ADVERTISEMENT

2 ದಶಕ ಬಳಿಕ ಲೋಕಸಭಾ ಅಖಾಡಕ್ಕೆ

ಚಾಮರಾಜನಗರದಿಂದ 5 ಬಾರಿ ಸಂಸದರಾದ ಶ್ರೀನಿವಾಸ ಪ್ರಸಾದ್‌

ಸೂರ್ಯನಾರಾಯಣ ವಿ
Published 27 ಮಾರ್ಚ್ 2019, 19:20 IST
Last Updated 27 ಮಾರ್ಚ್ 2019, 19:20 IST
ವಿ.ಶ್ರೀನಿವಾಸ ಪ್ರಸಾದ್
ವಿ.ಶ್ರೀನಿವಾಸ ಪ್ರಸಾದ್   

ಚಾಮರಾಜನಗರ: ಮೀಸಲು ಕ್ಷೇತ್ರವಾದ ಚಾಮರಾಜನಗರದಿಂದ ಐದು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌, ಈಗ 20 ವರ್ಷಗಳ ನಂತರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಲೋಕದಳ, ಕಾಂಗ್ರೆಸ್‌–ಐ, ಕಾಂಗ್ರೆಸ್‌, ಜೆಡಿಯು ಪಕ್ಷಗಳಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಇಳಿ ವಯಸ್ಸು, ಕಾಡುತ್ತಿರುವ ಅನಾರೋಗ್ಯದ ನಡುವೆಯೂ ಅಖಾಡಕ್ಕೆ ಇಳಿದಿದ್ದಾರೆ. ಆರ್‌.ಧ್ರುವನಾರಾಯಣ ಎದುರಾಳಿ.

ಪ್ರಸಾದ್ ಅವರು 1999ರಲ್ಲಿ ಕೊನೆಯ ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. 2004ರಲ್ಲಿ ಸ್ಪರ್ಧಿಸದೆ, ಕಾಗಲವಾಡಿ ಶಿವಣ್ಣ ಅವರಿಗೆ ಜೆಡಿಎಸ್‌ನಿಂದ ಟಿಕೆಟ್‌ ಕೊಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರಲ್ಲಿ ರಾಜಕಾರಣಕ್ಕೆ ಮರಳಿದ್ದು, ನಂಜನಗೂಡು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದ್ದರು.

ADVERTISEMENT

ನಂಜನಗೂಡು ಉಪ ಚುನಾವಣೆಯಲ್ಲಿ ಸೋಲುಂಡ ನಂತರ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದರು. 1974ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ್ದರೂ, 1977ರಲ್ಲಿ ಮೊದಲಿಗೆ ಲೋಕಸಭೆ ಸ್ಪರ್ಧಿಸಿದರು. ಈವರೆಗೆ 8 ಬಾರಿ ಸ್ಪರ್ಧಿಸಿದ್ದಾರೆ. 5 ಬಾರಿ ಗೆದ್ದಿದ್ದರೆ, 3 ಸಲ ಸೋತಿದ್ದಾರೆ.

1977ರಲ್ಲಿ ಭಾರತೀಯ ಲೋಕದಳದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್‌ನ ಬಿ.ರಾಚಯ್ಯ ಎದುರು ಸೋಲುಂಡಿದ್ದರು. 1990ರಲ್ಲಿ ಇಂದಿರಾ ಗಾಂಧಿ ಅವರ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. 1984, 1989, 1991ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದರು. 1996ರಲ್ಲಿ ಪಿ.ವಿ.ನರಸಿಂಹ‌ರಾವ್‌ ಅವರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 1999ರ ಚುನಾವಣೆ ವೇಳೆಗೆ ಪಕ್ಷಾಂತರ ಮಾಡಿದ್ದ ಅವರು ಜೆಡಿಯುನಿಂದ ಸ್ಪರ್ಧಿಸಿ ಗೆದ್ದು, ವಾಜಪೇಯಿ ಸಂಪುಟದಲ್ಲಿ ಸಚಿವರೂ ಆಗಿದ್ದರು.

ಹಿತೈಷಿಗಳೇ ಎದುರಾಳಿಗಳು

ವಿ.ಶ್ರೀನಿವಾಸ ಪ್ರಸಾದ್‌ ಮತ್ತು ಆರ್‌.ಧ್ರುವನಾರಾಯಣ ಒಂದು ಕಾಲದಲ್ಲಿ ಹಿತೈಷಿಗಳಾಗಿದ್ದವರು.

2008ರಲ್ಲಿ ಪ್ರಸಾದ್‌ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡ ನಂತರ ಅತ್ಯುತ್ತಮ ಬಾಂಧವ್ಯ ಇತ್ತು. 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಸಾದ್‌ ಅವರಿಗೆ ಆರೋಗ್ಯ ಕೈಕೊಟ್ಟಾಗ, ಧ್ರುವನಾರಾಯಣ ಗೆಲುವಿಗೆ ಶ್ರಮಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಬ್ಬರೂ ಪರಸ್ಪರ ಚುನಾವಣೆ ಎದುರಿಸುತ್ತಿದ್ದಾರೆ.

ಕೊನೆಯ ಬಾರಿ ಸ್ಪರ್ಧಿಸಿದ್ದು 1999ರಲ್ಲಿ

8 ಬಾರಿ ಸ್ಪರ್ಧೆ, 5ರಲ್ಲಿ ಗೆಲುವು, 3 ಸೋಲು

ಕಾಂಗ್ರೆಸ್‌ –ಐ, ಕಾಂಗ್ರೆಸ್‌, ಜೆಡಿಯು ಅಭ್ಯರ್ಥಿಯಾಗಿ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.