ADVERTISEMENT

ಆದಾಯ ತೆರಿಗೆ ಡಿಜಿ, ಪಾಲುದಾರರ ಕಿರುಕುಳ: ಸಿದ್ದಾರ್ಥ ಕೊನೇ ಪತ್ರದಲ್ಲೇನಿದೆ?

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 10:52 IST
Last Updated 30 ಜುಲೈ 2019, 10:52 IST
   

ಬೆಂಗಳೂರು: ಸದ್ಯ ನಿಗೂಢವಾಗಿ ಕಾಣೆಯಾಗಿರುವ ಕಾಫಿ ಡೇ ಮಾಲಿಕ ಸಿದ್ದಾರ್ಥ ಅವರು ಕಳೆದ ಶನಿವಾರ ಕಾಫಿ ಡೇ ಆಡಳಿತ ಮಂಡಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಬಹಿರಂಗಗೊಂಡಿದೆ. ಈ ಪತ್ರದಲ್ಲಿ ಸಿದ್ದಾರ್ಥನೋವು ತೋಡಿಕೊಂಡಿದ್ದಾರೆ. ಹೋರಾಟ ನಡೆಸಿಯೂ ತಾವು ಉದ್ಯಮದಲ್ಲಿ ವಿಫಲವಾಗಿರುವುದಾಗಿಯೂ, ತಮ್ಮ ನಡೆಯನ್ನು ಕ್ಷಮಿಸುವಂತೆಯೂ ಅವರು ಆಡಳಿತ ಮಂಡಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅವರ ಪತ್ರದ ಪೂರ್ಣ ಸಾರ ಇಲ್ಲಿದೆ...

ADVERTISEMENT

ಸಂಸ್ಥೆಯ ಆಡಳಿತ ಮಂಡಳಿ ಮತ್ತುಕಾಫಿ ಡೇ ಕುಟುಂಬಕ್ಕೆ,

ಬದ್ಧತೆ ಮತ್ತು ಕಠಿಣ ಪರಿಶ್ರಮದೊಂದಿಗೆ ನಮ್ಮ ಕಂಪನಿ ಈ 37 ವರ್ಷದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ ಮಾಡಿದೆ. ನನ್ನ ಪಾಲುದಾರಿಕೆಯ ತಂತ್ರಜ್ಞಾನ ಸಂಸ್ಥೆಯಲ್ಲೂ 20 ಸಾವಿರ ಉದ್ಯೋಗಗಳನ್ನು ನಾನು ಒದಗಿಸಿದ್ದೇನೆ. ಆದರೆ, ಲಾಭದಾಯಕ ವ್ಯಾಪಾರಿ ಮಾದರಿಯೊಂದನ್ನು ರೂಪಿಸಲುನಾನು ವಿಫಲನಾದೆ.

ಎಲ್ಲ ರೀತಿಯಲ್ಲೂ ನಾನು ಸೋತಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟ ಎಲ್ಲರ ನಂಬಿಕೆಗಳಿಗೆ ಭಂಗ ತಂದಿದ್ದೇನೆ. ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಸಹವರ್ತಿಯೊಬ್ಬರುನಾನು ಷೇರುಗಳನ್ನು (ಬೈಬ್ಯಾಕ್)ಮರುಖರೀದಿ ಮಾಡಬೇಕೆಂದು ತೀವ್ರ ಒತ್ತಡ ಹೇರುತ್ತಿದ್ದಾರೆ. ನನ್ನ ಸ್ನೇಹಿತನಿಂದ ದೊಡ್ಡಮೊತ್ತದ ಹಣ ಪಡೆದು ಆರು ತಿಂಗಳ ಹಿಂದೆ ನಾನು ಈ ವ್ಯವಹಾರ ಮಾಡಿದ್ದೆ. ನನಗೆ ಸಾಲ ಕೊಟ್ಟಿರುವ ಇತರ ಕೆಲವರೂ ಈಗ ತೀವ್ರ ಒತ್ತಡ ಹೇರುತ್ತಿದ್ದಾರೆ. ಇದೆಲ್ಲವೂ ನನ್ನನ್ನು ಈ ಪರಿಸ್ಥಿತಿಗೆ ದೂಡಿದೆ. ನಾನು ಹಿಂದಿನಿಂದಲೂ ತೀವ್ರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆದರೆ, ಈಗ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಮೈಂಡ್‌ ಟ್ರೀ ಸಂಸ್ಥೆಯ ಮಾರಾಟ, ಕಾಫಿ ಡೇ ಮಾಲೀಕತ್ವದ ಷೇರುಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಈ ಹಿಂದಿನ ಡಿಜಿಯಿಂದ ನನಗೆ ತೀವ್ರ ಕಿರುಕುಳ ಉಂಟಾಗಿತ್ತು. ಇದು ಪ್ರತಿದಿನದ ವಹಿವಾಟಿಗೆ ಬೇಕಿದ್ದ ಹಣಕ್ಕೆ ಪರದಾಡುವ ಸ್ಥಿತಿ ನಿರ್ಮಿಸಿತು. ಅವರು ಏನು ಮಾಡಿದರೋ ಅದು ನ್ಯಾಯ ಸಮ್ಮತ ಅಲ್ಲ.

