ADVERTISEMENT

ಸಿದ್ದರಾಮಯ್ಯ–ವೇಣುಗೋಪಾಲ್ ರಹಸ್ಯ ಸಮಾಲೋಚನೆ: ಕುತೂಹಲ ಕೆರಳಿಸಿದ ಗೋಪ್ಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 23:36 IST
Last Updated 3 ಡಿಸೆಂಬರ್ 2025, 23:36 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ. ಸಿ. ವೇಣುಗೋಪಾಲ್ ಕೊಣಾಜೆಯ ಕಾವೇರಿ ಅತಿಥಿಗೃಹದಲ್ಲಿ ಪರಸ್ಪರ ಸಮಾಲೋಚನೆ ನಡೆಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ. ಸಿ. ವೇಣುಗೋಪಾಲ್ ಕೊಣಾಜೆಯ ಕಾವೇರಿ ಅತಿಥಿಗೃಹದಲ್ಲಿ ಪರಸ್ಪರ ಸಮಾಲೋಚನೆ ನಡೆಸಿದರು   

ಮಂಗಳೂರು/ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ದಿನಕ್ಕೊಂದು ಆಯಾಮ ಪಡೆಯುತ್ತಿರುವ ಬೆನ್ನಲ್ಲೇ, ಇಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸುಮಾರು 15 ನಿಮಿಷ ಗೋಪ್ಯವಾಗಿ ಪರಸ್ಪರ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬುಧವಾರ ಇಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು- ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ಈ ನಾಯಕರು, ವಿಶ್ವವಿದ್ಯಾನಿಲಯದ ಕಾವೇರಿ ಅತಿಥಿ ಗೃಹದಲ್ಲಿ ಇಬ್ಬರೇ ಕುಳಿತು ರಹಸ್ಯ ಮಾತುಕತೆ ನಡೆಸಿದರು. ಈ ವೇಳೆ ಆ ಕೊಠಡಿಯಲ್ಲಿದ್ದವರನ್ನು ಹೊರಗೆ ಕಳುಹಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಜೊತೆಯಲ್ಲೇ ಬಂದಿದ್ದ ಸಚಿವರಾದ ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ, ದಿನೇಶ್ ಗುಂಡೂರಾವ್‌, ಜಮೀರ್ ಅಹಮದ್ ಖಾನ್‌, ಲಕ್ಷ್ಮೀ ಹೆಬ್ಬಾಳಕರ ಅವರೂ ಅತಿಥಿಗೃಹದಲ್ಲೇ ಇದ್ದರು. 

ADVERTISEMENT

ರಾಜಕೀಯ ಚರ್ಚಿಸಿಲ್ಲ: ಈ ಭೇಟಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ವೇಣುಗೋಪಾಲ್‌ ಅವರ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ’ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನವದೆಹಲಿಗೆ ತೆರಳುವುದರ ಕುರಿತು ಪ್ರತಿಕ್ರಿಯಿಸಿದ ಅವರು, ‘ಅವರು ಹೋದರೆ ಹೋಗಲಿ ಪಾಪ. ಬೇಡ ಅಂದವರು ಯಾರು? ನಾನು ದೆಹಲಿಗೆ ಹೋಗುವುದಿಲ್ಲ. ನಾನು ಕರೆದರೆ ಮಾತ್ರ ಹೋಗುವುದು. ಆದರೆ, ಈ ವರೆಗೆ ನನ್ನನ್ನು ಕರೆದಿಲ್ಲ’ ಎಂದು ತಿಳಿಸಿದರು. 

ಸಮಾರಂಭದ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತಿದ್ದ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್‌, ಅಲ್ಲಿಯೂ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು.

