ADVERTISEMENT

'ಗೃಹ ಜ್ಯೋತಿ' ಗ್ಯಾರಂಟಿ ಯೋಜನೆ: ಹೊಸ ಗ್ರಾಹಕರಿಗೆ 'ಅರ್ಧ ಜ್ಯೋತಿ'

ಸರಾಸರಿ ವಿದ್ಯುತ್ ಬಳಕೆ ಪ್ರಮಾಣ ಪರಿಷ್ಕರಿಸದ ರಾಜ್ಯ ಸರ್ಕಾರ; ಹೆಚ್ಚುವರಿ ಹೊರೆಯ ಆತಂಕ?

ರಾಜೇಶ್ ರೈ ಚಟ್ಲ
Published 1 ಮಾರ್ಚ್ 2025, 19:42 IST
Last Updated 1 ಮಾರ್ಚ್ 2025, 19:42 IST
   

ಬೆಂಗಳೂರು: ಪ್ರತಿ ಗೃಹ ಬಳಕೆದಾರರಿಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುವ ರಾಜ್ಯ ಸರ್ಕಾರದ ‘ಗೃಹ ಜ್ಯೋತಿ’ ಗ್ಯಾರಂಟಿ ಯೋಜನೆಯ ಪೂರ್ಣ ಲಾಭವು ಹೊಸದಾಗಿ ಮನೆ ಕಟ್ಟಿದವರು ಹಾಗೂ ಬಾಡಿಗೆ ಮನೆ ಬದಲಾಯಿಸಿದವರಿಗೆ ಸಿಗುತ್ತಿಲ್ಲ.

2022–23ರ ಆರ್ಥಿಕ ವರ್ಷದಲ್ಲಿ ಬಳಕೆ ಮಾಡಿದ ವಿದ್ಯುತ್‌ ಯೂನಿಟ್‌ನ ಸರಾಸರಿ ಪ್ರಮಾಣ ಆಧರಿಸಿ 2023ರ ಜುಲೈ 1ರಿಂದ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದೇ ವರ್ಷದ ಆಗಸ್ಟ್‌ 1ರಿಂದ ಯೋಜನೆಯ ಲಾಭ ಗ್ರಾಹಕರಿಗೆ ಸಿಗುತ್ತಿದೆ. ಯೋಜನೆ ಜಾರಿಯಾದ ಬಳಿಕ, ವಿದ್ಯುತ್ ಬಳಕೆಯ ಸರಾಸರಿ ಪ್ರಮಾಣವನ್ನು ಪರಿಷ್ಕರಿಸದೇ ಇದ್ದುದರಿಂದಾಗಿ, ಹೊಸತಾಗಿ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ಯೋಜನೆಯ ಪೂರ್ಣ ಲಾಭದಿಂದ ವಂಚಿತರಾಗಿದ್ದಾರೆ.

ಈ ಯೋಜನೆ ಜಾರಿಗೆ 2024ರ ಜುಲೈ ತಿಂಗಳಿಗೆ ವರ್ಷ ತುಂಬಿದೆ. ಒಂದು ವರ್ಷ ಪೂರ್ಣಗೊಂಡ ಬಳಿಕ ಸರಾಸರಿ ವಿದ್ಯುತ್‌ ಯೂನಿಟ್‌ ಬಳಕೆಯನ್ನು ಪರಿಷ್ಕರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಪ್ರಕಟಿಸಿದ್ದರು. ಆದರೆ, ಈವರೆಗೂ ಪರಿಷ್ಕರಣೆ ಆಗಿಲ್ಲ.

