ADVERTISEMENT

ಸರ್ಕಾರಿ ಶಾಲೆಗಳ ಎಲ್ಲ ವಿಶೇಷ ಶಿಕ್ಷಕರೂ ‘ಹೆಚ್ಚುವರಿ’

ಚಂದ್ರಹಾಸ ಹಿರೇಮಳಲಿ
Published 11 ಜುಲೈ 2025, 23:32 IST
Last Updated 11 ಜುಲೈ 2025, 23:32 IST
   

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರನ್ನು ‘ಹೆಚ್ಚುವರಿ’ ಎಂದು ಗುರುತಿಸಿರುವ ಶಾಲಾ ಶಿಕ್ಷಣ ಇಲಾಖೆ, ಅವರನ್ನು 240ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಸಾಮೂಹಿಕವಾಗಿ ವರ್ಗಾವಣೆ ಮಾಡಲು ಮುಂದಾಗಿದೆ.

ಶಾಲಾ ಶಿಕ್ಷಣ ಇಲಾಖೆ ಪ್ರೌಢಶಾಲೆಗಳಲ್ಲಿನ ಸಿಬ್ಬಂದಿ ಸ್ತರವಿನ್ಯಾಸವನ್ನು ಮರುನಿಗದಿಪಡಿಸಿದ್ದು, ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ ಏಳು ಶಿಕ್ಷಕರ ಹುದ್ದೆಗಳಿಗೆ ಮಾತ್ರ ಅವಕಾಶ ನೀಡಿದೆ. ಈ ಮಾನದಂಡದ ಪ್ರಕಾರ, 240ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿರುವ ವಿಶೇಷ ಶಿಕ್ಷಕರನ್ನು ‘ಹೆಚ್ಚುವರಿ’ ಎಂದು ಪರಿಗಣಿಸಲಾಗಿದೆ. ಇಲಾಖೆಯ ಈ ನಿರ್ಧಾರದಿಂದಾಗಿ ಕಡಿಮೆ ಮಕ್ಕಳು ಇರುವ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇರುವ ಎಲ್ಲ ವಿಶೇಷ ಶಿಕ್ಷಕರೂ ನಗರ ಪ್ರದೇಶದ ಶಾಲೆಗಳಿಗೆ ಸ್ಥಳಾಂತರಗೊಳ್ಳಲಿದ್ದಾರೆ. 

ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ನಾಟಕ, ನೃತ್ಯ, ವೃತ್ತಿಶಿಕ್ಷಣದಂತಹ ವಿಷಯಗಳನ್ನು ಕಲಿಸಲು ವಿಶೇಷ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿದೆ. ಈ ವಿಶೇಷ ಶಿಕ್ಷಕರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಜ್ಞಾನದ ಜತೆಗೆ ವಿದ್ಯಾರ್ಥಿಗಳ ಸೃಜನಶೀಲತೆ, ಕಲಾತ್ಮಕ ಕೌಶಲ, ಜೀವನ ಕೌಶಲಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾರೆ.

ADVERTISEMENT

ಚಿತ್ರಕಲೆ, ಸಂಗೀತ, ಮತ್ತು ನಾಟಕದಂತಹ ವಿಷಯಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಸುಧಾರಿಸುವುದರ ಜತೆಗೆ, ಅವರ ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಇಂತಹ ಕಲೆಗಳು ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ, ಸಹಕಾರ, ಮತ್ತು ಸ್ವಯಂ-ಅಭಿವ್ಯಕ್ತಿಯ ಕೌಶಲಗಳನ್ನು ಕಲಿಸುತ್ತವೆ. ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲು, ವಿಶೇಷ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿಗಳಲ್ಲೂ ಉಲ್ಲೇಖಿಸಲಾಗಿದೆ.

‘ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಕಲೆ ಮತ್ತು ಸಂಸ್ಕೃತಿಯ ಶಿಕ್ಷಣ ಅಗತ್ಯ. ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಖಾಸಗಿ ಶಾಲೆಗಳು ವಿಶೇಷ ಶಿಕ್ಷಕರನ್ನು ನೇಮಿಸಿಕೊಂಡಿವೆ. ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ಶಾಲೆಗಳ ಗ್ರಾಮೀಣ ಮಕ್ಕಳು ಅವಕಾಶ ವಂಚಿತರಾಗಲಿದ್ದಾರೆ’ ಎನ್ನುತ್ತಾರೆ ರಂಗ ಶಿಕ್ಷಕ ಬಸವರಾಜು. 

ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸ್ತರವಿನ್ಯಾಸವನ್ನು ಹಿಂದಿನಂತೆ ಮರುನಿಗದಿ ಮಾಡಬೇಕು. ವಿಶೇಷ ಶಿಕ್ಷಕರ ಸಾಮೂಹಿಕ ವರ್ಗಾವಣೆ ನಿರ್ಧಾರವನ್ನು ಹಿಂಪಡೆಯಬೇಕು
ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನಪರಿಷತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.