ADVERTISEMENT

RSS ಬರೆದುಕೊಟ್ಟ ಚೀಟಿ ಹಿಡಿದು ಸದನದಲ್ಲಿ ಮಾತನಾಡುವ ಅಶೋಕ: ಸಿದ್ದರಾಮಯ್ಯ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 19:30 IST
Last Updated 3 ಫೆಬ್ರುವರಿ 2026, 19:30 IST
<div class="paragraphs"><p>ಸಿದ್ದರಾಮಯ್ಯ, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ, ಮುಖ್ಯಮಂತ್ರಿ

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು ಆರ್‌ಎಸ್‌ಎಸ್‌ನವರು ಬರೆದುಕೊಟ್ಟ ಚೀಟಿ ಇಟ್ಟುಕೊಂಡು ಸದನದಲ್ಲಿ ಮಾತನಾಡುತ್ತಾರೆ. ನಾವು ಬರೆದು ಕೊಟ್ಟಿದ್ದನ್ನು ಮಾತನಾಡುತ್ತಿದ್ದಾರಾ, ಇಲ್ಲವೇ ಎಂದು ಪರೀಕ್ಷಿಸಲು ಆರ್‌ಎಸ್‌ಎಸ್‌ ಪ್ರತಿನಿಧಿಯೊಬ್ಬರು  ಸದನಕ್ಕೆ ಬಂದಿರುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

‘ವಿಬಿ ಜಿ ರಾಮ್‌ ಜಿ’ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸಿ ಮಾತನಾಡುವ ವೇಳೆ ಬಿಜೆಪಿಯ ಕೆಲವು ಸದಸ್ಯರು ಪದೇ ಪದೇ ಅಡ್ಡಿಪಡಿಸಿದಾಗ ಸಿದ್ದರಾಮಯ್ಯ, ‘ಆರ್‌ಎಸ್‌ಎಸ್‌ನವರು ಬರೆದುಕೊಟ್ಟ ಭಾಷಣವನ್ನು ಅಶೋಕ ಓದುತ್ತಾರೆ ಎಂಬ ಮಾಹಿತಿ ಇದೆ. ಸ್ಪೀಕರ್‌ ಪಕ್ಕದ ಗ್ಯಾಲರಿಯಲ್ಲಿ ಆರ್‌ಎಸ್‌ಎಸ್‌ನ ಒಬ್ಬರು ಬಂದು ಚೀಟಿ ಕಳುಹಿಸುತ್ತಾರೆ. ಹೀಗಾಗಿ, ಅದನ್ನು ಓದಿಕೊಂಡು ಮಾತನಾಡಲಿ’ ಎಂದರು.

ಆಗ ಅಶೋಕ, ‘ನಾನು ಆರ್‌ಎಸ್‌ಎಸ್‌ ಎಂಬುದು ಸತ್ಯ. ಏಳು ಬಾರಿ ಶಾಸಕನಾಗಿದ್ದು ಮಾತನಾಡುವುದು ಗೊತ್ತಿದೆ. ನನಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಯಾವ ಆರ್‌ಎಸ್‌ಎಸ್‌ನವರೂ ಬಂದು ಮಾಹಿತಿ ನೀಡುವುದಿಲ್ಲ’ ಎಂದರು. ಬಿಜೆಪಿಯ ಸುನಿಲ್‌ ಕುಮಾರ್‌, ‘ಅಶೋಕ ಅವರು ಡಿ.ಕೆ. ಶಿವಕುಮಾರ್ ಹೇಳಿದ್ದನ್ನು ಓದುತ್ತಾರೆ. ನಿಮಗೆ ಇರುವ ಮಾಹಿತಿ ತಪ್ಪಿದೆ’ ಎಂದು ವ್ಯಂಗ್ಯವಾಡಿದರು.

‘ಹಾಗಾದರೆ ಬೇರೆಯವರು ಬರೆದುಕೊಟ್ಟಿದ್ದನ್ನು ಓದುವುದು ಬಿಟ್ಟು ನಿಮಗೆ ಸ್ವಂತಿಕೆ ಇಲ್ಲ ಎಂಬುದು ಸಾಬೀತು ಆಯಿತಲ್ಲವೇ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ನಮ್ಮ ರಕ್ತದಲ್ಲೇ ಆರ್‌ಎಸ್‌ಎಸ್‌ ಬಂದಿದೆ. 17ನೇ ವರ್ಷದಲ್ಲೇ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದವನು ನಾನು. ನಾವು ಸದಾ ವತ್ಸಲೆ ಹಾಡುವವರು’ ಎಂದು ಅಶೋಕ ಹೇಳಿದರು.

‘ಡಿ.ಕೆ ಶಿವಕುಮಾರ್‌ ಕೂಡ ಚಿಕ್ಕ ವಯಸ್ಸಿನಲ್ಲಿ ಸದಾ ವತ್ಸಲೆ ಹಾಡಿದವರು. ನಾನು ಒಂದು ಬಾರಿಯೂ ಸೋತಿಲ್ಲ. ಡಿ.ಕೆ. ಶಿವಕುಮಾರ್‌ ಕೂಡ ಸೋತಿಲ್ಲ. ನಾನು ಜೀವನ ಪೂರ್ತಿ ಆರ್‌ಎಸ್‌ಎಸ್‌, ಬಿಜೆಪಿ ಅಷ್ಟೇ? ಬೇರೆ ಪಕ್ಷಕ್ಕೆ ಎಂಟ್ರಿ ಆಗಿಲ್ಲ’ ಎಂದರು.

ಅದಕ್ಕೆ ಸಿದ್ದರಾಮಯ್ಯ, ‘ಶಿವಕುಮಾರ್‌ ಒಂದು ಬಾರಿ ಸೋತಿದ್ದಾರೆ ಎಂದು ಹೇಳಿದ್ದಾರೆ. ನೀವು ಶಿವಕುಮಾರ್‌ ವಿರುದ್ಧ ಸೋತು ಠೇವಣಿ ಕಳೆದುಕೊಂಡಿದ್ದೀರಿ. ನಾನು ನಾಲ್ಕು ಸಲ ಸೋತಿದ್ದೇನೆ’ ಎಂದರು.

‘ನೀವು ಹಲವು ಪಕ್ಷ ಬದಲಿಸಿದ್ದೀರಿ’ ಎಂದು ಬಿಜೆಪಿಯವರು ಆರೋಪಿಸಿದಾಗ, ‘ಹಲವು ಪಕ್ಷದಲ್ಲಿ ಹಲವು ಅಧಿಕಾರ ಅನುಭವಿಸಿದ್ದೇನೆ. ಆದರೆ, ನಾನು ಆರ್‌ಎಸ್‌ಎಸ್‌, ಮನುಸ್ಮೃತಿ ಒಪ್ಪಲ್ಲ. ಹೀಗಾಗಿ ಬಿಜೆಪಿಯನ್ನು ಒಪ್ಪಲ್ಲ. ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಮನುಸ್ಮೃತಿ ಕಡೆಗೆ ತಲೆ ಕೂಡ ಹಾಕಿ ಮಲಗುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.