ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ರಾಜ್ಯದ 11 ವಿದ್ಯಾರ್ಥಿಗಳಿಗೆ ಎರಡನೇ ಸ್ಥಾನ

624 ಅಂಕ ಪಡೆದವರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 20:57 IST
Last Updated 10 ಆಗಸ್ಟ್ 2020, 20:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ 11 ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ ಕೂಡ 11 ವಿದ್ಯಾರ್ಥಿಗಳು 624 ಅಂಕ ಗಳಿಸಿದ ಸಾಧನೆ ಮಾಡಿದ್ದರು.

ಅಮೋಘ್‌ ಜಿ.ಕೆ.
ಶಾಲೆ:
ವಿವಿಎಸ್‌ ಸರ್ದಾರ್‌ ಪಟೇಲ್‌ ಇಂಗ್ಲಿಷ್‌ ಪ್ರೌಢಶಾಲೆ, ರಾಜಾಜಿನಗರ, ಬೆಂಗಳೂರು
‘ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಪರೀಕ್ಷೆ ಆಗಬೇಕಾಗಿತ್ತು. ಪರೀಕ್ಷೆ ರದ್ದು ಮಾಡಬೇಕು ಎನ್ನುತ್ತಿದ್ದಾಗ ಬೇಸರವಾಗುತ್ತಿತ್ತು. ಲಾಕ್‌ಡೌನ್‌ ಸಂದರ್ಭವನ್ನು ಏಕಾಗ್ರತೆ ಹೆಚ್ಚಿಸಿಕೊಳ್ಳಲು ಬಳಸಿಕೊಂಡೆ. 624 ಅಂಕ ಗಳಿಸಲು ಇದೂ ನೆರವಾಯಿತು.’

**
ಪ್ರಣವ್‌ ನಾಡಿಗೇರ್
ಶಾಲೆ:
ವಿವಿಎಸ್‌ ಸರ್ದಾರ್‌ ಪಟೇಲ್‌ ಇಂಗ್ಲಿಷ್‌ ಪ್ರೌಢಶಾಲೆ, ರಾಜಾಜಿನಗರ, ಬೆಂಗಳೂರು
‘ಸವಾಲಿನ ನಡುವೆಯೂ ಪರೀಕ್ಷೆ ನಡೆಸಿದ್ದು ಒಳ್ಳೆಯದಾಯಿತು. ಚೆನ್ನಾಗಿ ಓದಿಕೊಂಡಿದ್ದೆ. ಪರೀಕ್ಷೆ ನಡೆಯದಿದ್ದರೆ ನಿಜಕ್ಕೂ ಬೇಸರವಾಗುತ್ತಿತ್ತು. ಅಪ್ಪ–ಅಮ್ಮ ಇಬ್ಬರೂ ಬಿಇ ಓದಿದ್ದಾರೆ. ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡು, ನಂತರ ಎಂಜಿನಿಯರಿಂಗ್‌ ಮಾಡುವ ಗುರಿ ಇಟ್ಟುಕೊಂಡಿದ್ದೇನೆ.’

ADVERTISEMENT

**
ವೀಣಾ ಎಂ.ಡಿ.
ಶಾಲೆ:
ಪೂರ್ಣಪ್ರಜ್ಞ ಎಜುಕೇಷನ್‌ ಸೆಂಟರ್, ಸದಾಶಿವನಗರ, ಬೆಂಗಳೂರು
‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡಸಲೇಬೇಕು ಎಂದೇ ನನಗೆ ಅನಿಸಿತ್ತು. ಮೊದಲ ದಿನ ಭಯವಿತ್ತು. ಆದರೆ, ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದರು. ಮೊದಲಿನಿಂದ ನಿಯಮಿತವಾಗಿ ಓದುತ್ತಿದ್ದೆ. ಕೊನೆಗೆ, ದಿನಕ್ಕೆ 6ರಿಂದ 8 ತಾಸು ಓದುತ್ತಿದ್ದೆ. ವಿಜ್ಞಾನ (ಪಿಸಿಎಂಬಿ) ವಿಷಯ ತೆಗೆದುಕೊಂಡು, ನಂತರ ಎಂಬಿಬಿಎಸ್‌ ಮಾಡುವ ಬಯಕೆ ಇದೆ.’

