
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರದ ಚರ್ಚೆ ನಡೆಯುತ್ತಿರುವ ನಡುವೆ, ‘ಕುರಿ ಕಾಯುತ್ತಿದ್ದವನು ಮುಖ್ಯಮಂತ್ರಿ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ’ ಎಂದು ಸಿದ್ದರಾಮಯ್ಯ ಅವರು ಮಾಡಿದ ‘ಎಕ್ಸ್’ ಪೋಸ್ಟ್‌ಗೆ, ‘ಈಗ ಮುಖ್ಯಮಂತ್ರಿ ಕುರ್ಚಿ ಬಿಡುವುದಿಲ್ಲ ಎನ್ನುವುದನ್ನು ಹೇಳಲು ಜಾತಿಯ ಅಸ್ತ್ರ ಬಳಸಿರಬಹುದು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು. ‘ಜಾತಿ ರಾಜಕೀಯ’ ಮುಂದಿಟ್ಟು ಇಬ್ಬರ ಜಿದ್ದಾಜಿದ್ದಿಯ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
‘ಒಕ್ಕಲಿಗ ನಾಯಕರನ್ನು ಮುಗಿಸಿದರು’
‘ತಂದೆ ಮತ್ತು ಮಕ್ಕಳು ತಮ್ಮ ಕುಟುಂಬದ ಸ್ವಾರ್ಥಕ್ಕಾಗಿ ರಾಜಕೀಯ ಕ್ಷೇತ್ರದಲ್ಲಿ ಉಳಿದವರನ್ನು ಬಿಟ್ಟುಬಿಡಿ, ಸ್ವಜಾತಿ ನಾಯಕರು ಕೂಡಾ ಬೆಳೆಯದಂತೆ ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದವರು. ಹಿಂದೆ, ಇಂದು ಮತ್ತು ಮುಂದೆ ಜಾತ್ಯತೀತ ಜನತಾದಳದ ತುತ್ತತುದಿಯ ನಾಯಕರು ಗೌಡರ ಕುಟುಂಬದವರೇ ಆಗಿರುತ್ತಾರೆ ಎನ್ನುವುದು ಸತ್ಯ’ ಎಂದು ಕುಮಾರಸ್ವಾಮಿಗೆ ಸಿದ್ದರಾಮಯ್ಯ ಕುಟುಕಿದ್ದಾರೆ. ಸಿದ್ದರಾಮಯ್ಯ ಅವರ ತಿರುಗೇಟು ಹೀಗಿದೆ...
‘ಎಚ್.ಡಿ. ದೇವೇಗೌಡರು ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಜೆಡಿ(ಎಸ್) ಪಕ್ಷದಲ್ಲಿ ಬೆಳೆಸಿದ್ದಾರೆ? ಹಾಸನದ ಪುಟ್ಟಸ್ವಾಮಿಗೌಡ, ಸಿ.ಎಸ್. ಪುಟ್ಟೇಗೌಡ, ಜವರೇಗೌಡ, ಕೆ.ಎಂ. ವಿಶ್ವನಾಥ್, ಹನುಮೇಗೌಡ, ಮಂಡ್ಯದ ಕೆ.ಎನ್. ನಾಗೇಗೌಡ, ಕೆ.ಆರ್. ಪೇಟೆ ಕೃಷ್ಣ, ವೈ.ಕೆ. ರಾಮಯ್ಯ, ಸಿ. ಬೈರೇಗೌಡ, ಬಚ್ಚೇಗೌಡ, ಬಿ.ಎಲ್. ಶಂಕರ್, ಸಿ. ನಾರಾಯಣಸ್ವಾಮಿ, ಚಲುವರಾಯಸ್ವಾಮಿ ಮೊದಲಾದವರೆಲ್ಲ ಯಾಕೆ ದೇವೇಗೌಡರನ್ನು ಬಿಟ್ಟು ಹೊರಬಂದರು ಎನ್ನುವುದನ್ನು ನಾನು ವಿವರಿಸಿ ಹೇಳಬೇಕಾಗಿಲ್ಲ’.