ವೇಣುಗೋಪಾಲ್ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯನವರು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಪಕ್ಷದ ವಿಚಾರವಾಗಿ ಅವರು ಮಾತನಾಡುತ್ತಾರೆ
ಡಿ.ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿ
ಜೈಕಾರ–ಬಣಗಳ ಶಕ್ತಿ ಪ್ರದರ್ಶನ
ಕೆ.ಸಿ.ವೇಣುಗೋಪಾಲ್‌ ಬಜಪೆಯ ವಿಮಾನನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದ ಗುಂಪು ಡಿ.ಕೆ.ಶಿವಕುಮಾರ್‌ ಅವರಿಗೆ ಜೈಕಾರ ಹಾಕಿ ‘ಡಿಕೆಶಿ ಮುಖ್ಯಮಂತ್ರಿಯಾಗಲಿ’ ಎಂದು ಘೋಷಣೆ  ಕೂಗಿತು. ವೇಣುಗೋಪಾಲ್ ನಿರ್ಗಮಿಸಿದ ಕೆಲ ಹೊತ್ತಿನ ಬಳಿಕ ಬಂದ ಸಿದ್ದರಾಮಯ್ಯ ಅವರು ವಿಮಾನದಲ್ಲಿ ನಿಲ್ದಾಣದಿಂದ ಹೊರುತ್ತಿದ್ದಂತೆ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ನೇತೃತ್ವದ ಬಣದವರು ಸಿದ್ದರಾಮಯ್ಯಗೆ ಜೈಕಾರ ಹಾಕಿ ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದರು. ಘೋಷಣೆ ರಾಜಕೀಯ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ ‘ಈ ರೀತಿ‌ ಜೈಕಾರ ಹಾಕುವುದರಿಂದ ಏನೂ  ಪ್ರಯೋಜನ ಆಗುವುದಿಲ್ಲ’ ಎಂದರು.
‘ಜೈಕಾರ ಧಿಕ್ಕಾರ ಸಹಜ–ಡಿಕೆಶಿ
‘ಜನ ಕಳೆದ ಹತ್ತು ವರ್ಷಗಳಿಂದ ಡಿಕೆ ಡಿಕೆ... ಎಂದು ಕೂಗುತ್ತಿದ್ದಾರೆ. ಅಭಿಮಾನಿಗಳು ಈ ರೀತಿ ಕೂಗುವುದು ಸಹಜ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ನಾಯಕರ ಪರ ಮಂಗಳೂರಿನಲ್ಲಿ ಘೋಷಣೆ ಕೂಗಿದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ‘ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ.. ಎಂದು ಕೂಗುವುದಿಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ರಾಹುಲ್.. ರಾಹುಲ್.. ಎಂದು ಕೂಗುತ್ತಾರೆ. ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು ಸಿದ್ದು... ಎಂದು ಕೂಗುತ್ತಾರೆ. ರಾಜಕಾರಣದಲ್ಲಿ ಜೈಕಾರ ಧಿಕ್ಕಾರ ಅಭಿಮಾನದ ಮಾತುಗಳು ಸಹಜ’ ಎಂದರು.

30 ತಿಂಗಳ ಮೊದಲೇ ಅಧಿಕಾರ ಬಿಡಬಹುದು: ಜಾರಕಿಹೊಳಿ

‘ಮುಖ್ಯಮಂತ್ರಿ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ. ಆದರೆ, ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದರೂ ಬಿಡಲೇಬೇಕು' ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

‘ರಾಜಕೀಯ ಶಾಶ್ವತವಲ್ಲ’ ಎಂಬ ಸಿದ್ದರಾಮಯ್ಯನವರ ಮಾತಿನ ಕುರಿತು ಪ್ರತಿಕ್ರಿಯಿಸಿದ ಅವರು, ‘ಅಧಿಕಾರ ಶಾಶ್ವತ ಅಲ್ಲ. ಯಾವತ್ತಿದ್ದರೂ ಅಧಿಕಾರ ಬಿಡಬೇಕು. 10 ವರ್ಷದ ನಂತರವಾದರೂ ಬಿಡಬೇಕು. ಅದನ್ನು ಯಾವಾಗ ಬಿಟ್ಟುಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದರು.

ದಲಿತ ಮುಖ್ಯಮಂತ್ರಿ ವಿಚಾರ ತಳ್ಳಿಹಾಕಿದ ಸಚಿವರು, ‘ಈ ಅವಧಿಯಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ. ಮುಖ್ಯಮಂತ್ರಿ ಬಗ್ಗೆ ಎಲ್ಲ ಮುಗಿದಿದೆ. ಈಗ ಮತ್ತೆ ಶುರು ಮಾಡುವುದು ಬೇಡ’ ಎಂದು ಹೇಳಿದರು.

‘2028ರವರೆಗೆ ಸಿದ್ದರಾಮಯ್ಯ ಸಿ.ಎಂ’

‘ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಸಿದ್ದರಾಮಯ್ಯ ಅವರೇ 2028ರವರೆಗೆ ಮುಖ್ಯಮಂತ್ರಿ ಆಗಿ ಮುಂದುವರಿಯುವುದು ಖಚಿತ’ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ಮುಖ್ಯಮಂತ್ರಿ ಬದಲಾವಣೆ ಊಹಾಪೋಹಗಳಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ  ಉಪಾಹಾರ ಕೂಟದ ಮೂಲಕ ತೆರೆ ಎಳೆದಿದ್ದಾರೆ’ ಎಂದರು.

‘ರಾಜಕೀಯ ಶಾಶ್ವತವಲ್ಲ ಎಂಬುದು ನಿಜ. ಮುಖ್ಯಮಂತ್ರಿ ಹೇಳಿದ್ದು ನಿಜ. ಮನುಷ್ಯರೂ ಶಾಶ್ವತವಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.