ADVERTISEMENT

ಉತ್ತರಖಂಡದಲ್ಲಿ ಹಿಮಪಾತ: ಕನ್ನಡಿಗರ ಮೃತ ದೇಹ ಪತ್ತೆ 

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 11:08 IST
Last Updated 10 ಅಕ್ಟೋಬರ್ 2022, 11:08 IST
   

ಬೆಂಗಳೂರು: ಉತ್ತರಖಂಡದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಕರ್ನಾಟಕದ ವಿಕ್ರಮ್‌ ಮತ್ತು ರಕ್ಷಿತ್‌ ಎಂಬುವರು ಮೃತಪಟ್ಟಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ರಕ್ಷಿತ್‌ ಮತ್ತು ವಿಕ್ರಮ್‌ ಅವರ ಮೃತ ದೇಹ ಇಂದು ರಾತ್ರಿ ಒಳಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿವೆ. ಮೃತ ದೇಹಗಳನ್ನು ತರಿಸಲು ಆಗುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇವರಿಬ್ಬರು ನೆಹರು ಇನ್ಸ್‌ಟಿಟ್ಯೂಟ್‌ ಮೂಲಕ ಉತ್ತರಖಂಡಕ್ಕೆ ಹೋಗಿದ್ದರು. ಈ ಹಿಮಪಾತದಲ್ಲಿ ಒಟ್ಟು 27 ಮಂದಿ ಮೃತಪಟ್ಟಿದ್ದಾರೆ.

‘ಡೆಹ್ರಾಡೂನ್‌ನ ಉತ್ತರಕಾಶಿ ಬಳಿ ಹೋದ ವಾರ ಉಂಟಾಗಿದ್ದ ಹಿಮಪಾತದಿಂದಾಗಿ ಮೃತಪಟ್ಟಿದ್ದ ತರಬೇತಿ ನಿರತ ಪರ್ವತಾರೋಹಿಗಳಲ್ಲಿ ಕರ್ನಾಟಕದ ಡಾ.ಕೆ.ರಕ್ಷಿತ್‌ ಹಾಗೂ ಎಂ.ವಿಕ್ರಂ ಎಂಬುವರು ಸೇರಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದರು.

ADVERTISEMENT

‘ಉತ್ತರಕಾಶಿಯ ದ್ರೌಪದಿ ಕಾ ದಂಡ–2 ಶಿಖರ ಏರಿದ್ದ 29 ಮಂದಿಯನ್ನೊಳಗೊಂಡ ಪರ್ವತಾರೋಹಿಗಳ ತಂಡದಲ್ಲಿ ರಕ್ಷಿತ್‌ ಹಾಗೂ ವಿಕ್ರಂ ಅವರೂ ಇದ್ದರು. ಇವರಿಬ್ಬರು ಶಿಬಿರಾರ್ಥಿಗಳಾಗಿದ್ದರು’ ಎಂದು ಹೇಳಿದ್ದರು.

ಇಬ್ಬರೂ ಎನ್‌ಐಎಂನಿಂದ ಆಯೋಜಿಸಲಾಗುವ 28 ದಿನಗಳ ಪ್ರಾಥಮಿಕ ಪರ್ವತಾರೋಹಣ ಕೋರ್ಸ್‌ ಪೂರ್ಣಗೊಳಿಸಿದ್ದರು. ಬಳಿಕ ಅಲ್ಲೇ 28 ದಿನಗಳ ಅಡ್ವಾನ್ಸ್ಡ್‌ ಮೌಂಟನೀರಿಂಗ್‌ ಕೋರ್ಸ್‌ಗೆ (ಎಎಂಸಿ) ದಾಖಲಾಗಿದ್ದರು.

ಬೆಂಗಳೂರಿನ ಶ್ರೀನಗರ ನಿವಾಸಿಯಾಗಿರುವ ರಕ್ಷಿತ್‌, ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಕನಸು ಹೊಂದಿದ್ದರು.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.