ADVERTISEMENT

ಶಿರಾ ಉಪಚುನಾವಣೆ: ಅನುಭವಿ, ಹೊಸಬರ ಹಣಾಹಣಿ

ತ್ರಿಕೋನ ಸ್ಪರ್ಧೆ, ಪಕ್ಷಾಂತರದಿಂದ ಜೆಡಿಎಸ್‌ಗೆ ಆಘಾತ, ವೃದ್ಧಿಸಿದ ಬಿಜೆಪಿ ಶಕ್ತಿ

ಕೆ.ಜೆ.ಮರಿಯಪ್ಪ
Published 28 ಅಕ್ಟೋಬರ್ 2020, 19:30 IST
Last Updated 28 ಅಕ್ಟೋಬರ್ 2020, 19:30 IST
ಟಿ.ಬಿ.ಜಯಚಂದ್ರ, .ರಾಜೇಶ್‌ಗೌಡ, ಅಮ್ಮಾಜಮ್ಮ
ಟಿ.ಬಿ.ಜಯಚಂದ್ರ, .ರಾಜೇಶ್‌ಗೌಡ, ಅಮ್ಮಾಜಮ್ಮ   

ತುಮಕೂರು: ಅನಿರೀಕ್ಷಿತವಾಗಿ ಎದುರಾಗಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಹಣಾಹಣಿ ನಡೆದಿದ್ದು, ಮೇಲುನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ. ಕಾಂಗ್ರೆಸ್ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದರೆ, ಬಿಜೆಪಿ ಖಾತೆ ತೆರೆಯುವ ತವಕದಲ್ಲಿದೆ. ಜೆಡಿಎಸ್ ಅಧಿಕಾರ ಉಳಿಸಿಕೊಂಡು ಪಕ್ಷದ ನೆಲೆಯನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಸಾಗಿದೆ.

ಅನುಭವಿ ರಾಜಕಾರಣಿ ಟಿ.ಬಿ.ಜಯಚಂದ್ರ ಕಾಂಗ್ರೆಸ್ ಹುರಿಯಾಳು. ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ, ವೈದ್ಯ ಸಿ.ಎಂ.ರಾಜೇಶ್‌ಗೌಡ ಬಿಜೆಪಿಯಿಂದ ಅದೃಷ್ಟವನ್ನು ಪರೀಕ್ಷೆಗೊಡ್ಡಿದ್ದರೆ, ಶಾಸಕರಾಗಿದ್ದ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರನ್ನು ಜೆಡಿಎಸ್ ಕಣ್ಣಕ್ಕಿಳಿಸಿದೆ. ಅನುಭವಿ ರಾಜಕಾರಣಿಯನ್ನು ಇಬ್ಬರು ಹೊಸಬರು ಎದುರಿಸುತ್ತಿದ್ದಾರೆ.

ನಾಯಕರ ಪ್ರತಿಷ್ಠೆ: ಅಭ್ಯರ್ಥಿಗಳಿಗಿಂತ ಮೂರೂ ಪಕ್ಷದ ನಾಯಕರು ತಮ್ಮ ಪ್ರತಿಷ್ಠೆಯನ್ನು ಪಣಕ್ಕೊಡ್ಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ನಂತರಡಿ.ಕೆ.ಶಿವಕುಮಾರ್ ಅವರಿಗೆ ಇದು ಮೊದಲ ಚುನಾವಣೆಯಾಗಿದ್ದು, ತಮ್ಮ ವರ್ಚಸ್ಸು ಪಣಕ್ಕಿಟ್ಟಿದ್ದಾರೆ. ಜಯಚಂದ್ರ ಅವರನ್ನು ಶತಾಯಗತಾಯ ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ‘ಶಕ್ತಿ’ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆಯ ವಿಚಾರ ಮುನ್ನೆಲೆಗೆ ಬಂದಿದ್ದು, ಅವರೂ ಕೂಡ ಫಲಿತಾಂಶದ ಮೂಲಕ ‘ಉತ್ತರ’ ಕೊಡಲು ಬಾಣ ಹೂಡಿದ್ದಾರೆ. ಅದಕ್ಕಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆಯಾ ಸಮುದಾಯದ ಸಚಿವರು, ಮುಖಂಡರನ್ನು ಪ್ರಚಾರಕ್ಕೆ ನಿಯೋಜಿಸಿ ಮತ ‘ಬೇಟೆ’ಯಲ್ಲಿ ನಿರತರಾಗಿದ್ದಾರೆ.