ADVERTISEMENT

ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ‘ಬಳಕೆ ಇತಿಹಾಸ’ ಇಲ್ಲದೇ ಇರುವುದರಿಂದ ಅಂತಹ ಬಳಕೆದಾರರು, ರಾಜ್ಯದ ಒಟ್ಟು ಗ್ರಾಹಕರು ಬಳಕೆ ಮಾಡುತ್ತಿದ್ದ ವಿದ್ಯುತ್‌ ಪ್ರಮಾಣದ ಸರಾಸರಿ ಲೆಕ್ಕ ಹಾಕಿ, ತಿಂಗಳಿಗೆ ಗರಿಷ್ಠ 53 ಯೂನಿಟ್‌ ಮತ್ತು ಅದಕ್ಕೆ ಶೇ 10ರಷ್ಟು ಹೆಚ್ಚುವರಿ ಸೇರಿ ಒಟ್ಟು 58 ಯೂನಿಟ್‌ ‘ಉಚಿತ ವಿದ್ಯುತ್‌’ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಅಂದರೆ, 58 ಯೂನಿಟ್‌ ಮೀರಿ, 200 ಯೂನಿಟ್‌ ಬಳಕೆಯ ಮಿತಿಯ ಒಳಗೆ ವಿದ್ಯುತ್‌ ಬಳಕೆ ಮಾಡುತ್ತಿದ್ದರೂ, ಬಳಸಲಾದ ಹೆಚ್ಚುವರಿ ಯೂನಿಟ್‌ನ ಶುಲ್ಕವನ್ನು ಪಾವತಿಸಲೇಬೇಕಿದೆ.

‘ಗೃಹ ಜ್ಯೋತಿ’ ಯೋಜನೆಯನ್ನು ಜಾರಿ ಮಾಡಿದಾಗ ಕೆಲವು ನಿಯಮ ಗಳನ್ನು ಸರ್ಕಾರ ರೂಪಿಸಿತ್ತು. 

‘ಆರ್ಥಿಕ ವರ್ಷದ ವಿದ್ಯುತ್‌ ಬಳಕೆ ಆಧಾರದಲ್ಲಿ ಪ್ರತಿ ವರ್ಷ ಸರಾಸರಿ ಯೂನಿಟ್‌ ಬಳಕೆಯನ್ನು ನಿರ್ಣಯಿಸಿ, ಹೊಸತಾಗಿ ಸಂಪರ್ಕ ಪಡೆದವರಿಗೂ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್‌ ಸೌಲಭ್ಯವನ್ನು ವಿಸ್ತರಿಸಬೇಕಿತ್ತು. ಸರಾಸರಿ ಬಳಕೆ ಪ್ರಮಾಣವನ್ನು ಪರಿಷ್ಕರಿಸದ ಕಾರಣ, ಹೊಸ ಮನೆ ಕಟ್ಟಿದ ಗ್ರಾಹಕರು 200 ಯೂನಿಟ್‌ ಒಳಗೆ ವಿದ್ಯುತ್‌ ಬಳಕೆ ಮಾಡುತ್ತಿದ್ದರೂ ಕೇವಲ ರಾಜ್ಯ ಸರ್ಕಾರ ಸರಾಸರಿಯ 58 ಯೂನಿಟ್‌ ವಿದ್ಯುತ್‌ನ ಉಚಿತ ಪಡೆಯುತ್ತಾರೆಯೇ ಹೊರತು, ‘ಉಚಿತ 200 ಯೂನಿಟ್‌ ವಿದ್ಯುತ್’ ಯೋಜನೆಯ ಲಾಭ ಪಡೆಯಲು ಸಾಧ್ಯ ವಾಗುತ್ತಿಲ್ಲ’ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.

‘ಬಾಡಿಗೆದಾರರಿಗೆ ಸೌಲಭ್ಯದ ಪ್ರಯೋಜನ ತಲುಪಿಸಲು ‘ಡಿ’ ಲಿಂಕ್‌ ವ್ಯವಸ್ಥೆ ಕಲ್ಪಿಸಿದ್ದರಿಂದ ಬಾಡಿಗೆ ಮನೆಯಲ್ಲಿ ಇರುವವರಿಗೆ ಹಿಂದಿನ ಸರಾಸರಿ ಬಳಕೆ ಪ್ರಮಾಣ ಮುಂದುವರಿಸಲು ಅವಕಾಶ ಸಿಕ್ಕಿದೆ. ಬಳಕೆ ಪ್ರಮಾಣವನ್ನು ಪರಿಷ್ಕರಿಸಿದರೆ ₹500ಕೋಟಿ–₹600 ಕೋಟಿಯಷ್ಟು ಆರ್ಥಿಕ ಹೊರೆ ಆಗಲಿದೆ. ಹೀಗಾಗಿ, ಸರಾಸರಿ ವಿದ್ಯುತ್‌ ಬಳಕೆ ಪ್ರಮಾಣವನ್ನು ಪರಿಷ್ಕರಿಸುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ಈ ಬಗ್ಗೆಯೂ ಚರ್ಚೆಯೂ ಆಗಿಲ್ಲ’ ಎಂದೂ ಮೂಲ ಗಳು ಹೇಳಿವೆ.

