ಸಿದ್ದರಾಮಯ್ಯ
ಸುವರ್ಣ ವಿಧಾನಸೌಧ (ಬೆಳಗಾವಿ): ‘ಐದು ವರ್ಷ ನಾನೇ ಮುಖ್ಯಮಂತ್ರಿ ಆಗಿರಬೇಕೆಂದು ಜನ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಈಗಲೂ ನಾನೇ ಸಿ.ಎಂ, ಮುಂದೆಯೂ ನಾನೇ ಸಿ.ಎಂ’ ಎಂದು ಸಿದ್ದರಾಮಯ್ಯ ತುಸು ಏರಿದ ಧ್ವನಿಯಲ್ಲಿಯೇ ಪ್ರತಿಪಾದಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಜಟಾಪಟಿಯ ನಡುವೆಯೇ, ತಾವೇ ಅಧಿಕಾರ ಪೂರ್ಣಗೊಳಿಸುವುದಾಗಿ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಪುನರುಚ್ಚರಿಸಿದರು.
ಮಂಗಳವಾರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಅವರು ಉತ್ತರ ನೀಡುವಾಗ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ನಾಯಕತ್ವದ ವಿಷಯ ಪ್ರಸ್ತಾಪಿಸಿದರು.
‘ನೀವು ಹುಳಿ ಹಿಂಡುವುದು ಬೇಡ. 140 ಶಾಸಕರು ನಮ್ಮೊಂದಿಗಿದ್ದಾರೆ. ಹೈಕಮಾಂಡ್ ಹೇಳುವ ತನಕ ನಾನೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತೆ ದೆಹಲಿಯಾತ್ರೆ ನಡೆಯುತ್ತಿದೆಯಲ್ಲ ಎಂದು ಅಶೋಕ ಹೇಳಿದಾಗ, ಅದಕ್ಕೆ ದನಿಗೂಡಿಸಿದ ಬಿಜೆಪಿಯ ವಿ. ಸುನಿಲ್ ಕುಮಾರ್ ‘ಹಾಗಿದ್ದರೆ ಜನವರಿ ಬಳಿಕ ಏನಾಗಲಿದೆ ಸರ್’ ಎಂದು ಕೆಣಕಿದರು.
ಕಾಂಗ್ರೆಸ್–ಬಿಜೆಪಿ ಸದಸ್ಯರ ವಾಗ್ಯುದ್ಧದ ಮಧ್ಯೆಯೇ ಮಾತನಾಡಿದ ಸಿದ್ದರಾಮಯ್ಯ, ‘ಈಗಲೂ ನಾನೇ, ಮುಂದೆಯೂ ನಾನೇ’ ಎಂದು ಅಬ್ಬರಿಸಿದರು.
ನಡೆದಿದ್ದೇನು?
ಕುಣಿಗಲ್ ಕ್ಷೇತ್ರದ ಸದಸ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಷಡ್ಡಕರಾದ ಎಚ್.ಡಿ. ರಂಗನಾಥ್ ಅವರು ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಸಹಕಾರ ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ ಉತ್ತರ ನೀಡಿದರು.
ಉತ್ತರದಿಂದ ಸಮಾಧಾನರಾಗದ ರಂಗನಾಥ್, ಮರುಪ್ರಶ್ನೆಗೆ ಕೇಳುವಾಗ ತಮ್ಮ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡುವಾಗ ತಮ್ಮ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗಿದೆ. ಒಂದು ಲಕ್ಷ ಖಾತೆದಾರರಿದ್ದರೂ 20 ಸಾವಿರ ರೈತರಿಗೆ ಅಲ್ಪಾವಧಿ ಸಾಲವನ್ನು ನೀಡಿದ್ದಾರೆ ಎಂದು ಏರಿದ ಧ್ವನಿಯಲ್ಲಿ ದೂರಿದರು.
‘ರಂಗನಾಥ್ ಆಕ್ರೋಶದಿಂದ ಮಾತನಾಡಿದ್ದಾರೆ. ನನ್ನ ಮೇಲೆ ವಿಶ್ವಾಸವಿಡಿ. ಮುಂದಿನ ವರ್ಷದಲ್ಲಿ ಅದನ್ನು ಸರಿಪಡಿಸುತ್ತೇನೆ’ ಎಂದು ಸಿದ್ದರಾಮಯ್ಯ ಮೆಲುದನಿಯಲ್ಲೇ ಹೇಳಿದರು.
ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ರಂಗನಾಥ್ ಅವರಿಗೆ ಬೇಕೂ ಅಂತ ತಾರತಮ್ಯ ಮಾಡಿದರೆ ಹೇಗೆ’ ಎನ್ನುತ್ತಾ ಸರ್ಕಾರದ ನಾಯಕತ್ವವನ್ನೂ ಪ್ರಸ್ತಾಪಿಸಿದರು.
‘ನೀನು ಉರಿಯೋ ಗಾಯಕ್ಕೆ ಉಪ್ಪು ಹಾಕಲು ಹೋಗಬೇಡ’ ಎಂದು ಸಿದ್ದರಾಮಯ್ಯ ಅಶೋಕಗೆ ತಿರುಗೇಟು ನೀಡಿದರು.
‘ಹಾಗಿದ್ದರೆ ಉರಿಯುತ್ತಿರುವುದು ಗ್ಯಾರಂಟಿ ಅಲ್ಲವೇ’ ಎಂದು ಮತ್ತೆ ಅಶೋಕ ಛೇಡಿಸಿದರು.
‘ನಾನು ಹೇಳಿದ್ದು ಗಾದೆ ಮಾತು’ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.
‘ಗಾದೆ ಮಾತು ಹೇಳುತ್ತಿದ್ದೀರೋ ಅಥವಾ ನಿಮ್ಮಲ್ಲಿ ಆಗುತ್ತಾ ಇರೋದನ್ನು ಹೇಳಿದಿರೋ’ ಎಂದು ಬಿಜೆಪಿಯ ಸುನಿಲ್‌ಕುಮಾರ್ ಕಾಲೆಳೆದರು.
‘ನಿಮಗೆ ಗಾದೆ ಮಾತು ಗೊತ್ತಿಲ್ಲ ಎಂದರೆ ನಾನು ಏನು ಹೇಳಲಿ. ಉರಿಯೋ ಉಪ್ಪು ಹಾಕುವುದೇ ವಿರೋಧಪಕ್ಷದವರ ಕೆಲಸ. ವಿರೋಧಪಕ್ಷದವರು ಏನೇ ಪ್ರಚೋದನೆ ಮಾಡಿದರೂ ನಮ್ಮವರು ಯಾರೂ ಕೂಡ ಪ್ರಚೋದನೆಗೆ ಒಳಗಾಗುವುದಿಲ್ಲ. ವಿರೋಧಪಕ್ಷದವರು ಇದರಲ್ಲಿ ಹುಳಿ ಹಿಂಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಗದರಿದರು.
ಹಿಂದಿನ ಸಾಲಿನಲ್ಲಿ ಡಿಕೆಶಿ ಚರ್ಚೆ
ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಶಿವಕುಮಾರ್ ಅವರು ವಿಧಾನಸಭೆ ಹಿಂಬದಿಯ ಸಾಲಿನಲ್ಲಿ ಕುಳಿತು ತಮ್ಮ ಆಪ್ತರ ಜೊತೆ ಸಮಾಲೋಚನೆ ನಡೆಸಿದ್ದು ಗಮನ ಸೆಳೆಯಿತು.
ಸಿದ್ದರಾಮಯ್ಯ ಅವರ ಪಕ್ಕದ ಆಸನ ಶಿವಕುಮಾರ್ ಅವರಿಗೆ ಮೀಸಲಾಗಿದ್ದು, ಮಸೂದೆಗಳ ಅಂಗೀಕಾರ ಮುಕ್ತಾಯವಾಗುವವರೆಗೆ ಅಲ್ಲಿ ಕುಳಿತಿದ್ದರು. ಬಳಿಕ ಅಲ್ಲಿಂದ ಎದ್ದು ಕೊನೆಯ ಸಾಲಿಗೆ ತೆರಳಿದರು. ಅಲ್ಲಿದ್ದ ಎಚ್.ಸಿ. ಬಾಲಕೃಷ್ಣ, ಸಿ.ಪಿ.ಯೋಗೀಶ್ವರ್ ಜೊತೆ ಶಿವಕುಮಾರ್ ಮಾತುಕತೆ ಆರಂಭಿಸುತ್ತಿದ್ದಂತೆ,
ಅವರ ಜೊತೆ ಅಶೋಕ ಕುಮಾರ್ ರೈ, ಕೆ.ಎಂ. ಉದಯ್ ಕದಲೂರು, ಶ್ರೀನಿವಾಸ ಜತೆ ಸೇರಿದರು. ನಂತರ ಇಕ್ಬಾಲ್ ಹುಸೇನ್ ಅವರನ್ನೂ ಕೈಬೀಸಿ ಕರೆದ ಶಿವಕುಮಾರ್ ಅವರನ್ನೂ ಚರ್ಚೆಯಲ್ಲಿ ತೊಡಗಿಸಿಕೊಂಡರು.