ಹೊಸ ವ್ಯವಸ್ಥಾಪಕ ಸಮಿತಿಯೊಂದಿಗೆ ಇನ್ನು ಮುಂದೆ ಈ ಸಂಸ್ಥೆಯನ್ನು ಬಲಿಷ್ಠವಾಗಿ ನಡೆಸಿಕೊಂಡು ಹೋಗುವಂತೆ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಈವರೆಗಿನ ಎಲ್ಲ ತಪ್ಪುಗಳಿಗೆ ನಾನೊಬ್ಬನೇ ಕಾರಣ. ಸಂಸ್ಥೆಯ ಎಲ್ಲಾ ಹಣಕಾಸು ವ್ಯವಹಾರಕ್ಕೂ ನಾನೊಬ್ಬನೇ ಹೊಣೆಗಾರ. ಈ ಹಣಕಾಸು ವ್ಯವಹಾರಗಳ ಬಗ್ಗೆ ನನ್ನ ತಂಡಕ್ಕಾಗಲಿ, ಆಡಿಟರ್‌ಗಳಿಗಾಗಲಿ, ಹಿರಿಯ ವ್ಯವಸ್ಥಾಪಕರಿಗಾಗಲಿ ಯಾವುದೇ ಮಾಹಿತಿ ಇಲ್ಲ. ನಾನು ಈ ಮಾಹಿತಿಯನ್ನು ನನ್ನ ಕುಟುಂಬವೂ ಸೇರಿದಂತೆಯಾರೊಂದಿಗೂ ನಾನು ಹಂಚಿಕೊಂಡಿಲ್ಲ.

ವಂಚಿಸುವ ಅಥವಾ ಯಾರನ್ನಾದರೂ ದಾರಿತಪ್ಪಿಸುವ ಉದ್ದೇಶ ನನ್ನದಾಗಿರಲಿಲ್ಲ. ಒಬ್ಬ ಉದ್ಯಮಿಯಾಗಿ ನಾನು ಸೋತಿದ್ದೇನೆ. ನನ್ನನ್ನು ಅರ್ಥಮಾಡಿಕೊಳ್ಳುವಿರಿ ಎಂದು ನಾನು ಭಾವಿಸುತ್ತೇನೆ. ನನ್ನನ್ನು ಕ್ಷಮಿಸಿ. ಈ ಪತ್ರದೊಂದಿಗೆ ನನ್ನ ಆಸ್ತಿಯಪಟ್ಟಿ ಮತ್ತು ಅದರ ತಾತ್ಕಾಲಿಕಮೌಲ್ಯವನ್ನು ಉಲ್ಲೇಖಿಸುತ್ತಿದ್ದೇನೆ. ನಮ್ಮ ಹೊಣೆಗಳಿಗೆ ಹೋಲಿಸಿದರೆ (ಲಯಬಿಲಿಟಿ– ಸಾಲ ಇತ್ಯಾದಿ)ಈ ಆಸ್ತಿಯ ಮೊತ್ತ ಹೆಚ್ಚಾಗಿಯೇ ಇದೆ. ಎಲ್ಲರಿಗೂ ಅವರಿಗೆ ಸಲ್ಲಬೇಕಾದ ಹಣ ಹಿಂದಿರುಗಿಸಲು ನೆರವಾಗುತ್ತದೆ.

ಇಂತಿ,ವಿ.ಜಿ ಸಿದ್ದಾರ್ಥ​

ಸಿದ್ದಾರ್ಥ ಅವರು ಬರೆದಿದ್ದಾರೆ ಎನ್ನಲಾದ ಪತ್ರ

ನಮ್ಮಿಂದ ಕಿರುಕುಳ ಇರಲಿಲ್ಲ
ಸಿದ್ದಾರ್ಥ ಅವರಿಗೆ ನಮ್ಮಿಂದ ಯಾವುದೇ ಕಿರುಕುಳ ಇರಲಿಲ್ಲ. ಅವರು ದೊಡ್ಡ ಮೊತ್ತದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಯುತ್ತಿದೆ. ಸಿದ್ದಾರ್ಥ ಅವರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆಯೂ ಪರಿಶೀಲನೆ ಮಾಡದೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕಾಫಿ ಡೇಗಾಗಿ ಸಿದ್ದಾರ್ಥ ಮಾಡಿರುವ ಸಾಲದ ವಿವರ ಎನ್ನಲಾದ ಪತ್ರ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.