ADVERTISEMENT

ಬಜೆಟ್‌ ಅಧಿವೇಶನದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ: BY ವಿಜಯೇಂದ್ರ

ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 9:25 IST
Last Updated 4 ಜನವರಿ 2025, 9:25 IST
<div class="paragraphs"><p>ಬಿ.ವೈ. ವಿಜಯೇಂದ್ರ ಮತ್ತು ಸಿದ್ದರಾಮಯ್ಯ</p></div>

ಬಿ.ವೈ. ವಿಜಯೇಂದ್ರ ಮತ್ತು ಸಿದ್ದರಾಮಯ್ಯ

   

ಶಿವಮೊಗ್ಗ : 'ಬಜೆಟ್‌ ಅಧಿವೇಶನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದಲ್ಲಿಯೆ ಚರ್ಚೆಯಾಗುತ್ತಿದೆ. ಇದೇ ಕಾರಣಕ್ಕೆ ಸಚಿವ ಸತೀಶ ಜಾರಕಿಹೊಳಿ ಮನೆಯಲ್ಲಿ ಔತಣಕೂಟ ಆಯೋಜಿಸುವ ಮೂಲಕ ಸಿದ್ದರಾಮಯ್ಯ ರಾಜಕೀಯ ದಾಳ ಉರುಳಿಸಿದ್ದಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನ ತ್ಯಜಿಸಲು ಸಿದ್ದರಾಮಯ್ಯ ಸಿದ್ಧರಿಲ್ಲ. ಅದೇ ರೀತಿ ಕಾಂಗ್ರೆಸ್‌ನಲ್ಲಿರುವ ವಿರೋಧಿ ಬಣ ಸಿದ್ಧರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ಉಳಿಸಲು ಸಿದ್ಧರಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧ ವರ್ಸಸ್ ಸಿದ್ಧ ಸ್ಥಿತಿ ಇದೆ ಎಂದು ಲೇವಡಿ ಮಾಡಿದರು.

ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿದೇಶ ಪ್ರವಾಸಕ್ಕೆ ತೆರಳಿರುವ ಸಂದರ್ಭ, ಅವರ ಅನುಪಸ್ಥಿತಿಯಲ್ಲಿ ಔತಣಕೂಟ ಆಯೋಜಿಸಿರುವುದು ಕಾಂಗ್ರೆಸ್ ಪಕ್ಷದಲ್ಲಿನ ಒಳಬೇಗುದಿಯ ಫಲ ಎಂದು ಹೇಳಿದರು.

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಿ ಸಚಿವ ಕೆ.ಜಿ.ಜಾರ್ಜ್‌ ನಿರ್ದೋಷಿಯಾಗಿದ್ದಾರೆ. ಅದೇ ರೀತಿ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಪ್ರಾಮಾಣಿಕರಾಗಿದ್ದರೆ ಸಿಬಿಐ ತನಿಖೆಗೆ ವಹಿಸಲಿ. ಕಾಂಗ್ರೆಸ್‌ ಪಕ್ಷದಲ್ಲಿಯೇ ಪ್ರಿಯಾಂಕ್‌ ಖರ್ಗೆ ವಿರೋಧಿಗಳಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಈ ವಿಚಾರದಲ್ಲಿ ಅವರು ನಂಬುವುದು ಬೇಡ. ಸಿಬಿಐ ತನಿಖೆಯಾದರೆ ಸಚಿನ್ ಪಾಂಚಾಳ್ ಕುಟುಂಬಕ್ಕು ನ್ಯಾಯ ದೊರೆಯಲಿದೆ. ಪ್ರಾಮಾಣಿಕರಾಗಿದ್ದರೆ ಪ್ರಿಯಾಂಕ್ ಖರ್ಗೆ ಅವರಿಗೂ ನ್ಯಾಯ ದೊರೆಯಲಿದೆ ಎಂದ ವಿಜಯೇಂದ್ರ ಹೇಳಿದರು.

ಮಹಿಳೆಯರಿಗೆ ಉಚಿತ, ಪುರುಷರಿಗೆ ದರ ಹೆಚ್ಚಳ ಖಚಿತ’

ಶಕ್ತಿ ಯೋಜನೆಗೆ ಹಣ ಹೊಂದಿಸಲು ಸಾಧ್ಯವಾಗದೇ ಸಾರಿಗೆ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿವೆ. ಸಂಸ್ಥೆಗಳನ್ನು ಮುಚ್ಚುವ ದುಸ್ಥಿತಿ ಇದೆ. ಈಗ ಶೇ.15ರಷ್ಟು ಟಿಕೆಟ್ ದರ ಹೆಚ್ಚಳ ಮಾಡಿದ್ದಾರೆ. ಇದು ಮಹಿಳೆಯರಿಗೆ ಉಚಿತ, ಪುರುಷರಿಗೆ ದರ ಹೆಚ್ಚಳ ಖಚಿತ ಎಂಬಂತಾಗಿದೆ. ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವುದೇ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಎಂಬ ನಮ್ಮ ಆರೋಪ ನಿಜವಾಗಿದೆ. ಹಿಮಾಚಲ ಪ್ರದೇಶ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಹಾಗಾಗಿ ಕರ್ನಾಟಕದ ಆರ್ಥಿಕ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದಾಗಿದೆ. ಕಾಂಗ್ರೆಸ್‌ ಸಚಿವರು, ಶಾಸಕರೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಸ್‌.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.