ADVERTISEMENT

ಕೊನೆ ಗಳಿಗೆ ಯಲ್ಲಿಅಖಾಡಕ್ಕೆ ಇಳಿದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಪಕ್ಷದ ನೆಲೆಯನ್ನು ಭದ್ರಪಡಿಸುವ ಪ್ರಯತ್ನದಲ್ಲಿ ಸಾಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷದಿಂದ ಅಂತರ ಕಾಪಾಡಿಕೊಂಡಿದ್ದ ನಾಯಕರನ್ನು ಒಂದೆಡೆ ಸೇರಿಸಿ ಮನವೊಲಿಸಿ ಪ್ರಚಾರಕ್ಕೆ ಇಳಿಸಿದ್ದಾರೆ. ಈ ನಾಯಕರು ಯಾವ ಮಟ್ಟದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಫಲ ನಿಂತಿದೆ.

ಬದಲಾದ ಚಿತ್ರಣ: ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. ಪ್ರತಿ ಚುನಾವಣೆಯಲ್ಲೂ ಠೇವಣಿ ಕಳೆದುಕೊಳ್ಳುತ್ತಾ ಬಂದಿತ್ತು. ಆದರೆ ಈಗ ಪುಟಿದೆದ್ದು, ಸವಾಲೊಡ್ಡಿದೆ. ಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ಜಿಲ್ಲಾ ಮಟ್ಟದ ನಾಯಕರಿಂದ ವೇದಿಕೆ ಸಜ್ಜುಗೊಳಿಸುವ ಕೆಲಸ ನಡೆಯಿತು. ಬೂತ್ ಮಟ್ಟದ ಕಾರ್ಯಕರ್ತರ ಪಡೆಯನ್ನು ರಚಿಸಿ, ಸಿದ್ಧತೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿ ರುವುದು ಪ್ಲಸ್ ಪಾಯಿಂಟ್. ಜೆಡಿಎಸ್‌ನ ಹಲವು ನಾಯಕರನ್ನು ಪಕ್ಷಕ್ಕೆ ಕರೆತಂದು ಎದುರಾಳಿಗೆ ಆರಂಭದಲ್ಲೇ ಆಘಾತ ನೀಡಿದೆ. ಇದರಿಂದ ಆ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದ್ದರೆ, ಕಾಂಗ್ರೆಸ್‌ನ ಕೆಲ ನಾಯಕರನ್ನು ಸೆಳೆದು ಆ ಪಕ್ಷಕ್ಕೂ ಸ್ವಲ್ಪ ಮಟ್ಟಿಗೆ ಬಿಸಿ ಮುಟ್ಟಿಸಿದೆ. ಈ ಪಕ್ಷಾಂತರದ ಲೆಕ್ಕಾಚಾರಗಳು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ ಎಂದು ವಿಶ್ಲೇಷಿಸಲಾ ಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನಾಮಬಲದ ಮೇಲೆ ಯುವ ಸಮುದಾಯವನ್ನು ಬಿಜೆಪಿ ತನ್ನತ್ತ ಸೆಳೆದಿದೆ. ಅಭ್ಯರ್ಥಿ ರಾಜೇಶ್‌ಗೌಡ ತಮ್ಮ ತಂದೆ ಮೂಡಲಗಿರಿಯಪ್ಪ ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ, ಕುಟುಂಬದ ರಾಜಕೀಯ ಬಲ, ಕಳೆದ ಕೆಲ ವರ್ಷಗಳಿಂದ ತಾವು ಕೈಗೊಂಡಿದ್ದ ಸಮಾಜ ಸೇವೆ ಮುಂದಿಟ್ಟುಕೊಂಡು ಮತದಾರರನ್ನು ತಲುಪುತ್ತಿದ್ದಾರೆ.

ಸಾಂಪ್ರದಾಯಿಕ ಮತ: ಜಯಚಂದ್ರ ಅವರು ಪಕ್ಷದ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿದ್ದು, ಅಲ್ಪ ಸಂಖ್ಯಾತರು, ಪರಿಶಿಷ್ಟರು, ಸಣ್ಣಪುಟ್ಟ ಸಮುದಾಯದವರು ಕೈ ಹಿಡಿಯಲಿದ್ದಾರೆ. ಹಿಂದೆ ಮಾಡಿದ್ದ ಅಭಿವೃದ್ಧಿ ಕೆಲಸಗಳು ಗೆಲುವಿನ ದಡ ಸೇರಿಸಬಹುದು ಎಂಬ ನಂಬಿಕೆಯಲ್ಲಿದ್ದಾರೆ. ಜಿಲ್ಲೆಯ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ನಡುವಿನ ಭಿನ್ನಾಭಿಪ್ರಾಯವನ್ನು ವರಿಷ್ಠರು ಶಮನಗೊಳಿಸಿದ್ದಾರೆ. ಜಯಚಂದ್ರ ಜತೆಗೆ ರಾಜಣ್ಣ ಪ್ರಚಾರದಲ್ಲಿ ತೊಡಗಿದ್ದು, ಇದು ಪ್ರಾಮಾಣಿಕ ಪ್ರಯತ್ನವಾದರೆ ಫಲಿತಾಂಶದ ದಿಕ್ಕು ಬದಲಿಸಲಿದೆ ಎಂದು ಹೇಳಲಾಗುತ್ತಿದೆ.

