ಬೆಂಗಳೂರು: ಕನ್ನಡ ಹಿರಿಯ ಸಾಹಿತಿ ಹಾಗೂ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು 94ನೇ ವರ್ಷದಲ್ಲಿ ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
‘ನಮ್ಮ ಆತ್ಮಸಾಕ್ಷಿಯನ್ನು ಕಲಕಿದ ಮತ್ತು ಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಒಬ್ಬ ಮಹಾನ್ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಎಸ್.ಎಲ್. ಭೈರಪ್ಪ ಅವರು ನಿರ್ಭೀತ ಹಾಗೂ ಮಹಾನ್ ಚಿಂತಕ. ಅವರ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ದಿಗೊಳಿಸಿದ್ದರು. ಅವರ ಬರಹಗಳು ಸಮಾಜದ ಕುರಿತು ಚಿಂತಿಸಲು, ಪ್ರಶ್ನಿಸಲು ಒಂದು ಪೀಳಿಗೆಗೆ ಪ್ರೇರಣೆ ನೀಡಿದವು. ಇತಿಹಾಸ ಹಾಗೂ ಸಂಸ್ಕೃತಿಯ ಕುರಿತು ಅವರಿಗಿದ್ದ ಒಲವು ಮುಂದಿನ ತಲೆಮಾರಿಗೂ ಮಾದರಿಯಾಗಲಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಪ್ರಧಾನಿ ನರೇಂದ್ರ ಮೋದಿ 'ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಖ್ಯಾತ ಸಾಹಿತಿಗಳು, ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬಿಜೆಪಿ ಪಕ್ಷವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
'ಪರ್ವ' ಮತ್ತು 'ಉತ್ತರಕಾಂಡ' ಕಾದಂಬರಿಗಳ ಮೂಲಕ ಮಹಾಭಾರತ ಹಾಗೂ ರಾಮಾಯಣವನ್ನು ನೋಡುವ ಮತ್ತು ಓದುವ ಕ್ರಮವನ್ನೇ ಬದಲಿಸಿದ ಅಭಿಜಾತ ಕಾದಂಬರಿಕಾರ ಪದ್ಮಭೂಷಣ ಎಸ್.ಎಲ್. ಭೈರಪ್ಪನವರು ನಿಧನರಾದರೆಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಭೈರಪ್ಪನವರ ಕಾದಂಬರಿಗಳನ್ನು ನಾನು ನಿಕಟವಾಗಿ ಓದಿದ್ದೇನೆ. ಅವರ ಕಥನ ಶೈಲಿ, ಪಾತ್ರ ಸೃಷ್ಟಿಯ ಪ್ರತಿಭೆಗೆ ಮಾರು ಹೋಗಿದ್ದೇನೆ. ಅವರು ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಲ್ಲೇ ಬರೆದ ಅಪ್ಪಟ ಭಾರತೀಯ ಕಾದಂಬರಿಕಾರರು. ಮೇಲಾಗಿ ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದ 'ಅಮರ ಪ್ರತಿಭೆ' ಎಂಬ ಹೆಮ್ಮೆ ನನ್ನದು. ಅವರ ನಿಧನ ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪರವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಉತ್ಕೃಷ್ಟ ಕಾದಂಬರಿಗಳ ನೀಡಿ, ಲಕ್ಷಾಂತರ ಓದುಗರ ಮನಗೆದ್ದಿದ್ದ, ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡದ ಶ್ರೇಷ್ಠ ಕಾದಂಬರಿಕಾರ, ಪದ್ಮಭೂಷಣ ಪುರಸ್ಕೃತ, ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಡಾ. ಎಸ್.ಎಲ್. ಭೈರಪ್ಪನವರು ಇಂದು ವಿಧಿವಶರಾಗಿದ್ದು ಬಹಳ ನೋವು ತಂದಿದೆ. ಸಾಹಿತ್ಯಾಭಿಮಾನಿಗಳು ಹಾಗೂ ಅವರ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟ ಕನ್ನಡದ ಅದ್ಭುತ ಲೇಖಕ, ಕಾದಂಬರಿಕಾರ ಭೈರಪ್ಪ ಅವರು ಸಾಹಿತ್ಯ ಲೋಕದ ದೊಡ್ಡ ಆಸ್ತಿಯಾಗಿದ್ದರು. ಭೈರಪ್ಪನವರ ನಿಧನದ ಕನ್ನಡದ ಸಾರಸ್ವತ ಲೋಕವನ್ನು ಬಡವಾಗಿಸಿದೆ. ಪ್ರಪಂಚದಾದ್ಯಂತ ದೊಡ್ಡ ಓದುಗ ಬಳಗ ಹೊಂದಿರುವ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅದ್ಭುತವಾದದ್ದು. ಕನ್ನಡದ ಸಾರಸ್ವತ ಲೋಕದ ದಿಗ್ಗಜ ಬರಹಗಾರರಲ್ಲಿ ಒಬ್ಬರು ಎನಿಸಿಕೊಂಡಿದ್ದ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡದ ಪ್ರಮುಖ ಕಾದಂಬರಿಕಾರರಾಗಿದ್ದ ಎಸ್.ಎಲ್. ಭೈರಪ್ಪ ಅವರು 25ಕ್ಕೂ ಅಧಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.