ADVERTISEMENT

ಸ್ಮಾರ್ಟ್‌ ಮೀಟರ್‌: 9 ಸುಳ್ಳು ಹೇಳಿದ ಇಂಧನ ಸಚಿವರು; ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 14:35 IST
Last Updated 1 ಏಪ್ರಿಲ್ 2025, 14:35 IST
ಸಿ.ಎನ್‌.ಅಶ್ವತ್ಥನಾರಾಯಣ
ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ‘ಸ್ಮಾರ್ಟ್‌ ಮೀಟರ್‌ ಟೆಂಡರ್‌ ವಿಚಾರದಲ್ಲಿ ಇಂಧನ ಸಚಿವರು ಮತ್ತು ಅಧಿಕಾರಿಗಳು ಒಂಬತ್ತು ಸುಳ್ಳುಗಳನ್ನು ಹೇಳಿ ರಾಜ್ಯದ ಜನರ ದಾರಿ ತಪ್ಪಿಸಿದ್ದಾರೆ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ದೂರಿದರು.

‘ಸಚಿವರು ಮತ್ತು ಅಧಿಕಾರಿಗಳು ನಾವು ಎತ್ತಿರುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

‘ಪ್ರಿ–ಬಿಡ್‌ನಲ್ಲಿ ಯಾರೂ ಭಾಗವಹಿಸಿರಲಿಲ್ಲ ಎಂದೂ ಹೇಳಿದ್ದಾರೆ. ನಮಗಿರುವ ಮಾಹಿತಿಯ ಪ್ರಕಾರ 10 ಜನರು ಪ್ರಿ–ಬಿಡ್‌ನಲ್ಲಿ ಭಾಗವಹಿಸಿದ್ದರು ಮತ್ತು 117 ಜನ ಮಾಹಿತಿ ಕೇಳಿದ್ದರು. ಈ ಅಂಶವನ್ನು ಮರೆಮಾಚಿದ್ದಾರೆ. ಕೇಂದ್ರದ ಯಾವುದೇ ನಿಯಮಾವಳಿ ಪಾಲಿಸಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಕೇಂದ್ರದ ನಿಯಮಾವಳಿ ಪ್ರಕಾರ ಐಎಸ್‌ 16444 ಸ್ಟಾಂಡರ್ಡ್‌ ಇರುವ ಹತ್ತಕ್ಕೂ ಹೆಚ್ಚು ಜನ ರಾಜ್ಯದಲ್ಲಿ ಇದ್ದಾರೆ. ಅವರನ್ನು ಇಂಧನ ಇಲಾಖೆ ಪರಿಗಣಿಸಬೇಕಿತ್ತು. 1 ಲಕ್ಷ ಸ್ಮಾರ್ಟ್‌ ಮೀಟರ್‌ ಉತ್ಪಾದಿಸಿ ವಿತರಿಸಿದ ಅನುಭವ ಬೇಕಿತ್ತು. ಟೆಂಡರ್‌ ₹200 ಕೋಟಿಗಿಂತಲೂ ಹೆಚ್ಚು ಮೊತ್ತದ್ದಾದರೆ ಗ್ಲೋಬಲ್‌ ಟೆಂಡರ್ ಕರೆಯಬೇಕಿತ್ತು. ಪ್ರಿ–ಬಿಡ್‌ ವೇಳೆ ಈ ಅಂಶಗಳನ್ನು ಹೇಳಿದ್ದರೂ ಅದನ್ನು ಪರಿಗಣಿಸಿಲ್ಲ. ಸ್ಮಾರ್ಟ್‌ ಮೀಟರ್‌ಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಚಿಲ್ಲರೆ ಮಾರಾಟ ಮಳಿಗೆಯಲ್ಲಿ (ರಿಟೇಲ್‌ ಔಟ್‌ಲೆಟ್‌) 5 ವರ್ಷ ಅನುಭವ ಇರಬೇಕೆಂಬ ನಿಯಮವನ್ನೂ ಪರಿಗಣಿಸಿಲ್ಲ’ ಎಂದು ಅಶ್ವತ್ಥನಾರಾಯಣ ದೂರಿದರು.

‘ಮೀಟರ್‌ ಡೇಟಾ ಮ್ಯಾನೇಜ್‌ಮೆಂಟ್‌ ಸಲ್ಯುಷನ್‌ ಅನ್ನು ‘ಜಾಗತಿಕ’ವಾಗಿ ಪರಿಗಣಿಸಿಲ್ಲ. ಕಪ್ಪುಪಟ್ಟಿ ಸೇರಿದವರು ಅಥವಾ ಡಿಬಾರ್‌ ಆದವರನ್ನು ಪರಿಗಣಿಸಬಾರದು ಎಂಬ ನಿಯಮವೂ ಇದೆ. ಅದನ್ನೂ ಉಲ್ಲಂಘಿಸಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿದಾಗ ಕೇಂದ್ರದ ನಿಯಮಾವಳಿಯಂತೆ ಟೆಂಡರ್‌ ಕರೆದಿದ್ದೇವೆ ಎಂಬುದು ಅಪ್ಪಟ ಸುಳ್ಳು’ ಎಂದು ಹೇಳಿದರು.

‘ಎಲ್ಲ ಗ್ರಾಹಕರಿಗೆ ಫೀಡರ್‌, ಟ್ರಾನ್ಸ್‌ಫಾರ್ಮರ್‌ಗಳಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಸಿದ ಬಳಿಕವೇ ಹೊಸ ಗ್ರಾಹಕರಿಗೆ ಕಡ್ಡಾಯ ಮಾಡಬಹುದೆಂದು ಕೇಂದ್ರ ವಿದ್ಯುತ್‌ ಪ್ರಾಧಿಕಾರವು (ಸಿಇಸಿ) ತಿಳಿಸಿದೆ. ಈ ನಿಯಮವನ್ನೂ ಉಲ್ಲಂಘಿಸಿದ್ದಾರೆ’ ಎಂದರು.

ಶಾಸಕ ಎಸ್‌.ಆರ್‌.ವಿಶ್ವನಾಥ್ ಮಾತನಾಡಿ, ‘ನಮ್ಮ ಆರೋಪ ಹಿಟ್‌ ಅಂಡ್‌ ರನ್‌ ಅಲ್ಲ, ಮುಂದಿನ ಕ್ರಮಗಳ ಕುರಿತು ಈಗಾಗಲೇ ಚರ್ಚಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.