ಗೊಂದಲದ ಗೂಡು: ಕ್ಷೇತ್ರದ ಹಲವು ನಾಯಕರು ಜೆಡಿಎಸ್ ತೊರೆದ ನಂತರ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಾರಥಿಯೇ ಇಲ್ಲದ ಸ್ಥಿತಿಯಲ್ಲಿತ್ತು. ದೇವೇಗೌಡರು ಈ ವಾತಾವರಣ ತಿಳಿಗೊಳಿಸಿ ಪ್ರಚಾರಕ್ಕೆ ಇಳಿದಿದ್ದಾರೆ. ‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡಿದ್ದು, ಜನರ ಮನಸ್ಸಿನಲ್ಲಿ ಉಳಿದಿದೆ. ಇದು ಆಂತರಿಕವಾಗಿ ಗೋಚರಿಸುತ್ತಿದ್ದು, ಜತೆಗೆ ಸತ್ಯನಾರಾಯಣ ಸಾವಿನ ಅನುಕಂಪ, ಮಹಿಳೆ ಎಂಬ ವಿಚಾರ ಕೆಲಸ ಮಾಡಿದರೆ ಯಶಸ್ಸು ಸಿಗಲಿದೆ’ ಎಂದು ಪಕ್ಷದ ನಾಯಕರು ನಂಬಿದ್ದಾರೆ.

ಮತಗಣಿತ: ‘ಜೆಡಿಎಸ್ ನಾಯಕರನ್ನು ಸಾರಾಸಗಟಾಗಿ ಸೆಳೆದು ನೇರವಾಗಿ ಆ ಪಕ್ಷದ ಮತಬುಟ್ಟಿಗೆ ಬಿಜೆಪಿ ಕೈ ಹಾಕಿದ್ದು, ಸಾಕಷ್ಟು ಒಳಹೊಡೆತ ನೀಡಿದೆ. ಜೆಡಿಎಸ್ ಮತಗಳು ಬಿಜೆಪಿ ಕಡೆಗೆ ವಾಲಿ, ಪಕ್ಷದ ಅಭ್ಯರ್ಥಿಯ ಮತಗಳಿಕೆ ಕಡಿಮೆಯಾದರೆ ಇದರಿಂದ ಬಿಜೆಪಿಗೆ ಲಾಭವಾಗಬಹುದು. ಒಂದುವೇಳೆ ಜೆಡಿಎಸ್‌ ಹೆಚ್ಚು ಮತದಾರರನ್ನು ತಲುಪಿ, ಬಿಜೆಪಿಯತ್ತ ಮತಗಳು ವರ್ಗಾವಣೆಯಾಗದಂತೆ ನೋಡಿಕೊಂಡರೆ ಅದರ ಅನುಕೂಲ ಕಾಂಗ್ರೆಸ್‌ಗೆ ಆಗಬಹುದು’ ಎಂಬ ‘ಮತಗಣಿತ’ದ ಲೆಕ್ಕಾಚಾರಗಳು ನಡೆದಿವೆ.

***

2,15,694: ಒಟ್ಟು ಮತದಾರರು

1,10,265:ಪುರುಷರು

1,05,419:ಮಹಿಳೆಯರು

***

ಸ್ಪರ್ಧೆಯಲ್ಲಿರುವ ಒಟ್ಟು ಅಭ್ಯರ್ಥಿಗಳು: 15

ಹಿಂದಿನ ಚುನಾವಣೆಯಲ್ಲಿ ಗೆದ್ದವರು: ಬಿ.ಸತ್ಯನಾರಾಯಣ (ಜೆಡಿಎಸ್)

ಪಡೆದ ಮತಗಳು: 74,338

ಸಮೀಪದ ಸ್ಪರ್ಧಿ: ಟಿ.ಬಿ.ಜಯಚಂದ್ರ (ಕಾಂಗ್ರೆಸ್) ಪಡೆದ ಮತಗಳು: 63,973

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.