ಗೃಹ ಜ್ಯೋತಿಯ ಪೂರ್ಣ ಲಾಭ ಏಕಿಲ್ಲ?
  • ಪ್ರತಿಯೊಂದು ಮನೆಗೆ ನೀಡಿರುವ ಆರ್ ಆರ್ ಸಂಖ್ಯೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಎಷ್ಟು ಯೂನಿಟ್‌ ವಿದ್ಯುತ್ ಬಳಕೆ ಆಗಿದೆ ಎಂಬುದರ ಸರಾಸರಿ ಲೆಕ್ಕ ಹಾಕಿ ‘ಗೃಹ ಜ್ಯೋತಿ’ ಫಲಾನುಭವಿಯ ಉಚಿತ ಯೂನಿಟ್‌ ಎಷ್ಟು ಎಂದು ನಿರ್ಧರಿಸಲಾಗಿದೆ.

  • ಹೀಗೆ ಸರಾಸರಿ ನಿಗದಿ ಮಾಡಿ ಒಂದೂವರೆ ವರ್ಷ ಕಳೆದಿದೆ. ಹೊಸ ಮನೆ ಕಟ್ಟಿದವರು ಒಂದು ವರ್ಷವಾದ ಬಳಿಕ, ಉಚಿತ ವಿದ್ಯುತ್‌ನ ಪೂರ್ಣ ಲಾಭ ಪಡೆಯಲು ಅರ್ಜಿ ಸಲ್ಲಿಸಿದರೆ ಆ ಹಿಂದಿನ ಒಂದು ವರ್ಷದ ಬಳಕೆಯ ಪ್ರಮಾಣ ಆಧರಿಸಿ, ಉಚಿತ ವಿದ್ಯುತ್‌ನ ಅರ್ಹತಾ ಯೂನಿಟ್‌ನ ಪ್ರಮಾಣ ನಿಗದಿ ಮಾಡಬೇಕಾಗಿತ್ತು. ಅದಕ್ಕೂ ಸರ್ಕಾರ ಅವಕಾಶ ಕೊಟ್ಟಿಲ್ಲ.

  • ಯೋಜನೆ ಜಾರಿಯಾದ ಬಳಿಕ, ಹೊಸ ಮನೆ ನಿರ್ಮಿಸಿದವರಿಗೆ 58 ಯೂನಿಟ್‌ ಉಚಿತವಾಗಿ ಸಿಗುತ್ತಿದೆ. ಗ್ರಾಹಕರು ತಿಂಗಳಿಗೆ 135– 199 ಯೂನಿಟ್‌ ಬಳಸಿದರೆ ವರ್ಷದ ಬಳಕೆಯ ಸರಾಸರಿ ಆಧರಿಸಿ, ಉಚಿತ ವಿದ್ಯುತ್‌ನ ಯೂನಿಟ್‌ ಪ್ರಮಾಣವನ್ನು ಹೆಚ್ಚಿಸಬೇಕಿತ್ತು. ಅದನ್ನು ಸರ್ಕಾರ ಮಾಡದೇ ಇರುವುದರಿಂದ 58 ಯೂನಿಟ್‌ಗಿಂತ ಮೇಲಿನ ಬಳಕೆಗೆ ಶುಲ್ಕ ಪಾವತಿಸಬೇಕಾಗಿದೆ. ಇದರಿಂದಾಗಿ, ಉಚಿತ ಸೌಲಭ್ಯ ಎಲ್ಲರಿಗೂ ಸಿಗುತ್ತಿಲ್ಲ.