ಈಗಲೂ ಸಿ.ಎಂ– ಸಿದ್ದರಾಮಯ್ಯ ಐದು ವರ್ಷ ಅಲ್ಲವೇ–ಅಶೋಕ
ಸಿಎಂ: ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕವೂ ನಾನೇ ಮುಖ್ಯಮಂತ್ರಿ
ಅಶೋಕ: ಹಾಗಿದ್ದರೆ ನೀವು ಐದು ವರ್ಷ ಮುಖ್ಯಮಂತ್ರಿ ಆಗಿರುವುದಿಲ್ಲವೆ?
ಸಿ.ಎಂ: ಐದು ವರ್ಷ ನಾವೇ ಇರುತ್ತೇವೆ. ಜನ ಐದು ವರ್ಷಕ್ಕೆ ನಮ್ಮನ್ನು ಆಶೀರ್ವದಿಸಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದರಂತೆ ಕೇಳುತ್ತೇವೆ
ಬಿಜೆಪಿಯವರಿಗೆ ಯಾವ ಕಾರಣಕ್ಕೂ ರಾಜ್ಯದ ಜನ ಆಶೀರ್ವಾದ ಮಾಡುವುದಿಲ್ಲ. ಎರಡು ಬಾರಿ ಅಧಿಕಾರ ಮಾಡಿದ್ದೀರಿ, ಯಾವಾಗಲಾದರೂ ಜನರ ಆಶೀರ್ವಾದ ತೆಗೆದುಕೊಂಡು ಅಧಿಕಾರ ಮಾಡಿದ್ದೀರಾ? ‘ಆಪರೇಷನ್ ಕಮಲ’ದ ಮೂಲಕ ಅಧಿಕಾರ ಹಿಡಿದವರು ನೀವು. ಮುಂದೆಯೂ ನಿಮಗೆ ಆಶೀರ್ವಾದ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಮಾತು ಅಂತಿಮ. ಆದರೆ ಬಿಜೆಪಿಯ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತ ಸಾಧಿಸಿಲ್ಲ. ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು
ಅಶೋಕ: 2019ರಲ್ಲಿ ಜನ ನಿಮಗೆ ಆಶೀರ್ವಾದ ಮಾಡಿರಲಿಲ್ಲ. ಆದರೆ, ಜೆಡಿಎಸ್ ಮನೆ ಬಾಗಿಲಿಗೆ ಹೋಗಿ, ಅವರ ಜತೆ ಸರ್ಕಾರ ಮಾಡಿದ್ದೀರಲ್ಲ
ಸಿಎಂ: ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್ ಜತೆ ಸೇರಿ ಸರ್ಕಾರ ಮಾಡಿದ್ದು
ಎಸ್. ಸುರೇಶ್ ಕುಮಾರ್: ಯಾವಾಗಲೂ ಏಕ ವಚನದಲ್ಲೇ ಮಾತನಾಡುವ ಸಿದ್ದರಾಮಯ್ಯ, ಈಗ ‘ನಾವೇ’ ಐದು ವರ್ಷ ಸಿ.ಎಂ ಎಂದು ಬಹುವಚನಕ್ಕೆ ಬಂದಿದ್ದಾರೆ. ‘ನಾನು ಹೋದಲ್ಲಿ ಮಾತ್ರ ಹೋಗುತ್ತೇನೆ’ ಎಂಬ ಕನಕದಾಸರ ಮಾತಿನಂತೆ ಆಗಿದೆ ಅವರ ಮಾತು
ಸಿ.ಎಂ: ‘ನಾನು ಎನ್ನುವುದು ಹೋದರೆ ಹೋದೇನು’ ಎಂದು ಕನಕದಾಸರು ಹೇಳಿದ್ದಾರೆ. ಅವರಿಗೂ ನನಗೂ ಹೋಲಿಕೆ ಮಾಡಬೇಡಿ. ನಾವು ಸರ್ಕಾರ ರಚನೆ ಮಾಡಿದ್ದೇವೆ. ಸರ್ಕಾರ ಆಗಿರುವಾಗ ‘ನಾವು’ ಅಂತ ಹೇಳಬೇಕು. ‘ನನ್ನ ಸರ್ಕಾರ’ ಅಂತ ಹೇಳಲು ಆಗಲ್ಲ. ‘ನಮ್ಮ ಸರ್ಕಾರ’ ಎಂದು ಹೇಳಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.