ಸಿದ್ದರಾಮಯ್ಯ, ಮುಖ್ಯಮಂತ್ರಿ
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸಿದ್ದರಾಮಯ್ಯ, ವರಿಷ್ಠರು ಸೇರಿಕೊಂಡೇ ಮಾತುಕತೆ ನಡೆಸಿದ್ದೆವು’ ಎಂಬ ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿದ್ದರಾಮಯ್ಯ ‘ಈ ಕುರಿತು ಅವರನ್ನೇ ಕೇಳಿ’ ಎಂದರು.
ಸುದ್ದಿಗಾರರ ಪ್ರಶ್ನೆಗಳಿಗೆ ತುಸು ಸಿಟ್ಟಾದ ಸಿದ್ದರಾಮಯ್ಯ, ‘ಎಷ್ಟು ಬಾರಿ ನೀವು ಈ ಪ್ರಶ್ನೆ ಕೇಳುತ್ತೀರಿ. ಈ ವಿಚಾರದಲ್ಲಿ ಹೈಕಮಾಂಡ್ ಮಾತೇ ಅಂತಿಮ ಎಂದು ಹೇಳಿದ್ದೇನೆ. ಹೈಕಮಾಂಡ್ ಏನು ಹೇಳುತ್ತದೆಯೇ ಹಾಗೆ ನಡೆದುಕೊಳ್ಳಲಾಗುವುದು’ ಎಂದು ಹೇಳಿದರು.
‘ದೆಹಲಿಗೆ ಬರುವಂತೆ ಈಗ ನನ್ನನ್ನು ಯಾರೂ ಕರೆದಿಲ್ಲ. ಅಧಿಕಾರ ಹಂಚಿಕೆ ವಿಷಯದ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ. ನನಗೆ ಬಜೆಟ್ ಪೂರ್ವ ಸಿದ್ಧತಾ ಕೆಲಸಗಳಿವೆ. ಸದ್ಯಕ್ಕೆ ನಾನು ದೆಹಲಿಗೆ ಹೋಗುವುದಿಲ್ಲ. ವರಿಷ್ಠರು ಬಯಸಿದರೆ ಮಾತ್ರ ತೆರಳುವೆ’ ಎಂದು ಹೇಳಿದರು.
ಬಜೆಟ್ ಸಿದ್ಧತಾ ಸಭೆಗೂ ಡಿಕೆಶಿ ಗೈರು:
‘ಅಸ್ಸಾಂನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿರುವ ಕಾರಣ ಬಜೆಟ್ ಸಿದ್ಧತಾ ಸಭೆಯಲ್ಲಿ ಭಾಗವಹಿಸಲು ಆಗುವುದಿಲ್ಲವೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.