ADVERTISEMENT

ಅಂಗನವಾಡಿಗಳಿಗೆ ಕಳಪೆ ಮೊಟ್ಟೆ

ಮಕ್ಕಳು, ಗರ್ಭಿಣಿಯರ ಆರೋಗ್ಯದ ಮೇಲೆ ದುಷ್ಪರಿಣಾಮ; ಕಳವಳ

ಸಿದ್ದು ಆರ್.ಜಿ.ಹಳ್ಳಿ
Published 12 ಜುಲೈ 2023, 23:37 IST
Last Updated 12 ಜುಲೈ 2023, 23:37 IST
ಹಾವೇರಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾದ ಕಳಪೆ ಮೊಟ್ಟೆಗಳು
ಹಾವೇರಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾದ ಕಳಪೆ ಮೊಟ್ಟೆಗಳು   

ಹಾವೇರಿ: ಮಕ್ಕಳು, ಗರ್ಭಿಣಿಯರಲ್ಲಿ ಅಪೌಷ್ಟಿಕತೆ ನಿವಾರಿಸಲು ಅಂಗನವಾಡಿ ಕೇಂದ್ರಗಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುವ ಮೊಟ್ಟೆಗಳು ಕಳಪೆಯಾಗಿದ್ದು, ಬೇಯಿಸಿದ ಬಳಿಕ ಕೆಲವು ಕೆಟ್ಟಿರುತ್ತವೆ ಎಂಬ ಆರೋಪ ಕೇಳಿ ಬಂದಿದೆ.

‘ಗುತ್ತಿಗೆದಾರರು ಪೂರೈಸಿದ ಮೊಟ್ಟೆಗಳನ್ನು ಬೇಯಿಸಿ ಸಿಪ್ಪೆ ಸುಲಿದಾಗ, ಅವು ಕೆಟ್ಟಿರುವುದು ಗೊತ್ತಾಗುತ್ತದೆ. ಮೊಟ್ಟೆಯ ಒಳಭಾಗ ಕಪ್ಪುಬಣ್ಣಕ್ಕೆ ತಿರುಗಿರುತ್ತದೆ. ಕೆಲವೊಮ್ಮೆ ಕೆಟ್ಟವಾಸನೆಯೂ ಬರುತ್ತದೆ’ ಎಂದು ಹಾವೇರಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ದೂರಿದರು.

ಮೊಟ್ಟೆಗಳ ಕೊರತೆ:

ADVERTISEMENT

‘ಗುತ್ತಿಗೆದಾರರು ಸಣ್ಣ ಗಾತ್ರದ ಹಾಗೂ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಸುತ್ತಾರೆ. ಬೇಡಿಕೆಗೆ ತಕ್ಕಷ್ಟು ನೀಡುವುದಿಲ್ಲ. ಕೊಳೆತವುಗಳನ್ನು ನಾವು ಬಿಸಾಡುವ ಕಾರಣ ಮೊಟ್ಟೆಗಳ ಕೊರತೆಯಾಗಿ, ಮಕ್ಕಳಿಗೆ ಸರಿಯಾಗಿ ವಿತರಿಸಲು ಆಗುವುದಿಲ್ಲ. ಮನೆಗೆ ಒಯ್ದವರು ಮೊಟ್ಟೆಗಳು ಕೆಟ್ಟಿವೆ ಎಂದು ಜಗಳಕ್ಕೆ ಬರುತ್ತಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದರು.

ಹಿಂದಿನ ವರ್ಷ ಸರ್ಕಾರವು ಒಂದು ಮೊಟ್ಟೆಗೆ  ₹5 ರಿಂದ ₹6 ಕೊಡುತಿತ್ತು. ಆದರೆ, ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಕೆಯಾದ ಕಾರಣ ಖರೀದಿಸಲು ಕಷ್ಟವಾಯಿತು. 3 ರಿಂದ 4 ತಿಂಗಳಾದರೂ ಹಣ ಬಿಡುಗಡೆಯಾಗ ಆಗಲಿಲ್ಲ. ನಾವು ಸಾಲ ಮಾಡಿ ಮೊಟ್ಟೆ ಖರೀದಿಸಿದೆವು. ಅದಕ್ಕೆ ಸರ್ಕಾರವು ಪ್ರಸಕ್ತ ವರ್ಷ ಜನವರಿಯಿಂದ ತಾಲ್ಲೂಕುವಾರು ಟೆಂಡರ್‌ ಕರೆದು, ಗುತ್ತಿಗೆದಾರರ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಸಲು ಕ್ರಮ ಕೈಗೊಂಡಿತು’ ಎಂದು ವಿವರಿಸಿದರು.

ಆರೋಗ್ಯದ ಮೇಲೆ ದುಷ್ಪರಿಣಾಮ:

‘ಕೆಟ್ಟುಹೋದ ಮೊಟ್ಟೆಗಳನ್ನು ಮಕ್ಕಳು ತಿಂದು ವಾಂತಿ–ಭೇದಿ ಮಾಡಿಕೊಂಡ ಉದಾಹರಣೆಗಳಿವೆ. ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಗುಣಮಟ್ಟದ ಮೊಟ್ಟೆ ಪೂರೈಕೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನದ ಜಿಲ್ಲಾ ಸಂಚಾಲಕಿ ಹಸೀನಾ ಹೆಡಿಯಾಲ ಒತ್ತಾಯಿಸಿದರು.

ಟೆಂಡರ್‌ ಪದ್ಧತಿ ರದ್ದುಪಡಿಸಬೇಕು. ಮೊಟ್ಟೆ ಖರೀದಿ ಜವಾಬ್ದಾರಿ ಮೊದಲಿನಂತೆ ಬಾಲ ವಿಕಾಸ ಸಮಿತಿಗೆ ನೀಡಬೇಕು. ಇಲ್ಲದಿದ್ದರೆ ಮೊಟ್ಟೆ ಚಳವಳಿ ಆರಂಭಿಸುತ್ತೇವೆ.

– ಹೊನ್ನಪ್ಪ ಮರೆಮ್ಮನವರ ಅಧ್ಯಕ್ಷ ಎಐಟಿಯುಸಿ ಜಿಲ್ಲಾ ಸಮಿತಿ ಹಾವೇರಿ

ಗುಣಮಟ್ಟದ ಮೊಟ್ಟೆ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸಿಡಿಪಿಒಗಳಿಗೆ ನಿರ್ದೇಶಿಸಲಾಗಿದೆ. ಕಳಪೆ ಮೊಟ್ಟೆ ಪೂರೈಕೆ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ.

– ಶ್ರೀನಿವಾಸ ಆಲದರ್ತಿ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.