ADVERTISEMENT

Karnataka politics | ಮತ್ತೊಂದು ಉಪಾಹಾರ ಕೂಟ: ಡಿಕೆಶಿ ಮನೆಗೆ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
<div class="paragraphs"><p>&nbsp;ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್</p></div>

 ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್

   

ಬೆಂಗಳೂರು: ತಮ್ಮ ಮಧ್ಯೆ ಯಾವುದೇ ಭಿನ್ನಮತ ಇಲ್ಲ ಎಂದು ಬಿಂಬಿಸಲು ಉಪಾಹಾರ ಕೂಟ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೊಂದು ಉಪಾಹಾರ ಕೂಟದಲ್ಲಿ ಜತೆ ಸೇರಲಿದ್ದಾರೆ.

ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಸದಾಶಿವನಗರದಲ್ಲಿರುವ ತಮ್ಮ  ಮನೆಗೆ ಮಂಗಳವಾರ ಬೆಳಗ್ಗೆ 9.30ಕ್ಕೆ ಉ‍ಪಾಹಾರಕ್ಕೆ ಕರೆದಿದ್ದಾರೆ.

ADVERTISEMENT

ರಾಜ್ಯದಲ್ಲಿ ಸರ್ಕಾರದ ‘ನಾಯಕತ್ವ’ಕ್ಕಾಗಿ ಗುದ್ದಾಟ, ‘ಕೊಟ್ಟ ಮಾತು’ ಕುರಿತ ವಾಗ್ವಾದಗಳಿಂದಾಗಿ ಕಾವೇರಿದ್ದ ರಾಜಕಾರಣವನ್ನು ಮುಖ್ಯಮಂತ್ರಿ ಅಧಿಕೃತ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದಿದ್ದ ಮುಖ್ಯಮಂತ್ರಿ–ಉಪಮುಖ್ಯಮಂತ್ರಿ ಉಪಾಹಾರ ಕೂಟ ಸ್ವಲ್ಪಮಟ್ಟಿಗೆ ಶಮನ ಮಾಡಿತ್ತು. ಈಗ ಶಿವಕುಮಾರ್ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆ ‘ಅಧಿಕಾರ ಹಂಚಿಕೆಯ ಸೂತ್ರ’ದ ವಿಷಯ ಮುನ್ನೆಲೆಗೆ ಬಂದಿತ್ತು. ಇಬ್ಬರೂ ಸೇರಿದಂತೆ ಕೆಲ ಸಚಿವರು–ಶಾಸಕರು, ಕಾಂಗ್ರೆಸ್‌ ನಾಯಕರ ಹೇಳಿಕೆ–ಪ್ರತಿ ಹೇಳಿಕೆಗಳು ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದವು. ಸಮುದಾಯದ ಮಠಾಧೀಶರು, ಜಾತಿ ಸಂಘಗಳ ಹೇಳಿಕೆಗಳು ಬೀದಿರಂಪವಾಗಿಸಿದ್ದವು.

ಸುದೀರ್ಘ ಅವಧಿ ಮೌನಕ್ಕೆ ಶರಣಾಗಿದ್ದ ಕಾಂಗ್ರೆಸ್ ಹೈಕಮಾಂಡ್‌, ದಿಢೀರನೇ ಮಧ್ಯ ಪ್ರವೇಶಿಸಿ ‘ಉಪಾಹಾರ ಕೂಟ’ ನಡೆಸಿ ಭಿನ್ನಮತ ಶಮನ ಮಾಡಿಕೊಳ್ಳಿ ಎಂದು ಉಭಯ ನಾಯಕರಿಗೂ ಸೂಚಿಸಿತ್ತು. ನಂತರ ಸಿದ್ದರಾಮಯ್ಯನವರೇ ಶಿವಕುಮಾರ್ ಅವರಿಗೆ ಅಧಿಕೃತ ಆಮಂತ್ರಣ ಕೊಟ್ಟಿದ್ದರು. ಉಪಾಹಾರ ಸವಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಭಯ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಿದರು.

ಸೋಮವಾರ ಬೆಳಿಗ್ಗೆಯಷ್ಟೇ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ‘ಶಿವಕುಮಾರ್ ಅವರು ತಮ್ಮ ಮನೆಗೂ ಉಪಾಹಾರಕ್ಕೆ ಕರೆದರೆ ಖಂಡಿತ ಹೋಗುತ್ತೇನೆ. ನನ್ನ ಮನೆಯಲ್ಲಿ ಉಪಹಾರಕ್ಕೆ ಬಂದಾಗ ತಮ್ಮ ಮನೆಗೂ ಬರುವಂತೆ ಆಹ್ವಾನ ನೀಡಿದ್ದರು. ಈ ಬಗ್ಗೆ ಇರುವರೆಗೂ ದೂರವಾಣಿ ಕರೆ ಬಂದಿಲ್ಲ’ ಎಂದು ಹೇಳಿದ್ದರು. ಉಪಹಾರಕ್ಕೆ ಮುಖ್ಯಮಂತ್ರಿಗೆ ಆಹ್ವಾನ ನೀಡಿರುವುದನ್ನು ಶಿವಕುಮಾರ್ ಖಚಿತಪಡಿಸಿದ್ದಾರೆ. 

ದೆಹಲಿಯಲ್ಲಿನ ನನ್ನ ಖಾಸಗಿ ಭೇಟಿಯ ಬಗ್ಗೆ ಎಲ್ಲವನ್ನೂ ಬಹಿರಂಗವಾಗಿ ಹೇಳಲಾಗದು. ಎಲ್ಲವೂ ಸುಸೂತ್ರವಾಗಿ ಆಗುತ್ತಿದ್ದು, ಒಂದು ಹಂತಕ್ಕೆ ಬರಲಿದೆ. ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ
ಡಿ.ಕೆ. ಸುರೇಶ್, ಬಮೂಲ್ ಅಧ್ಯಕ್ಷ 
ನಾವಿಬ್ಬರೂ ಸಹೋದರರು: ಡಿಕೆಶಿ
‘ನಾವಿಬ್ಬರು ಸಹೋದರರಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀವುಗಳು ಸದಾ ಗುಂಪು, ಗುಂಪು ಎಂದು ಬಿಂಬಿಸುತ್ತಿದ್ದೀರಿ. ನಮ್ಮಲ್ಲಿ ಯಾವುದೇ ಗುಂ‍ಪಿಲ್ಲ’ ಎಂದು ಪುನರುಚ್ಚರಿಸಿದರು. ಸಿದ್ದರಾಮಯ್ಯ ಅವರನ್ನು ಉಪಾಹಾರಕ್ಕೆ ಆಮಂತ್ರಿಸಿದ್ದೀರಾ ಎಂಬ ಪ್ರಶ್ನೆಗೆ ‘ಇದು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ನಮ್ಮ ಜೊತೆ 140 ಶಾಸಕರಿದ್ದಾರೆ. ನಾವು ಹುಟ್ಟುವಾಗಲೂ ಒಬ್ಬರೇ, ಸಾಯುವಾಗಲೂ ಒಬ್ಬರೇ. ಪಕ್ಷದ ವಿಚಾರ ಬಂದಾಗ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.