ಬಳ್ಳಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರಲು ಮಾಜಿ ಸಚಿವರು ಹಾಗೂ ಶಾಸಕರು ಬೆಂಗಳೂರಲ್ಲಿ ಭಾರಿ ಲಾಬಿ ನಡೆಸುತ್ತಿದ್ದರೆ, ಮಾಜಿ ಸಚಿವ ಶ್ರೀರಾಮುಲು ಬಳ್ಳಾರಿಯ ತಮ್ಮ ಮನೆಯಲ್ಲಿ ‘ಅಜ್ಞಾತ ವಾಸ’ದಲ್ಲಿದ್ದಾರೆ.
ಯಡಿಯೂರಪ್ಪನವರ ಉತ್ತರಾಧಿಕಾರಿ ಆಯ್ಕೆಗೆ ಮಂಗಳವಾರ ರಾಜಧಾನಿಯಲ್ಲಿ ಸೇರಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಶ್ರೀರಾಮುಲು ರಾತ್ರೋರಾತ್ರಿ ಬಳ್ಳಾರಿಗೆ ಹಿಂತಿರುಗಿದ್ದಾರೆ. ಸದ್ಯ, ಅವರು ಯಾರನ್ನೂ ಭೇಟಿಯಾಗುತ್ತಿಲ್ಲ. ‘ಮನೆಯೊಳಗೆ ವಿಶೇಷ ಪೂಜೆ ನಡೆಯುತ್ತಿದ್ದು, ಅದರಲ್ಲಿ ಭಾಗಿಯಾಗಿದ್ದಾರೆ’ ಎಂದು ಆಪ್ತ ಮೂಲಗಳು ತಿಳಿಸಿವೆ.
ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ಬೆನ್ನಲ್ಲೇ, ತಮ್ಮ ಹೆಸರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಬಹುದು. ಬೊಮ್ಮಾಯಿ ಅವರ ಜತೆಯಲ್ಲೇ ಬುಧವಾರ ತಾವು ಉಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಶ್ರೀರಾಮುಲು ಭಾವಿಸಿದ್ದರು. ಆದರೆ, ಹಾಗಾಗದ್ದರಿಂದ ಬೇಸರಗೊಂಡು ಬಳ್ಳಾರಿಗೆ ಮರಳಿದ್ದಾರೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.
ಉಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶ್ರೀರಾಮುಲು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದರು. ರಾಮುಲು ಉಪ ಮುಖ್ಯಮಂತ್ರಿ ಆಗುತ್ತಾರೆ ಎಂಬ ವಿಶ್ವಾಸದಿಂದ ಮಂಗಳವಾರ ರಾತ್ರಿಯೇ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.