ADVERTISEMENT

ಜಾಲತಾಣದ ಪೋಸ್ಟ್‌ ವಿರುದ್ಧ ಎಫ್‌ಐಆರ್‌: ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 16:18 IST
Last Updated 9 ಫೆಬ್ರುವರಿ 2026, 16:18 IST
<div class="paragraphs"><p>ಸಾಮಾಜಿಕ ಜಾಲತಾಣ</p></div>

ಸಾಮಾಜಿಕ ಜಾಲತಾಣ

   

–ಗೆಟ್ಟಿ ಚಿತ್ರ

ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳನ್ನು ಯಾಂತ್ರಿಕವಾಗಿ ದಾಖಲಿಸುವುದು ಮತ್ತು ಬಂಧನಗಳನ್ನು ತಪ್ಪಿಸಲು ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಜಾರಿ ಮಾಡಲಾಗಿದೆ.

ADVERTISEMENT

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಈ ಬಗ್ಗೆ ಆದೇಶ ಹೊರಡಿಸಿದ್ದು, ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹಾಗೆಯೇ ಈ ಮಾರ್ಗಸೂಚಿಗಳನ್ನು ಎಲ್ಲಾ ಸಿಬ್ಬಂದಿಗೆ ತಿಳಿಸುವಂತೆಯೂ ಸೂಚಿಸಿದ್ದಾರೆ.  

ಈ ಮಾರ್ಗಸೂಚಿಗಳು ಹಲವು ಸಂದರ್ಭಗಳಲ್ಲಿ ಪೊಲೀಸರು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ನಿರ್ದೇಶನ ನೀಡುತ್ತವೆ.  

‘ಇಮ್ರಾನ್ ಪ್ರತಾಪಗಢಿ ಮತ್ತು ಗುಜರಾತ್ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿ ಪ್ರಾಥಮಿಕ ವಿಚಾರಣೆ ನಡೆಸದೆಯೇ ಪೊಲೀಸರು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಸಂಬಂಧಿಸಿದ ಪ್ರಕರಣಗಳನ್ನು ಯಾಂತ್ರಿಕವಾಗಿ ದಾಖಲಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ತೆಲಂಗಾಣ ಹೈಕೋರ್ಟ್ ರೂಪಿಸಿದ ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್‌ ಸಮರ್ಥಿಸಿದೆ. ಆದ್ದರಿಂದ, ಅದೇ ಮಾರ್ಗಸೂಚಿಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂದು ಸಲೀಂ ಹೇಳಿದ್ದಾರೆ.

‘ಮಾನಹಾನಿ ಅಥವಾ ಅಂತಹುದೇ ಅಪರಾಧಗಳಿಗೆ ಯಾವುದೇ ಎಫ್‌ಐಆರ್ ದಾಖಲಿಸುವ ಮೊದಲು, ದೂರುದಾರನು ಕಾನೂನು ಪ್ರಕಾರ ‘ನೊಂದ ವ್ಯಕ್ತಿ’ ಎಂಬುದನ್ನು ಪರಿಶೀಲಿಸಬೇಕು. ಸಂಜ್ಞೆಯ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ವಿಚಾರಣೆ/ತನಿಖೆ ನಡೆಸಬೇಕು’ ಎಂದು ತಿಳಿಸಿದ್ದಾರೆ.

‘ಕಠಿಣ, ಅವಮಾನಕಾರಿ ಅಥವಾ ಟೀಕಾತ್ಮಕ ರಾಜಕೀಯ ಭಾಷಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾಂತ್ರಿಕವಾಗಿ ಪ್ರಕರಣಗಳನ್ನು ದಾಖಲಿಸಬಾರದು. ಭಾಷಣವು ಹಿಂಸೆಗೆ ಪ್ರಚೋದನೆ ನೀಡಿದಾಗ ಅಥವಾ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ತಕ್ಷಣದ ಅಪಾಯ ಉಂಟು ಮಾಡಿದಾಗ ಮಾತ್ರ ಕ್ರಿಮಿನಲ್ ಕಾನೂನನ್ನು ಅನ್ವಯಿಸಬಹುದು. ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ಇರುವ ರಾಜಕೀಯ ಅಭಿವ್ಯಕ್ತಿಯ ಸ್ವಾತಂತ್ರ್ಯದ ಸಂವಿಧಾನಾತ್ಮಕ ರಕ್ಷಣೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದಿದ್ದಾರೆ.

‘ಮಾನಹಾನಿಯನ್ನು ಗಂಭೀರ ಸ್ವರೂಪದ್ದಲ್ಲದ ಅಪರಾಧ ಎಂದು ವರ್ಗೀಕರಿಸಿರುವುದರಿಂದ, ಇಂತಹ ವಿಷಯಗಳಲ್ಲಿ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ. ಸಂಬಂಧಿತ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಲು ದೂರುದಾರರಿಗೆ ನಿರ್ದೇಶಿಸಬೇಕು. ಮ್ಯಾಜಿಸ್ಟ್ರೇಟ್ ಅವರು ನಿರ್ದಿಷ್ಟ ಆದೇಶ ನೀಡಿದ ನಂತರ ಮಾತ್ರ ಪೊಲೀಸ್ ಕ್ರಮ ಕೈಗೊಳ್ಳಬಹುದು’ ಎಂದು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.