ADVERTISEMENT

ಐಎಂಎ ವಂಚನೆ ಪ್ರಕರಣ: ರೋಷನ್‌ ಬೇಗ್‌ಗೆ ಎಸ್‌ಐಟಿ ನೋಟಿಸ್‌

ಐಎಂಎ ವಂಚನೆ ಸಂಬಂಧ ಗುರುವಾರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:14 IST
Last Updated 9 ಜುಲೈ 2019, 19:14 IST
   

ಬೆಂಗಳೂರು: ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಐಎಂಎ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ಅವರಿಂದ ಹಣ ಪಡೆದ ಆರೋಪಕ್ಕೆ ಒಳಗಾಗಿರುವ ಶಿವಾಜಿನಗರ ಶಾಸಕ ರೋಷನ್‌ ಬೇಗ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ನೋಟಿಸ್‌ ನೀಡಿದೆ.

ಇದೇ ಪ್ರಕರಣದಲ್ಲಿ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಕಳೆದ ವಾರ ವಿಚಾರಣೆ ನಡೆಸಿರುವ ಬೆನ್ನಲ್ಲೇ ರೋಷನ್‌ ಬೇಗ್‌ ಅವರಿಗೆ ಎಸ್‌ಐಟಿ ನೋಟಿಸ್‌ ಜಾರಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನೋಟಿಸ್‌ನಲ್ಲಿ ಹೇಳಲಾಗಿದೆ. ‘ಕೆಲವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪೊಲೀಸರು ತಮ್ಮಿಂದ ಹಣ ಪಡೆದಿದ್ದಾರೆ’ ಎಂದು ಮನ್ಸೂರ್‌ ಖಾನ್‌ ಆರೋಪಿಸಿದ್ದಾರೆ ಎನ್ನಲಾದ ಆಡಿಯೊ ಬಿಡುಗಡೆ ಆಗುತ್ತಿದ್ದಂತೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ.

ADVERTISEMENT

ಜೂನ್‌ 8ರಂದು ಮನ್ಸೂರ್‌ ಖಾನ್‌ ಪರಾರಿಯಾದ ಬಳಿಕ ಬಿಡುಗಡೆಯಾದ ಮೊಡಲ ಆಡಿಯೊದಲ್ಲಿ, ‘ಶಿವಾಜಿನಗರ ಶಾಸಕ ರೋಷನ್‌ ಬೇಗ್‌ ತಮ್ಮಿಂದ ಹಣ ಪಡೆದು ಹಿಂತಿರುಗಿಸಿಲ್ಲ. ಇದರಿಂದಾಗಿ ಸಂಕಷ್ಟಕ್ಕೆ ಸಿಕ್ಕಿದೇನೆ’ ಎಂದಿದ್ದರು. ಆದರೆ, ಬೇಗ್‌ ಆರೋಪ ನಿರಾಕರಿಸಿದ್ದರು. ಈ ಆಡಿಯೊದ ಸತ್ಯಾಸತ್ಯತೆಯನ್ನು ಎಸ್ಐಟಿ ಪರಿಶೀಲಿಸುತ್ತಿದೆ.

ಈ ಪ್ರಕರಣದಲ್ಲಿ ಎಸ್‌ಐಟಿ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್‌, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಅವರನ್ನು ಬಂಧಿಸಿದೆ. ಐಎಂಎ ಪರ ವರದಿ ನೀಡಿದ ಆರೋಪ ಇಬ್ಬರೂ ಅಧಿಕಾರಿಗಳ ಮೇಲಿದೆ. ಇದಕ್ಕಾಗಿ ಕ್ರಮವಾಗಿ ₹ 1.5 ಕೋಟಿ ಮತ್ತು ₹ 4.5 ಕೋಟಿ ಲಂಚ ಪಡೆದಿದ್ದಾರೆ ಎಂದೂ ದೂರಲಾಗಿದೆ.ಈ ಮಧ್ಯೆ, ಸೋಮವಾರ ಸಂಜೆಯಿಂದಲೇ ವಿಜಯ ಶಂಕರ್ ಅವರ ಮನೆ ಹಾಗೂ ಕಚೇರಿಯನ್ನು ಶೋಧಿಸಲಾಗಿದೆ.

ಐಎಂಎ ವಂಚನೆ ಸಂಬಂಧ ಇದುವರೆಗೆ ಮೂವರು ಹಿರಿಯ ಅಧಿಕಾರಿಗಳು, ಕಂಪನಿಯ ಏಳು ನಿರ್ದೇಶಕರು ಹಾಗೂ ಒಬ್ಬರು ಆಡಿಟರ್‌ ಒಳಗೊಂಡಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.