ಬಿ.ವೈ.ವಿಜಯೇಂದ್ರ ಮತ್ತು ಸಿದ್ದರಾಮಯ್ಯ
ಗದಗ: ‘ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬುದು ಊಹಾಪೋಹ ಅಲ್ಲ. ನೂರಕ್ಕೆ ನೂರು ಸತ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
‘ಅವರು ಕೆಳಗಿಳಿಯುತ್ತಿರುವುದು ಗೊತ್ತಾಗಿರುವ ಕಾರಣದಿಂದಲೇ ಕೆಲವು ನಾಯಕರು ತಮ್ಮ ಬಳಿ ಎಷ್ಟು ಜನ ಇದ್ದಾರೆ ಎಂಬುದನ್ನು ತೋರಿಸಲು ಸಭೆ ನಡೆಸುತ್ತಿದ್ದಾರೆ’ ಎಂದು ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಸಿಎಂ ರಾಜೀನಾಮೆ ಕೊಡುವ ಸಂದರ್ಭದಲ್ಲಿ ಜಾತಿಗಣತಿ ದಾಳ ಉರುಳಿಸಿದ್ದಾರೆ. ಆದರೆ, ಸಿಎಂ ಸ್ಥಾನ ಉಳಿಸಲು ಸಾಧ್ಯವಿಲ್ಲ. ರಾಜ್ಯದ ಜನರು ದಡ್ಡರಲ್ಲ, ಈ ಎಲ್ಲ ಬೆಳವಣಿಗೆಗಳನ್ನೂ ಗಮನಿಸುತ್ತಿದ್ದಾರೆ’ ಎಂದು ಹೇಳಿದರು.
‘ಭಂಡತನ ಮುಂದುವರಿಸಲು ಬಹಳ ದಿನ ಸಾಧ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭಕ್ಕೆ ಬಂದು ನಿಂತಿದ್ದಾರೆ. ಸಿಎಂ ರಾಜೀನಾಮೆ ನೀಡುವುದು ಸತ್ಯ. ಅತಿ ಶೀಘ್ರದಲ್ಲೇ ಮಾಹಿತಿ ಸಿಗಲಿದೆ. ಬಿಜೆಪಿ– ಜೆಡಿಎಸ್ ಪಾದಯಾತ್ರೆ ಪರಿಣಾಮ ಸಿಎಂ ರಾಜೀನಾಮೆ ಕೊಡುತ್ತಾರೆ. ವಿರೋಧ ಪಕ್ಷದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ಸಂತೋಷ ಇದೆ’ ಎಂದು ಹೇಳಿದರು.
‘ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಅಂತ ಹೇಳುವವರೆಲ್ಲರೂ ಸಿಎಂ ಆಕಾಂಕ್ಷಿಗಳು. ಸಿದ್ದರಾಮಯ್ಯ ಅವರನ್ನು ಖುಷಿ ಪಡಿಸಿದರೆ ನನ್ನ ಹೆಸರು ಹೇಳುತ್ತಾರೆ ಎಂಬ ಉದ್ದೇಶದಿಂದ ಹೀಗೆ ಹೇಳುತ್ತಿದ್ದಾರೆ. ಆದರೆ, ಯಾರಲ್ಲೂ ಪ್ರಾಮಾಣಿಕತೆ ಇಲ್ಲ’ ಎಂದು ಹರಿಹಾಯ್ದರು.
ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಎನ್ನುವುದು ಎಷ್ಟು ಸತ್ಯವೋ ಶಿಕಾರಿಪುರ ಶಾಸಕ ಎಂಬುದು ಅಷ್ಟೇ ಸತ್ಯ. ನಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ತಾಲ್ಲೂಕಿನಿಂದ ಬಂದ ನಿಯೋಗ ತೆಗೆದುಕೊಂಡು ಭೇಟಿಯಾಗಿದ್ದೆ. ಇದರಲ್ಲಿ ರಾಜಕೀಯ ಏನಿಲ್ಲ’ ಎಂದು ಹೇಳಿದರು.
ಕುಟುಂಬ ರಾಜಕಾರಣದಿಂದ ಬಿಜೆಪಿ ಹಾಳಾಗಿದೆ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಈಶ್ವರಪ್ಪ? ಅವರು ಬಿಜೆಪಿಯಲ್ಲಿಲ್ಲ. ಅವರ ಹೇಳಿಕೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು’ ಎಂದರು.
‘ಆರ್‌ಸಿಬಿ ಅಂದರೇನು? ಟಿ20 ಮ್ಯಾಚ್ ಆಡೋದಕ್ಕೆ ಆರ್‌ಸಿಬಿ ಇತ್ತು. ಬಿಜೆಪಿಯವರು ಸೇರಿ ನಾವು ಟೆಸ್ಟ್ ಆಡೋದಕ್ಕೆ ಹೊರಟಿದ್ದೇವೆ. ಲಾಂಗ್ ಇನ್ನಿಂಗ್ಸ್ ಆಡುತ್ತೇವೆ’ ಎಂದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆಗೆ ಬೇರೆ ಬೇರೆ ಇಲಾಖೆಯಲ್ಲಿ ಮೂಗು ತೂರಿಸಲು ಆಗುತ್ತದೆ. ಇಡೀ ಜಗತ್ತಿನ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಅವರ ಇಲಾಖೆಯಲ್ಲಿಯೇ ಇಷ್ಟೊಂದು ದೊಡ್ಡ ಸಮಸ್ಯೆ ಇದೆ. ಅದರ ಮಾಹಿತಿ ಪಡೆದು ಬಗೆಹರಿಸುವ ಸೌಜನ್ಯ ತೋರಿಸಿಲ್ಲ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.