ADVERTISEMENT

ಹುಟ್ಟುಹಬ್ಬ ಆಚರಣೆಯಷ್ಟೇ ಅಲ್ಲ, ನಮ್ಮ ಸರ್ಕಾರದ ಪ್ರಗತಿಯ ಮೆಲುಕು: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 8:06 IST
Last Updated 15 ಜುಲೈ 2022, 8:06 IST
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ)   

ಮೈಸೂರು: ‘ದಾವಣಗೆರೆಯಲ್ಲಿ ನಡೆಯಲಿರುವುದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹುಟ್ಟುಹಬ್ಬ ಆಚರಣೆಯಷ್ಟೆ ಅಲ್ಲ. ಅದರ ಮೂಲಕ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ರಾಜ್ಯದಲ್ಲಾಗಿರುವ ಪ್ರಗತಿಯ ಬಗ್ಗೆ ಮೆಲುಕು ಹಾಕಲಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ನಮ್ಮ ಆಡಳಿತ ಅವಧಿಯಲ್ಲಿ ಏನಾಗಿತ್ತು? ಈಗ ಪರಿಸ್ಥಿತಿ ಏನಾಗಿದೆ ಎಂಬುದನ್ನು ಜನರಿಗೆ ವಿವರಿಸುತ್ತೇವೆ. ಬಿಜೆಪಿ ಸರ್ಕಾರದ ದುರಾಡಳಿತದ ಮೇಲೆ ಬೆಳಕು ಚೆಲ್ಲಲಿದ್ದೇವೆ. ಬಿಜೆಪಿಯವರು ಸಿದ್ದರಾಮೋತ್ಸವ, ಅದು–ಇದು ಎಂದೆಲ್ಲಾ ವಿನಾಕಾರಣ ಮಾತನಾಡುತ್ತಿದ್ದಾರಷ್ಟೆ’ ಎಂದು ಪ್ರತಿಕ್ರಿಯಿಸಿದರು.

‘ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಭಾಗವಹಿಸಲಿದ್ದಾರೆ. ಯಾತ್ರೆಯು ಕರ್ನಾಟಕದಲ್ಲಿ 350 ಕಿ.ಮೀ. ಸಂಚರಿಸಲಿದೆ. ಅದರ ರೂಪುರೇಷೆಗಳು ಈಗ ಸಿದ್ಧವಾಗುತ್ತಿವೆ. ಯಾತ್ರೆಯು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲಿದೆ. ಜುಲೈ 19ರಂದು ಮೈಸೂರಿನಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುವುದು’ ಎಂದು ತಿಳಿಸಿದರು.

ಶಾಂತಿಗೆ ಮುಖ್ಯಮಂತ್ರಿ ಕೇಳಿ:

ಬಾಗಲಕೋಟೆಯ ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ನೀಡಿದ್ದ ₹2 ಲಕ್ಷವನ್ನು ಅವರ ಕುಟುಂಬದ ಸದಸ್ಯರು ಸಿದ್ದರಾಮಯ್ಯ ತೆರಳುತ್ತಿದ್ದ ವಾಹನದ ಮೇಲೆ‌ ಎಸೆದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಯಾರು ಶಾಂತಿ ಕದಡುತ್ತಿದ್ದಾರೆಯೋ ಅವರು ಇದನ್ನು ಗಮನಿಸಲಿ. ಕರ್ನಾಟಕದಲ್ಲಿನ ಶಾಂತಿ ಬೇಕಾದರೆ, ಆ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿ’ ಎಂದರು.

‘ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಯಾರೂ ಇಂತಹ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿರುವುದಿಲ್ಲ. ಎಲ್ಲವೂ ಭಗವಂತನ ಪ್ರೇರಣೆ. ಈಗ ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ’ ಎಂದು ಹೇಳಿದರು.

ಚಾಮುಂಡೇಶ್ವರಿ ದರ್ಶನ:

ಆಷಾಢದ 3ನೇ ಶುಕ್ರವಾರ ಅಂಗವಾಗಿ ಶಿವಕುಮಾರ್‌ ಪತ್ನಿಯೊಂದಿಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದರು. ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಸೇರಿದಂತೆ ಹಲವು ಮುಖಂಡರ ಸಾಥ್ ನೀಡಿದರು. ಅವರೊಂದಿಗೆ ದೇವಸ್ಥಾನಕ್ಕೆ ತೆರಳಲು ಪಕ್ಷದ ಕಾರ್ಯಕರ್ತರು ಮುಂದಾಗಿದ್ದರಿಂದಾಗಿ ನೂಕುನುಗ್ಗಲು ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.