‘ಒಕ್ಕಲಿಗ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ. ಕೃಷ್ಣವರೆಗೆ ನೂರಾರು ಒಕ್ಕಲಿಗ ನಾಯಕರನ್ನು ಬೆಳೆಸಿದೆ. ದೇವೇಗೌಡರಿಂದ ಮೋಸಕ್ಕೊಳಗಾದ ನಾಯಕರಿಗೆ ಅವಕಾಶ ನೀಡಿ ರಾಜಕೀಯವಾಗಿ ಬೆಳೆಸುತ್ತಿರುವುದು ಕೂಡಾ ಕಾಂಗ್ರೆಸ್ ಪಕ್ಷ. ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೆ, ಅದಕ್ಕೆ ಕಾಂಗ್ರೆಸ್ ಕಾರಣ.’
‘ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡಲು ಸಾಧ್ಯ ಇರುವವರು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು. ಡಿ.ಕೆ. ಶಿವಕುಮಾರ್, ಟಿ.ಬಿ. ಜಯಚಂದ್ರ, ಕಿಮ್ಮನೆ ರತ್ನಾಕರ್, ಎಂ. ಕೃಷ್ಣಪ್ಪ, ಕೃಷ್ಣ ಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್, ಹೀಗೆ ನಮ್ಮಲ್ಲಿರುವ ಒಕ್ಕಲಿಗರ ನಾಯಕರ ದೊಡ್ಡ ಪಟ್ಟಿಯೇ ಇದೆ. ಜೆಡಿ(ಎಸ್)ನಲ್ಲಿ ಎಷ್ಟು ಮಂದಿ ಒಕ್ಕಲಿಗ ನಾಯಕರಿದ್ದಾರೆ. ಮುಂದೊಂದು ದಿನ ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಯಾರಾದರೂ ರಾಜ್ಯದ ಮುಖ್ಯಮಂತ್ರಿಗಳಾದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಲಿದೆ’
'ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು ಮುಖ್ಯಮಂತ್ರಿಗಳಾಗಿದ್ದಾರೆ, ಹಿಂದುಳಿದ ಜಾತಿಗೆ ಸೇರಿದ ನನ್ನನ್ನು ಗುರುತಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಟ್ಟಿರುವುದು ಕೂಡಾ ಕಾಂಗ್ರೆಸ್ ಪಕ್ಷ. ಜಾತಿಯಿಂದ ಮಾತ್ರವಲ್ಲ, ಅರ್ಹತೆಯ ಬಲದಿಂದಲೇ ಮುಖ್ಯಮಂತ್ರಿಯಾಗುವಂತಹ ದಲಿತ ಸಮುದಾಯದ ನಾಯಕರು ಕೂಡಾ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು. ಮುಂದೊಂದು ದಿನ ದಲಿತ ಸಮುದಾಯದಿಂದ ಯಾರಾದಾರೂ ರಾಜ್ಯದ ಮುಖ್ಯಮಂತ್ರಿಯಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಇದು ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ, ಜೆಡಿಎಸ್ ಗಳಿಗೆಇರುವ ವ್ಯತ್ಯಾಸ’
‘ಅಧಿಕಾರ ಇರಲಿ, ಇಲ್ಲದೆ ಇರಲಿ ಸಾಮಾಜಿಕ ನ್ಯಾಯದ ಪರವಾದ ನನ್ನ ನಿಲುವು ಅಚಲ. ನಮ್ಮಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ನನ್ನನ್ನು ಟೀಕಿಸುತ್ತಿರುವ ರಾಜಕಾರಣಿಗಳಿಗಿಂತ ಹೆಚ್ಚಿನ ಸ್ಪಷ್ಟತೆ ನನಗಿದೆ. ಈ ಬಗ್ಗೆ ನಾನು ಸಾರ್ವಜನಿಕ ಸಂವಾದಕ್ಕೆ ಸಿದ್ಧವಾಗಿದ್ದೇನೆ’.
