ಬೆಂಗಳೂರು: ‘ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲು 30 x 40 ಅಡಿ ನಿವೇಶನದವರೆಗಿನ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣಪತ್ರ (ಸಿಸಿ) ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದಕ್ಕೆ ವಿನಾಯಿತಿ ನೀಡಲಾಗುತ್ತದೆ’ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ‘ಕರ್ನಾಟಕ ಪಾಲಿಕೆಗಳ ತಿದ್ದುಪಡಿ ಮಸೂದೆ– 2025’ ಮಂಡಿಸಿದ ಸಚಿವರು, ‘ಕಡಿಮೆ ಅಪಾಯವಿರುವ ಕಟ್ಟಡಗಳಿಗೆ ಒಸಿ ಮತ್ತು ಸಿಸಿ ಪಡೆಯುವುದನ್ನು ತೆಗೆದುಹಾಕಲಾಗಿದೆ. 50 x 80 ಅಡಿಯವರೆಗಿನ ನಿವೇಶನದಲ್ಲಿರುವ ಕಟ್ಟಡಗಳಿಗೆ ಒಸಿ, ಸಿಸಿ ಬೇಡ ಎಂಬುದು ನನ್ನ ಸಲಹೆಯಾಗಿದೆ. ಆದರೆ, ಸರ್ಕಾರ 30 x 40 ಅಡಿ ನಿವೇಶನದವರೆಗೆ ನಿಗದಿಪಡಿಸುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದರು.
‘ನಗರ ಪಾಲಿಕೆಗಳಲ್ಲಿ ಕಟ್ಟಡಗಳ ನಕ್ಷೆ ಮಂಜೂರು ಮಾಡುವ ಪ್ರಾಥಮಿಕ ಹಂತದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ‘ವೃತ್ತಿ
ಪರರನ್ನು’ ನಿಯೋಜಿಸಲಾಗುತ್ತದೆ. ನಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅವರು ಅಪ್‌ಲೋಡ್ ಮಾಡುವುದರಿಂದ ತ್ವರಿತವಾಗಿ ನಕ್ಷೆ ಲಭ್ಯವಾಗುತ್ತದೆ. ಆರ್ಕಿಟೆಕ್ಟ್, ಎಂಜಿನಿಯರ್‌ಗಳು, ರಚನಾ ವಿನ್ಯಾಸ ಸಮಾಲೋಚಕರು, ಎಂಇಪಿ ಸಲಹೆಗಾರರು, ಪರಿಸರ ಸಮಾಲೋಚಕರು, ಪಟ್ಟಣ ಯೋಜಕರು ವೃತ್ತಿಪರರು ಪಟ್ಟಿಯಲ್ಲಿರುತ್ತಾರೆ. ಡಿಪ್ಲೊಮಾ ಎಂಜಿನಿಯರ್‌ಗಳಿಗೂ ಅವಕಾಶ ಸಿಗಲಿದೆ’ ಎಂದು ಸಚಿವರು ಹೇಳಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಗಿ ಪಡೆಯಲು ಕನಿಷ್ಠ ಹಾಗೂ ಗರಿಷ್ಠ ಶುಲ್ಕವನ್ನು ನಿಗದಿ ಮಾಡಲಾಗುತ್ತದೆ. ಪಾಲಿಕೆಗಳ ಆಸ್ತಿಯನ್ನು ಸರ್ಕಾರಿ ಇಲಾಖೆಗಳಿಗೆ ನೀಡುವ ಗುತ್ತಿಗೆ ಅವಧಿಯನ್ನು ಐದು ವರ್ಷದಿಂದ 30 ವರ್ಷಕ್ಕೆ ಹೆಚ್ಚಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಧ್ವನಿಮತದ ಮೂಲಕ ‘ಕರ್ನಾಟಕ ಪಾಲಿಕೆಗಳ ತಿದ್ದುಪಡಿ ಮಸೂದೆ– 2025’ಗೆ ಅಂಗೀಕಾರ ನೀಡಲಾಯಿತು.
ಆಯುಕ್ತಾಲಯ: ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಪಟ್ಟಣ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಗಳನ್ನು ಒಟ್ಟುಗೂಡಿಸಿ, ಆಯುಕ್ತಾಲಯವನ್ನಾಗಿಸಿ, ಐಎಎಸ್ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಿಸುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ಮಸೂದೆ– 2025’ಕ್ಕೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ನೀಡಲಾಯಿತು.
ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯನ್ನು ಈ ಮಸೂದೆಯಡಿ ತರಲಾಗಿದ್ದು, 1227 ಚದರ ಕಿ.ಮೀ ವಿಸ್ತಾರ ಹೊಂದಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವ್ಯಾಪ್ತಿಯನ್ನು 500 ಚದರ ಕಿ.ಮೀ.ಗೆ ಇಳಿಸಿ, 716 ಚದರ ಕಿ.ಮೀ. ವಿಸ್ತೀರ್ಣದ ಯೋಜನಾ ಪ್ರಾಧಿಕಾರದ ಅಧಿಕಾರವನ್ನು ಬಿಬಿಎಂಪಿಗೆ ನೀಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.