ADVERTISEMENT

ಸಿದ್ದರಾಮಯ್ಯ ನಮ್ಮ ನಾಯಕರು: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 0:18 IST
Last Updated 17 ಫೆಬ್ರುವರಿ 2025, 0:18 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ‘ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಆ ಮೂಲಕ ಸಿದ್ದರಾಮಯ್ಯ ಪರ ಕೂಗೆಬ್ಬಿಸುತ್ತಿರುವ ಸಚಿವರು, ಶಾಸಕರನ್ನು ಮೌನವಾಗಿರುವಂತೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. 

ADVERTISEMENT

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ದಿನಬೆಳಗಾದರೆ ಸಿದ್ದರಾಮಯ್ಯ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ’ ಎಂದರು.

‘ಸಿದ್ದರಾಮಯ್ಯ ಅವರು ಪಕ್ಷಕ್ಕೆ ಅನಿವಾರ್ಯ’ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ಸಿದ್ದರಾಮಯ್ಯ ಅವರು ಎಲ್ಲ ಚುನಾವಣೆಗಳಿಗೂ ಬೇಕು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ವಿಧಾನ ಸಭೆ, ಸಂಸತ್ ಚುನಾವಣೆ ಎಲ್ಲದಕ್ಕೂ ಬೇಕು. ಅವರನ್ನು ಪಕ್ಷ ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿರುವ ಅವರ ಹೆಸರು ಮಾಧ್ಯಮಗಳಿಗೆ ಆಹಾರವಾಗುವಂತೆ ಗೊಂದಲದ ಹೇಳಿಕೆ ನೀಡುವುದು ಬೇಡ’ ಎಂದರು.

‘ಪಕ್ಷದಲ್ಲಿ ಗೊಂದಲದ ಹೇಳಿಕೆ ಯಾಕೆ’ ಎಂದು ಕೇಳಿದಾಗ, ‘ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ದಿನ ನಿತ್ಯ ಎಲ್ಲವನ್ನೂ ಗಮನಿಸುತ್ತಿದೆ" ಎಂದು ತಿಳಿಸಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ’

‘ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬಹುದು. ಹೀಗಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು’ ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಎಎಪಿ ತ್ಯಜಿಸಿದ್ದ ಬ್ರಿಜೇಶ್ ಕಾಳಪ್ಪ ಮತ್ತು ಮಾಜಿ ಸಂಸದ ಜೆಡಿಎಸ್‌ನ ಎಲ್.ಆರ್. ಶಿವರಾಮೇಗೌಡ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಿವಕುಮಾರ್ ‘ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹಲವು ನಾಯಕರು ಹಂತ ಹಂತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ’ ಎಂದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸದ್ಯದಲ್ಲಿ ಸೂಚನೆ ಬರುವ ಸಾಧ್ಯತೆ ಇದೆ. ಬಿಬಿಎಂಪಿ ಚುನಾವಣೆ ಕೂಡಾ ನಡೆಸಬೇಕಾಗಿದ್ದು ಗ್ರೇಟರ್ ಬೆಂಗಳೂರು ವಿಚಾರವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ’ ಎಂದರು. ‘ಈ ಚುನಾವಣೆಗಳ ಸಿದ್ಧತೆಗಾಗಿ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಉಪಾಧ್ಯಕ್ಷರುಗಳನ್ನು ಸೇರಿಸಿಕೊಂಡು ವಿಭಾಗವಾರು ಸಮಿತಿ ರಚಿಸಲಾಗುವುದು. ಈ ಸಮಿತಿ ಮಾರ್ಚ್ ಒಳಗಾಗಿ ರಾಜ್ಯ ಪ್ರವಾಸ ಮಾಡಿ ನಾಯಕರ ಮಧ್ಯೆ ಹೊಂದಾಣಿಕೆ ಸಾಧಿಸಿ ಶೇ 50ರಷ್ಟು ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡುವ ಬಗ್ಗೆ ವರದಿ ಸಲ್ಲಿಸಬೇಕು’ ಎಂದರು.

ಪಕ್ಷದ ಕಚೇರಿ ಶಂಕುಸ್ಥಾಪನೆ:

‘100 ಕಾಂಗ್ರೆಸ್ ಕಚೇರಿ ನಿರ್ಮಿಸುವ ಹಿನ್ನೆಲೆಯಲ್ಲಿ ಅವುಗಳ ಶಂಕುಸ್ಥಾಪನೆ ನೆರವೇರಿಸಲು ದಿನ ನಿಗದಿ ಮಾಡುವಂತೆ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಗೆ ಮನವಿ ಮಾಡಿದ್ದೇನೆ. ಈ ಕಾರ್ಯಕ್ಕೆ ನಾಲ್ಕು ವಿಭಾಗಗಳಲ್ಲಿ ಸಮಿತಿ ರಚಿಸಲಾಗಿದೆ’ ಎಂದರು. ‘ಕಚೇರಿ ಕಟ್ಟಡ ನಿರ್ಮಾಣ ಮಾಡುವ ಜಾಗ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ನೋಂದಣಿ ಆಗದಿದ್ದರೆ ಅಲ್ಲಿ ಶಂಕುಸ್ಥಾಪನೆ ಮಾಡಿಸುವುದಿಲ್ಲ. ಈ ಕಟ್ಟಡ ನಿರ್ಮಾಣದ ಜಾಗ ವೈಯಕ್ತಿಕ ಹೆಸರು ಬೇರೆ ಟ್ರಸ್ಟ್ ಹೆಸರಿನಲ್ಲಿ ಇರುವಂತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.