ADVERTISEMENT

ಸೋಮಣ್ಣ ಮಂತ್ರಿಯಾಗಿರಲು ನಾಲಾಯಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 9:48 IST
Last Updated 23 ಅಕ್ಟೋಬರ್ 2022, 9:48 IST
 ಸಿದ್ದರಾಮಯ್ಯ
ಸಿದ್ದರಾಮಯ್ಯ   

ದಾವಣಗೆರೆ: ಅಧಿಕಾರದಲ್ಲಿ ಇರುವವರಿಗೆ ತಾಳ್ಮೆ, ಸಹನೆ, ಜನರ ಸಂಕಷ್ಟಗಳನ್ನು ಪರಿಹರಿಸುವ ಮನಸ್ಸು ಇರಬೇಕು. ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಮೇಲೆ ಕೈ ಮಾಡಿದ ಸಚಿವ ವಿ. ಸೋಮಣ್ಣ ಅಧಿಕಾರದಲ್ಲಿ ಇರಲು ನಾಲಾಯಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ಪಿ. ರಾಜಕುಮಾರ ಅವರ ಅಂತಿಮ ದರ್ಶನಕ್ಕೆ ದಾವಣಗೆರೆಗೆ ಬಂದಿದ್ದ ವೇಳೆ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

ಮಹಿಳೆಯ ಮೇಲೆ ಕೈ ಮಾಡಿರುವುದು ಅವರ ಸಂಸ್ಕೃತಿಯನ್ನು ತೊರಿಸುತ್ತದೆ. ಮನುಷ್ಯನಾದವನಿಗೆ ಮಾನವೀಯತೆ ಇರಬೇಕು. ಮಾನವೀಯತೆ ಇರುವವರಿಗೆ ಸಂಸ್ಕೃತಿ ಇರುತ್ತದೆ. ಬಿಜೆಪಿಗೆ ಮಾನವೀಯತೆಯೇ ಇಲ್ಲ. ಇನ್ನು ಸಂಸ್ಕೃತಿ ಎಲ್ಲಿಂದ ಬರುತ್ತದೆ? ಸೋಮಣ್ಣ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿದರು.

ADVERTISEMENT

‘20ಕ್ಕೂ ಅಧಿಕ ದಿನಗಳ ಕಾಲ ಕರ್ನಾಟಕದಲ್ಲಿ ಭಾರತ್‌ ಜೋಡೊ ಯಾತ್ರೆ ನಡೆಯಿತು. ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ಬಿಜೆಪಿ ಜನರಿಗೆ ಬೇಡವಾಗಿದೆ. ಅದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಈ ಯಾತ್ರೆಯಲ್ಲಿ ಜನರು ಭಾಗವಹಿಸಿದ್ದಾರೆ. ಇಂದು ಯಾತ್ರೆ ತೆಲಂಗಾಣ ಪ್ರವೇಶಿಸುತ್ತಿದೆ. ಅಲ್ಲಿ ನಾನಿದ್ದೆ. ನನ್ನ ಆಪ್ತ ಆಗಿದ್ದ ರಾಜಕುಮಾರ್‌ ನಿಧನರಾಗಿರುವುದು ಗೊತ್ತಾಗಿ ಇಲ್ಲಿಗೆ ಬಂದೆ’ ಎಂದು ತಿಳಿಸಿದರು.

‘ಸರ್ಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡವರ ಮಕ್ಕಳು ಓದುತ್ತಾರೆ. ಅಲ್ಲಿ ಪ್ರತಿ ತಿಂಗಳು ₹ 100 ಕೊಡಬೇಕು ಎಂದು ವಸೂಲಿಗೆ ಹೊರಟಿದ್ದರು. ನಾವು ಇದನ್ನು ಪ್ರಶ್ನಿಸಿದ ಮೇಲೆ ಕೈಬಿಟ್ಟಿದ್ದಾರೆ’ ಎಂದರು.

ಮಾಜಿ ಸಚಿವರಾದ ಎಂ.ಬಿ. ಪಾಟೀಲ, ಎಸ್‌.ಎಸ್‌. ಮಲ್ಲಿಕಾರ್ಜುನ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.