ADVERTISEMENT

ಎಸ್ಎಸ್‌ಎಲ್‌ಸಿ ಪರೀಕ್ಷೆ: ಕಂಟೈನ್ಮೆಂಟ್‌ ಝೋನ್ ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್

ಪರೀಕ್ಷೆಗೆ ಭರದ ಸಿದ್ಧತೆ: ಇಬ್ಬರಿಗೆ ಪಿಪಿಇ ಕಿಟ್‌

ಕೆ.ನರಸಿಂಹ ಮೂರ್ತಿ
Published 23 ಜೂನ್ 2020, 11:27 IST
Last Updated 23 ಜೂನ್ 2020, 11:27 IST
ಬಳ್ಳಾರಿಯ ವುಂಕಿ ಮರಿಸಿದ್ದಮ್ಮ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯ ಚೀಟಿಗಳನ್ನು ಸಿಬ್ಬಂದಿ ಡೆಸ್ಕ್‌ಗಳಿಗೆ ಅಂಟಿಸಿದರು.
ಬಳ್ಳಾರಿಯ ವುಂಕಿ ಮರಿಸಿದ್ದಮ್ಮ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯ ಚೀಟಿಗಳನ್ನು ಸಿಬ್ಬಂದಿ ಡೆಸ್ಕ್‌ಗಳಿಗೆ ಅಂಟಿಸಿದರು.   

ಬಳ್ಳಾರಿ: ವಿರೋಧ, ಭಿನ್ನಾಭಿಪ್ರಾಯಗಳ ನಡುವೆಯೇ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯು ಸಕಲ ಸಿದ್ಧತೆ ನಡೆಸಿದ್ದು, ಕಂಟೈನ್‌ಮೆಂಟ್‌ ಪ್ರದೇಶದಲ್ಲಿರುವವರು ಮತ್ತು ಹೋಂ ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಿದೆ.

ಈ ಎರಡೂ ವಿಭಾಗದ ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಕಂಟೈನ್ಮೆಂಟ್‌ ಪ್ರದೇಶದಿಂದ ಬರುವ ಪ್ರತಿಯೊಬ್ಬರಿಗೂ ಎನ್‌ –95 ಮಾಸ್ಕ್‌ಗಳನ್ನು ತಲಾ ಎರಡರಂತೆ ಇಲಾಖೆಯು ವಿತರಿಸಲಿದೆ. ಹೋಂ ಕ್ವಾರಂಟೈನ್‌ನಲ್ಲಿರುವ ಇಬ್ಬರು ವಿದ್ಯಾರ್ಥಿಗಳಿಗೆ ಪಿಪಿಇ ಕಿಟ್‌ ಅನ್ನು ಪೂರೈಸಲಿದ್ದು, ಅದನ್ನು ಧರಿಸಿಯೇ ಅವರು ಪರೀಕ್ಷೆ ಎದುರಿಸಲಿದ್ದಾರೆ.

ಮಾಸ್ಕ್‌ ಕೊಡುಗೆ: ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗೆ ಹಾಗೂ ಪರೀಕ್ಷಾ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತಲಾ ಎರಡರಂತೆ ವಿತರಿಸಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ವತಿಯಿಂದ ಈಗಾಗಲೇ 84 ಸಾವಿರ ಮಾಸ್ಕ್‌ಗಳನ್ನು ಇಲಾಖೆಗೆ ಪೂರೈಸಲಾಗಿದೆ.ಪರೀಕ್ಷಾ ಕೇಂದ್ರಗಳಿಗೂ ಅವುಗಳನ್ನು ವಿತರಿಸಲಾಗಿದೆ.

ADVERTISEMENT

64 ಅಧಿಕಾರಿ ನಿಯೋಜನೆ: ‘ಈ ಬಾರಿ ಜಾಗೃತ ದಳವಾಗಿ ಕಾರ್ಯನಿರ್ವಹಿಸಲು ವಿವಿಧ ಇಲಾಖೆಗಳ 65 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ದಿನವೂ ನಿಯೋಜಿತ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ’ ಎಂದು ಪರೀಕ್ಷೆಯ ನೋಡಲ್‌ ಅಧಿಕಾರಿ ಸತ್ಯನಾರಾಯಣ ‘ಪ್ರಜಾವಾಣಿ’ಗೆ ಮಂಗಳವಾರ ತಿಳಿಸಿದರು.

28 ಮಾರ್ಗದಲ್ಲಿ ಬಸ್‌: ‘ಪರೀಕ್ಷೆಗೆ ಹಾಜರಾಗಲು ಯಾರಿಗೂ ಸಾರಿಗೆ ಕೊರತೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಯಾವುದೇ ವಾಹನ ಸೌಕರ್ಯವಿಲ್ಲದ ಹಳ್ಳಿಗಳಿಂದ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆತರಲು 28 ಮಾರ್ಗಗಳಲ್ಲಿ ಬಸ್‌ಗಳನ್ನು ಒಪ್ಪಂದದ ಆಧಾರದಲ್ಲಿ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ಕೇಂದ್ರದಲ್ಲೂ ಎರಡು ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸಲಾಗಿದೆ. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳುಳ್ಳವರಿಗೆ ಅಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಅಂಥವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಿಬ್ಬಂದಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ’ ಎಂದು ಹೇಳಿದರು.

ಸೋಂಕಿತರಿಗೆ ಸಪ್ಲಿಮೆಂಟರಿ ಪರೀಕ್ಷೆ

ಬಳ್ಳಾರಿ: ‘ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದು, ಅವರಿಗೆ ಈ ಬಾರಿ ಪರೀಕ್ಷೆ ಎದುರಿಸಲು ಅವಕಾಶ ನೀಡಿಲ್ಲ. ಬದಲಿಗೆ ಸಪ್ಲಿಮೆಂಟರಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು’ ಎಂದು ಪರೀಕ್ಷೆಯ ನೋಡಲ್‌ ಅಧಿಕಾರಿ ಸತ್ಯನಾರಾಯಣ ತಿಳಿಸಿದರು.

‘ಸೋಂಕಿತರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಪರೀಕ್ಷೆ ಬರೆಯಲೂ ಅವಕಾಶವಿಲ್ಲ. ಸಪ್ಲಿಮೆಂಟರಿ ಪರೀಕ್ಷೆಗೆ ಹಾಜರಾಗಲುಅವರಿಗೆ ಎಲ್ಲ ಬಗೆಯ ನೆರವು ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.