ADVERTISEMENT

ಬಿಜೆಪಿ ಅಭ್ಯರ್ಥಿ ಎ.ಮಂಜು ಕಳ್ಳ ಎತ್ತು : ಸಿದ್ದರಾಮಯ್ಯ 

ಲೋಕಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 16:15 IST
Last Updated 2 ಮೇ 2019, 16:15 IST
   

ಕಡೂರು (ಚಿಕ್ಕಮಗಳೂರು): ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಕಳ್ಳ ಎತ್ತು ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕುಟುಕಿದರು.

ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಗಿರಾಕಿ ಹಿಂದೆ ನಮ್ಮ ಜೊತೆ ಇದ್ದರು, ಸಚಿವ ಸ್ಥಾನವನ್ನೂ ನೀಡಿದ್ದೆವು. ಕಳ್ಳಎತ್ತು ಎಂಬುದು ಗೊತ್ತಿತ್ತು. ಬಿಜೆಪಿ ಸೇರುವುದಕ್ಕೂ ಮೂರು ದಿನ ಮುನ್ನಾ ನನ್ನೊಂದಿಗೆ ಮಾತಾಡಿ ನಿಮ್ಮನ್ನು ಬಿಟ್ಟು ಹೋಗಲ್ಲ, ನೀವು ಮಂತ್ರಿ ಮಾಡಿದ್ರಿ ಎಂದು ಹೇಳಿದ ಗಿರಾಕಿ ಆಮೇಲೆ ಬಿಜೆಪಿಗೆ ಓಡಿ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಆತ ಎಂಎಲ್ಎ ಆಗಿದ್ದು ಕಾಂಗ್ರೆಸ್‌ನಿಂದ, ಸಚಿವ ಸ್ಥಾನ ನೀಡಿದ್ದು ಕಾಂಗ್ರೆಸ್ ಪಕ್ಷ. ಮಂಜು ಪಕ್ಷ ದ್ರೋಹಿ, ಆತನಿಗೆ ಮತ ಹಾಕಬೇಡಿ ಎಂದು ತಾಕೀತು ಮಾಡಿದರು.

ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರಕ್ಕೆ ಆನಂದ್ ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು ನೀನಾ ಗೂಬೆ, ಆಗ ಸಮಯ ಇಲ್ಲದ ಕಾರಣಕ್ಕೆ ಇಲ್ಲಿಗೆ ಬರಲಾಗಲಿಲ್ಲ ಎಂದು ಸಭಿಕರೊಬ್ಬರಿಗೆ ಸಿದ್ದರಾಮಯ್ಯ ಗದರಿದರು.

ವಿಧಾನಸಭೆ ಚುನಾವಣೆ ವೇಳೆ ಆನಂದ್ ಪರ ಪ್ರಚಾರಕ್ಕೆ ಯಾಕೆ ಬರಲಿಲ್ಲ ಎಂದು ಸಭಿಕರೊಬ್ಬರು ಪ್ರಶ್ನಿಸಿದ್ದಕ್ಕೆ ಗದರಿದ ಸಿದ್ದರಾಮಯ್ಯ, ಸುಮ್ಮನೆ ಕುಳಿತುಕೊಳ್ಳಲು ಆಗಲ್ವಾ, ಕಪಾಳಕ್ಕೆ ಬಿಡ್ತಿನಿ ನೋಡು ಎಂದು ಜೋರು ಮಾಡಿದರು.

ಉದ್ಯೋಗ ಕೊಡಿ ಎಂದು ಯುವಜನರು ಕೇಳಿದರೆ ಪಕೋಡ ಮಾಡಿ ಎಂದು ಮೋದಿ ಹೇಳುತ್ತಾರೆ. ಮೋದಿ ಮತ್ತೆ ಗೆದ್ದು ಬಂದರೆ ಪ್ರಜಾತಂತ್ರ ಉಳಿಯಲ್ಲ, ಅವರು ಸರ್ವಾಧಿಕಾರಿ ಇನ್ನೊಬ್ಬ ಹಿಟ್ಲರ್ ಆಗುತ್ತಾರೆ. ಹುಷಾರಾಗಿರಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ:ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ‘ದೇಶದಲ್ಲಿ ನರೇಂದ್ರ ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಿಲಾಂಜಲಿ ಇಟ್ಟಿದ್ದು, ಜಾತ್ಯತೀತ ಶಕ್ತಿಗಳು ಒಟ್ಟಾಗಿ ಇವರನ್ನು ಸೋಲಿಸಲು ಹೋರಾಡಬೇಕಿದೆ’ ಎಂದರು.

‘ರಾಜ್ಯದ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಮೋದಿ ಅವರ ಬಳಿ ಮನವಿ ಮಾಡಿದರೂ ಅವರು ಸ್ಪಂದಿಸಲಿಲ್ಲ. ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಮೋದಿಯಂತೆ ಮನಸ್ಸಿಗೆ ಬಂದಂತೆ ಮಾತಾಡುವವರನ್ನು ನೋಡಲಿಲ್ಲ. ಅಧಿಕಾರದಲ್ಲಿ ಇರುವವರು ಎದುರಾಳಿಗಳ ಆಪಾದನೆಗೆ ಉತ್ತರಿಸಬೇಕು. ಆದರೆ, ರಾಹುಲ್ ಗಾಂಧಿ ಮಾಡುವ ಆಪಾದನೆಗಳಿಗೆ ಉತ್ತರಿಸಲು ಮೋದಿಗೆ ಧೈರ್ಯವಿಲ್ಲ. ರಾಜ್ಯದಲ್ಲಿ ಕೂಡ ರೈತರ ಪರ ಯಾವುದೇ ಕಾಳಜಿ ಇಲ್ಲದ ಬಿಜೆಪಿಯನ್ನು ಬಗ್ಗಿಸಲೇಬೇಕು ಎಂದರೆ ನಾವು ಜಂಟಿಯಾಗಿ ಹೋರಾಡಲೇಬೇಕಿತ್ತು. ಅದರಂತೆ ಮೈತ್ರಿ ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಗೆಲುವಿಗೆ ಮತದಾರರ ಆಶೀರ್ವಾದ ಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.