  • ಯೋಜನೆ ಜಾರಿಯಾದಾಗ ಬಾಡಿಗೆ ಮನೆಯಲ್ಲಿದ್ದ ಗ್ರಾಹಕ, 98 ಯೂನಿಟ್  ಬಳಸುತ್ತಿದ್ದು, ಅದಕ್ಕೆ ಬಿಲ್‌ ಬರುತ್ತಿರಲಿಲ್ಲ. ಆ ಮನೆಗೆ ಹೊಸತಾಗಿ ಹೋದ ಬಾಡಿಗೆದಾರರು 150 ಯೂನಿಟ್ ಬಳಸಿದರೆ ಅವರಿಗೆ ಉಚಿತದ ಪೂರ್ಣ ಲಾಭ ಸಿಗುತ್ತಿಲ್ಲ. 98 ಯೂನಿಟ್ ಉಚಿತವಾಗಿದ್ದರೆ, 52 ಯೂನಿಟ್‌ಗೆ ಪಾವತಿ ಮಾಡಬೇಕಾಗಿದೆ. ಈ ಮನೆಗೆ ಸರಾಸರಿಯನ್ನು 2022–23ರಲ್ಲಿ ನಿಗದಿ ಮಾಡಿದ್ದೇ ಸಮಸ್ಯೆಯಾಗಿದೆ.

  • ಹಿಂದೆ ಇದ್ದ ಬಾಡಿಗೆದಾರನೊಬ್ಬ ತಿಂಗಳಿಗೆ 250 ಯೂನಿಟ್ ಬಳಸುತ್ತಿದ್ದರೆ, ಅದೇ ಮನೆಗೆ ಹೋದ ಹೊಸ ಬಾಡಿಗೆದಾರ ಕೇವಲ 150 ಯೂನಿಟ್ ಬಳಸಿದರೂ ಆತನಿಗೆ ‘ಗೃಹ ಜ್ಯೋತಿ’ಯ ಲಾಭ ಸಿಗುತ್ತಿಲ್ಲ. ಆ ಮನೆಯ ಆರ್‌ಆರ್‌ ನಂಬರ್‌ನಲ್ಲಿ 2022-23ರ ಆರ್ಥಿಕ ವರ್ಷದಲ್ಲಿ ಪ್ರತಿ ತಿಂಗಳು ಎಷ್ಟು ಯೂನಿಟ್ ಖರ್ಚಾಗಿತ್ತು ಎಂಬ ಆಧಾರದಲ್ಲೇ ಸರಾಸರಿ ನಿಗದಿ ಮಾಡಲಾಗಿದೆ.

  • 2023-24ರಲ್ಲಿ ಬಳಕೆಯಾದ ಯೂನಿಟ್‌ಗಳ ಸರಾಸರಿ ಲೆಕ್ಕ 2025-26ರಲ್ಲಿ ಪರಿಷ್ಕರಣೆ ಆದರಷ್ಟೇ, 200 ಯೂನಿಟ್‌ನೊಳಗೆ ಬಳಸುವ ಎಲ್ಲರಿಗೂ ಯೋಜನೆಯ ಪೂರ್ಣ ಲಾಭ ಸಿಗಲಿದೆ.

ಪ್ರತಿಕ್ರಿಯೆಗೆ ಸಿಗದ ಸಚಿವ, ಎಸಿಎಸ್‌
ಗೃಹ ಜ್ಯೋತಿ ಯೋಜನೆ ಫಲ ಎಲ್ಲರಿಗೂ ಪೂರ್ಣ ಪ್ರಮಾಣದಲ್ಲಿ ಸಿಗದೇ ಇರುವುದರ ಬಗ್ಗೆ ಪ್ರತಿಕ್ರಿಯೆ ಪಡೆಯಲು ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.