ADVERTISEMENT

ಸ್ಮಾರ್ಟ್‌ ಮೀಟರ್‌ ಟೆಂಡರ್‌ನಲ್ಲಿ ಅಕ್ರಮದ ವಾಸನೆ: ಸಚಿವ KJ ಜಾರ್ಜ್ ಹೇಳಿದ್ದೇನು?

ಸ್ಮಾರ್ಟ್‌ ಮೀಟರ್‌ ಖರೀದಿ ಟೆಂಡರ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 0:50 IST
Last Updated 27 ಮಾರ್ಚ್ 2025, 0:50 IST
<div class="paragraphs"><p>ಕೆ.ಜೆ. ಜಾರ್ಜ್</p></div>

ಕೆ.ಜೆ. ಜಾರ್ಜ್

   

ಬೆಂಗಳೂರು: ಸ್ಮಾರ್ಟ್‌ ಮೀಟರ್‌ ಖರೀದಿ ಟೆಂಡರ್‌ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಒಂದು ವೇಳೆ ಯಾರಾದರೂ ಸೂಕ್ತ ದಾಖಲೆಗಳನ್ನು ಒದಗಿಸಿದರೆ ಟೆಂಡರ್‌ ರದ್ದುಪಡಿಸಲು ಅವಕಾಶವಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾಡಿರುವ ಆರೋಪ ‘ಹಿಟ್‌ ಅಂಡ್‌ ರನ್‌’ನಂತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಸ್ಮಾರ್ಟ್‌ ಮೀಟರ್‌ ಹೊಸ ಸಂಪರ್ಕ ಮತ್ತು ತಾತ್ಕಾಲಿಕ ಸಂಪರ್ಕಗಳಿಗೆ ಮಾತ್ರ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಇರುವ ಗ್ರಾಹಕರಿಗೆ ಅಳವಡಿಸುತ್ತಿಲ್ಲ. ಇತರ ರಾಜ್ಯಗಳಲ್ಲಿ ಎಲ್ಲ ಗ್ರಾಹಕರಿಗೂ ಕಡ್ಡಾಯ ಮಾಡಲಾಗಿದೆ. ಸ್ಮಾರ್ಟ್‌ ಮೀಟರ್‌ ದರ ಕೂಡ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕಡಿಮೆಯೇ ಇದೆ ಎಂದ ಅವರು, ರಾಜಶ್ರೀ ಕಂಪನಿಯನ್ನು ಎಲ್ಲೂ ಕಪ್ಪು ಪಟ್ಟಿಗೆ ಸೇರಿಸಿಲ್ಲ. ಉತ್ತರಾಂಚಲದಲ್ಲಿ ಎರಡು ವರ್ಷಗಳಿಗೆ ಪ್ರತಿಬಂಧ ವಿಧಿಸಲಾಗಿತ್ತು. ಅದನ್ನು ತೆರವು ಮಾಡಲಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೂ ರಾಜಶ್ರೀಗೆ ಗುತ್ತಿಗೆ ನೀಡಲಾಗಿದೆ ಎಂದು ಜಾರ್ಜ್‌ ಹೇಳಿದರು.

ಸ್ಮಾರ್ಟ್ ಮೀಟರ್‌ಗಳಿಗೆ ಸಿಂಗಲ್‌ ಫೇಸ್‌ಗೆ ₹4,998, ತ್ರೀಫೇಸ್‌ಗೆ ₹₹8,922  ನಿಗದಿ ಮಾಡಲಾಗಿದೆ. ಇದು ಇತರ ರಾಜ್ಯಗಳಿಗಿಂತಲೂ ಕಡಿಮೆ ಬೆಲೆ ಎಂದು ಅವರು ಸಮರ್ಥಿಸಿಕೊಂಡರು.

‘ಬಿಜೆಪಿ ಮತ್ತು ಜೆಡಿಎಸ್‌ನವರು ನನ್ನ ವಿರುದ್ಧ ಡಿ.ಕೆ.ರವಿ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಆರೋಪಗಳನ್ನು ಮಾಡಿದರು. ಸಿಬಿಐ ಮತ್ತು ಸಿಒಡಿ ತನಿಖೆಗಳ ಬಳಿಕ ಆರೋಪ ಸುಳ್ಳು ಎಂಬುದು ಸಾಬೀತಾಯಿತು. ಆ ಬಳಿಕ ಅವರು ವಿಷಾದದ ಒಂದು ಮಾತನ್ನೂ ಆಡಿಲ್ಲ. ಈಗ ಮತ್ತೊಂದು ಆರೋಪ ಹೊರಿಸಲು ಮುಂದಾಗಿದ್ದಾರೆ’ ಎಂದು ಜಾರ್ಜ್‌ ಹೇಳಿದರು.

ರಾಜ್ಯದಲ್ಲಿ ಹಲವು ಕಡೆಗಳಲ್ಲಿ ಫೀಡರ್‌ಲೇನ್ ಮತ್ತು ಸಬ್‌ಸ್ಟೇಷನ್‌ಗಳಲ್ಲಿ ಓವರ್‌ಲೋಡ್‌ ಆದ ಪರಿಣಾಮ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದು ಹೇಳಿದ ಅವರು, ಈ ವರ್ಷ 56 ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸಲು ಟೆಂಡರ್‌ ಕರೆಯಲಾಗಿದೆ. ಮುಂದಿನ ವರ್ಷ 100 ಸಬ್‌ ಸ್ಟೇಷನ್‌ಗಳ ಮೂಲಕ ವಿದ್ಯುತ್ ಪ್ರಸರಣವನ್ನು ಬಲಪಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

‘ಸನ್‌ ಸ್ಟ್ರೋಕ್‌’ ಪ್ರಭಾವವೇ ಹೆಚ್ಚು: ವಿ.ಸುನಿಲ್‌ಕುಮಾರ್

‘ವಿದ್ಯುತ್‌ ಸ್ಮಾರ್ಟ್‌ ಮೀಟರ್ ಅಳವಡಿಕೆ ಹಗರಣವು ರಾಜ್ಯದ ಶೇ 60 ಲಂಚ ಸರ್ಕಾರದ ಮತ್ತೊಂದು ಸಾಧನೆ. ಇಂಧನ ಸಚಿವ ಜಾರ್ಜ್‌ ಎಷ್ಟೇ ಸ್ಪಷ್ಟೀಕರಣ ನೀಡಿದರೂ ಹಗರಣ ಮುಚ್ಚಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಈ ಹಗರಣದ ಹಿಂದೆ ಜಾರ್ಜ್‌ ಅವರ ‘ಸನ್‌ ಸ್ಟ್ರೋಕ್‌’ ಹೆಚ್ಚು ಪ್ರಭಾವ ಬೀರಿದಂತೆ ಕಾಣುತ್ತಿದೆ’ ಎಂದು ಶಾಸಕ ವಿ.ಸುನಿಲ್‌ಕುಮಾರ್‌ ಹೇಳಿದ್ದಾರೆ. ‘ದೇಶದ ಯಾವುದೇ ರಾಜ್ಯದಲ್ಲಿ ಪ್ರತಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ₹9200 ನಿಗದಿ ಮಾಡಿದ ಉದಾಹರಣೆ ಇಲ್ಲ. ಜನರ ಮೇಲೆ ಹೇರುತ್ತಿರುವ ಬೆಲೆ ಏರಿಕೆಯ ನೇರ ಬರೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.