ADVERTISEMENT

ಭ್ರಷ್ಟಾಚಾರ ಆರೋಪ: ಸರ್ಕಾರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ

ಮುಖ್ಯಮಂತ್ರಿ ರಾಜೀನಾಮೆಗೆ ಡಿ.ಕೆ. ಶಿವಕುಮಾರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 1:27 IST
Last Updated 2 ಏಪ್ರಿಲ್ 2021, 1:27 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ನೇರ ಆರೋಪ ಮಾಡಿರುವುದರಿಂದ ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಯನ್ನು ವಜಾಗೊಳಿಸಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬಿಜೆಪಿ ಸರ್ಕಾರದಲ್ಲಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಕ್ರಮಗಳ ಕುರಿತು ವಿರೋಧ ಪಕ್ಷದ ನಾಯಕನಾಗಿ ನಾನು ಮಾಡುತ್ತಾ ಬಂದಿರುವ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯ ಒದಗಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಈಶ್ವರಪ್ಪ ಅವರು ಜೀವನದಲ್ಲಿ ಮೊದಲ ಬಾರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕೀಯ ಹಿತಾಸಕ್ತಿಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಸಾರಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ. ಅವರೂ ಮಾತಿಗೆ ಬದ್ಧರಾಗಿ ಉಳಿಯಬೇಕು. ಭ್ರಷ್ಟಾಚಾರ ಒಂದು ಇಲಾಖೆಗೆ ಸೀಮಿತವಾಗಿಲ್ಲ. ಇಡೀ ಸರ್ಕಾರವನ್ನೇ ಆವರಿಸಿಕೊಂಡಿದೆ. ಬಿಜೆಪಿ ವರಿಷ್ಠರು ಈಶ್ವರಪ್ಪನವರ ಬಾಯಿ ಮುಚ್ಚಿಸಲು ಯತ್ನಿಸದೆ ಇತರ ಸಚಿವರೂ ಮುಕ್ತವಾಗಿ ಮಾತನಾಡಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಈಶ್ವರಪ್ಪ ಅವರು ರಾಜ್ಯಪಾಲರಿಗೆ ನೀಡಿರುವ ಆರೋಪಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೂ ಕಳುಹಿಸಿದ್ದಾರೆ. ನಮ್ಮ ಸರ್ಕಾರವನ್ನು ಶೇ 10 ಪರ್ಸೆಂಟ್ ಸರ್ಕಾರ ಎಂದು ಹೀಗಳೆದಿದ್ದ ಪ್ರಧಾನಿಯವರೇ, ನಿಮ್ಮದೇ ಸಚಿವರು ನಿಮ್ಮ ಸರ್ಕಾರದ ಜಾತಕ ಕಳಿಸಿದ್ದಾರೆ. ಪರಿಶೀಲಿಸಿ ನೀವೇ ರೇಟಿಂಗ್‌ ಕೊಟ್ಟುಬಿಡಿ. ‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಎಂಬ ನಿಮ್ಮ ಜಗದ್ವಿಖ್ಯಾತ ಘೋಷಣೆಯನ್ನು ‘ಮೈ ಬಿ ಖಾವೂಂಗಾ, ತುಮ್‌ ಬಿ ಖಾವೋ’ ಎಂಬುದಾಗಿ ಬದಲಿಸಿಬಿಡಿ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸಿಎಂ ರಾಜೀನಾಮೆ ನೀಡಲಿ: ‘ಸಚಿವ ಈಶ್ವರಪ್ಪ ಅವರೇ ಭ್ರಷ್ಟಾಚಾರದ ಆರೋಪ ಮಾಡಿರುವುದರಿಂದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

‘ರಾಜ್ಯದ ಇತಿಹಾಸದಲ್ಲಿ ಸಚಿವರೊಬ್ಬರು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು ಇದೇ ಮೊದಲು. ₹1,200 ಕೋಟಿ ಅನುದಾನ ಬಿಡುಗಡೆ ಕುರಿತು ಈಶ್ವರಪ್ಪ ಆರೋಪ ಮಾಡಿದ್ದಾರೆ. ಸರ್ಕಾರದ ಒಳಗಿರುವ ಹುಳುಕುಗಳು ಒಂದೊಂದಾಗಿ ಹೊರಬರುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.