ನು‌ ಸಮರ್ಥಿಸುವುದೇ ತನ್ನ ಕರ್ತವ್ಯ ಎಂದು ಗೃಹ ಸಚಿವರು ತಿಳಿದುಕೊಂಡಂತಿದೆ. ಇಂತಹ ವಿಫಲ, ನಿಷ್ಕ್ರಿಯ 'ಚೌಕಿದಾರ'ನಿಂದ ಪೊಲೀಸ್ ಇಲಾಖೆಯೇ ಸುರಕ್ಷಿತವಾಗಿ ಇರಲಾರದು' ಎಂದಿದ್ದಾರೆ.

'ಆರಗ ಜ್ಞಾನೇಂದ್ರ ಅವರೇ ಗೃಹಸಚಿವರಾಗಿದ್ದು ಪಿಎಸ್‌ಐ ನೇಮಕಾತಿ ಮರುಪರೀಕ್ಷೆ ನಡೆದರೆ ಜ್ಞಾನೇಂದ್ರರಂಥ ಅಸಮರ್ಥ, ಅಪ್ರಾಮಾಣಿಕ, ನಿಷ್ಕ್ರಿಯರೇ ಪಿಎಸ್ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ. ಪಿಎಸ್ಐ ನೇಮಕಾತಿಗೆ ಸರ್ಕಾರ ಯಾವ ಆಧಾರದಲ್ಲಿ ಮರುಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದೆ ಎನ್ನುವುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆಯೇ? ಹಾಗಿದ್ದರೆ ಆ ವರದಿ ಬಿಡುಗಡೆ ಮಾಡಿ ' ಎಂದೂ ಆಗ್ರಹಿಸಿದ್ದಾರೆ.

'ಮರುಪರೀಕ್ಷೆಯ ನಿರ್ಧಾರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಲಿಕ್ಕಾಗಿಯೇ? ಇಲ್ಲವೇ ಹಗರಣವನ್ನು ಮುಚ್ಚಿಹಾಕಿ ದೊಡ್ಡ ತಲೆಗಳನ್ನು ಉಳಿಸಲಿಕ್ಕಾಗಿಯೇ? ಪಿಎಸ್ಐ ನೇಮಕಾತಿ ಹಗರಣದ ಸೂತ್ರಧಾರಿ ದಿವ್ಯಾ ಹಾಗರಗಿ ಬಂಧನವಾದ ತಕ್ಷಣ ಮರುಪರೀಕ್ಷೆಯ ನಿರ್ಧಾರದ ಹಿಂದಿನ‌ ರಹಸ್ಯ ಏನು? ಆಕೆ ನೀಡಿರುವ ಹೇಳಿಕೆಯಲ್ಲಿ ಅಂತಹ ಸ್ಪೋಟಕ ಸಂಗತಿಗಳೇನಿದೆ' ಎಂದೂ ಪ್ರಶ್ನಿಸಿದ್ದಾರೆ.

'ಈ ಹಗರಣವನ್ನು ನಮ್ಮ ಪಕ್ಷ ಬಯಲಿಗೆಳೆದಾಗ ಬಾಯಿಗೆ ಬಂದಂತೆ ತಲೆಗೊಬ್ಬರಂತೆ ಮಾತನಾಡಿದ್ದ ಬಿಜೆಪಿ ನಾಯಕರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ?ಭ್ರಷ್ಟಾಚಾರ, ಅಪ್ರಾಮಾಣಿಕತೆಮತ್ತು ನಿಷ್ಕ್ರಿಯತೆಯನ್ನುಪ್ರಶ್ನಿಸದೆ ಇದ್ದರೆ ಕೊನೆಗೆ ಈ ಪಿಡುಗಿಗೆ ಬಹುಸಂಖ್ಯೆಯಲ್ಲಿರುವ ಪ್ರಾಮಾಣಿಕರೇ ಕಷ್ಟ-ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಪಿಎಸ್‌ಐ ನೇಮಕಾತಿ ಅಕ್ರಮ ಸಾಕ್ಷಿ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.