‘ಕುರ್ಚಿ ತ್ಯಜಿಸಿ, ಒಕ್ಕಲಿಗರ ಮೇಲೆ ಪ್ರೀತಿ ಪ್ರದರ್ಶಿಸಿ’
‘ಒಕ್ಕಲಿಗರನ್ನು ಸಿ.ಎಂ ಮಾಡುವುದು ಕಾಂಗ್ರೆಸ್ಸೇ ಎನ್ನುವುದಾದರೆ, ತತ್‌ಕ್ಷಣಕ್ಕೇ ನೀವು ಕುರ್ಚಿ ಬಿಡಬೇಕಲ್ಲವೇ? ಒಕ್ಕಲಿಗರ ಮೇಲೆ ನಿಮ್ಮ ಪ್ರೀತಿ ಪ್ರದರ್ಶನಕ್ಕೆ ಇದು ಸಕಾಲ’ ಎಂದು ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿಯವರ ಮಾತಿನ ವರಸೆ ಹೀಗಿದೆ..
‘ನೀವು ಪಟ್ಟಿ ಮಾಡಿರುವ ಒಕ್ಕಲಿಗ ನಾಯಕರ ಹೆಸರುಗಳನ್ನು ಓದಿದೆ. ಪಾಪ.. ನೀವು ಅವರ ಹೆಸರುಗಳನ್ನು ಉಲ್ಲೇಖಿಸಿ ಅವರನ್ನೂ ಅಪಹಾಸ್ಯ ಮಾಡಿದ್ದೀರಿ. ನೀವೂ ಅಪಹಾಸ್ಯಕ್ಕೆ ತುತ್ತಾಗಿದ್ದಲ್ಲದೆ, ನಗೆಪಾಟಲಿಗೀಡಾಗಿದ್ದೀರಿ. ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಆ 13 ಜನರ ಶೆಲ್ಟರ್ ಪಡೆದಿದ್ದೀರಿ’
‘ಅವರೆಲ್ಲರೂ ದೇವೇಗೌಡರಿಂದ ಅಧಿಕಾರ ಅನುಭವಿಸಲೇ ಇಲ್ಲವೇ? ಆಗ ಅವರೆಲ್ಲರೂ ಕೂತಿದ್ದ ಅಧಿಕಾರ ಸ್ಥಾನಗಳಲ್ಲಿ ದೇವೇಗೌಡರೇ ಕೂತಿದ್ದರಾ? ಅವರೆಲ್ಲರೂ ನಿಮ್ಮಂತೆಯೇ ದೇವೇಗೌಡರ ಶ್ರಮ, ತ್ಯಾಗದಿಂದ ಅಧಿಕಾರ ಉಂಡು, ಪೊಗದಸ್ತಾಗಿ ಬೆಳೆದು ಬೇಲಿ ಹಾರಿದವರು! ನೀವು ಹೇಳಿದಂತೆ ಕುಟುಂಬವೇ ಮಿಗಿಲು ಎಂದು ಗೌಡರು ಭಾವಿಸಿದ್ದಿದ್ದರೆ ಈ ಪಟ್ಟಿಯಲ್ಲಿನ ಒಬ್ಬರೂ ಶಾಸಕ, ಮಂತ್ರಿ, ಎಂಪಿ ಆಗುತ್ತಲೇ ಇರಲಿಲ್ಲ. ನಿಮ್ಮನ್ನೂ ಸೇರಿಸಿ! ಏನಂತೀರಿ? ನೀವೆಲ್ಲರೂ ನೆರಳು ಕೊಟ್ಟ ವೃಕ್ಷಕ್ಕೆ ನಿರ್ದಯದಿಂದ ಕೊಡಲಿ ಹಾಕಿದಿರಿ. ಉಂಡು ಹೋದಿರಿ, ಕೊಂಡು ಹೋದಿರಿ!’.
‘ಸಾಮಾಜಿಕ ನ್ಯಾಯದ ಸೋಗುಗಾರ, ಸಾಮಾಜಿಕ ನ್ಯಾಯದ ಸಂಹಾರಿ ನೀವು. ನಿಮಗೆ ರಾಜಕೀಯ ಶಕ್ತಿ-ಬದುಕು ಕೊಟ್ಟ ದೇವೇಗೌಡರ ಕಡೆ ಬೆಟ್ಟು ಮಾಡುವುದು ಆಘಾತಕಾರಿ. ಇವತ್ತು ನಿಮಗೆ ಸಿಕ್ಕಿರುವ ಅಧಿಕಾರ, ಸಾಮಾಜಿಕ ನ್ಯಾಯಕಾರ ಎಂಬ ಪೋಷಾಕು ಎಲ್ಲವೂ ದೇವೇಗೌಡರ ದೇಣಿಗೆ’.
‘ನಿಮ್ಮ ಸ್ವಾರ್ಥಕ್ಕೆ ಜಾತಿ ಎಳೆದು ತಂದಂತೆ, ಹಿರಿಯರಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ. ಕೃಷ್ಣ ಅವರನ್ನು ಏಕೆ ಎಳೆದು ತರುತ್ತೀರಿ? ಎಸ್.ಎಂ.ಕೃಷ್ಣ ಅವರ ಹೆಸರೇಳುವ ಸಾಸಿವೆ ಕಾಳಷ್ಟು ಯೋಗ್ಯತೆ, ನೈತಿಕತೆ ನಿಮಗಿದೆಯೇ? ರಾಜಕೀಯದ ಕಡೆಗಾಲದಲ್ಲಿ ಅವರನ್ನು ನೀವೆಷ್ಟು ತುಚ್ಛವಾಗಿ ನಡೆಸಿಕೊಂಡಿರಿ ಎನ್ನುವುದನ್ನು ಜನ ಮರೆತಿಲ್ಲ’.
‘ಒಕ್ಕಲಿಗರನ್ನು ಬೆಳೆಸಿದ್ದು ಕಾಂಗ್ರೆಸ್ಸು ಅಂತೀರಿ.. ಬರೀ ಬುರಡೆ.. ವಿಧಾನಸೌಧ ಕಟ್ಟಿದ ಕೆಂಗಲ್ ಅವರಿಗೆ ನಿಮ್ಮ ನೆಹರು ಕೊಟ್ಟ ಕಿರುಕುಳ, ಮಾಡಿದ ಅಪಮಾನ ಅಷ್ಟಿಷ್ಟಾ? ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರಿಗೆ ಬೆನ್ನಿಗಿರಿದ ದೂರ್ತರು ಯಾರು? ಯಾವ ಪಕ್ಷದವರು?’
‘ಎರಡನೇ ಅವಧಿಗೆ ನೀವು ಸಿ.ಎಂ ಆಗುವ ಮುನ್ನ ಅಗ್ರಿಮೆಂಟ್ ಆಗಿತ್ತಲ್ಲಾ, ಅದನ್ನು ಬಹಿರಂಗವಾಗಿ ಹೇಳುವ ಉದಾರತೆ ತೋರಿ. ದಿಲ್ಲಿಯಲ್ಲಿ ನಿಮ್ಮಿಬ್ಬರ ನಡುವೆ ಆಗಿದ್ದ ಆ ಅಗ್ರಿಮೆಂಟ್ʼಗೆ ಸಾಕ್ಷಿ ಆಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲಾಗೆ ನಿಮ್ಮ ಸಾಮಾಜಿಕ ನ್ಯಾಯ, ಒಕ್ಕಲಿಗ ಪ್ರೀತಿಯ ಪರಾಕಾಷ್ಠೆ ಈಗೀಗ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಅವರೆಲ್ಲರ ಮಾನಸಿಕ ಸ್ವಾಸ್ಥ್ಯ ಸರಿ ಇದೆ ಎಂದು ನಾನಾದರೂ ನಂಬಿದ್ದೇನೆ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.