**
ನಿಹಾರಿಕಾ ಕುಲಕರ್ಣಿ
ಶಾಲೆ:
ಪೂರ್ಣಪ್ರಜ್ಞ ಎಜುಕೇಷನ್‌ ಸೆಂಟರ್, ಸದಾಶಿವನಗರ, ಬೆಂಗಳೂರು
‘ದಿನಕ್ಕೆ 10 ತಾಸು ಓದುತ್ತಿದ್ದೆ. ಪರೀಕ್ಷೆ ರದ್ದು ಮಾಡಿದ್ದರೆ ತುಂಬಾ ಬೇಸರವಾಗುತ್ತಿತ್ತು. ಬೆಳಿಗ್ಗೆ 5.30ಕ್ಕೆ ಟ್ಯೂಷನ್‌ಗೆ ಹೋಗುತ್ತಿದ್ದೆ. ಶ್ರಮ ಪಟ್ಟಿದ್ದಕ್ಕೆ ಪ್ರತಿಫಲ ಸಿಕ್ಕಿದೆ. ಅಪ್ಪ–ಅಮ್ಮ ಹಾಗೂ ಶಿಕ್ಷಕರು ಮಾರ್ಗದರ್ಶನ ನೀಡಿದರು. ವಿಜ್ಞಾನದಲ್ಲಿ ನನಗೆ ಅಷ್ಟು ಆಸಕ್ತಿ ಇಲ್ಲ. ಬೇರೆ ವಿಷಯದ ಆಯ್ಕೆ ಬಗ್ಗೆ ಯೋಚಿಸುತ್ತಿದ್ದೇನೆ.’

**
ಎ.ಎಸ್. ಸ್ಫೂರ್ತಿ
ಶಾಲೆ:
ನ್ಯೂ ಕೇಂಬ್ರಿಜ್‌ ಹೈಸ್ಕೂಲ್‌, ಆರ್‌ಪಿಸಿ ಲೇಔಟ್‌, ಬೆಂಗಳೂರು
‘ದಿನಕ್ಕೆ ಎಷ್ಟು ತಾಸು ಓದುತ್ತೇವೆ ಎನ್ನುವುದಕ್ಕಿಂತ ಎಷ್ಟು ಏಕಾಗ್ರತೆಯಿಂದ ಓದುತ್ತೇವೆ, ತಿಳಿದುಕೊಳ್ಳುತ್ತೇವೆ ಎಂಬುದು ಮುಖ್ಯ. ಬೆಳಿಗ್ಗೆ 4.30ಕ್ಕೆ ಎದ್ದು ಓದುತ್ತಿದ್ದೆ. ಲಾಕ್‌ಡೌನ್‌ನಿಂದ ಮೂರು ತಿಂಗಳು ಸಮಯ ಸಿಕ್ಕಿದ್ದು, ಹೆಚ್ಚು ಓದಲು ಸಹಾಯವಾಯಿತು. ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು. ಮುಂದೆ ದೊಡ್ಡ ವಿಜ್ಞಾನಿಯಾಗಬೇಕು ಎಂಬ ಗುರಿ ಇದೆ.’


ದ.ಕ.,ಉಡುಪಿಜಿಲ್ಲೆಯವಿದ್ಯಾರ್ಥಿಗಳು

‘ಲಾಕ್‌ಡೌನ್‌ ಕಾರಣದಿಂದ ಪರೀಕ್ಷೆ ನಡೆಯುವುದಿಲ್ಲ ಅನಿಸಿತ್ತು. ಹೀಗಾಗಿ ಮಧ್ಯದಲ್ಲಿ ತಯಾರಿ ನಿಲ್ಲಿಸಿದ್ದೆ. ಪರೀಕ್ಷಾ ದಿನಾಂಕ ಪ್ರಕಟವಾದ ಬಳಿಕ ಪೂರ್ಣ ಸಮಯ ಓದಿಗೆ ಮೀಸಲಿಟ್ಟಿದ್ದೆ. ಎಲ್ಲ ವಿಷಯಗಳನ್ನೂ ಮತ್ತೊಮ್ಮೆ ಪುನರ್ಮನನ ಮಾಡಿದೆ. ಉತ್ತಮ ಫಲಿತಾಂಶದಿಂದ ಸಂತೋಷವಾಗಿದೆ’
–ನಿಧಿ ರಾವ್‌, ಡೊಂಗರಕೇರಿಯ ಕೆನರಾ ಪ್ರೌಢಶಾಲೆ, ಮಂಗಳೂರು

**
‘ಶಾಲೆಯಲ್ಲಿ ನಿಗದಿಗೊಳಿಸಿದ್ದ 1 ಗಂಟೆಯ ಓದಿನ ಅವಧಿಯ ಜತೆಗೆ ಮನೆಯಲ್ಲಿ ಪ್ರತಿದಿನ ಕನಿಷ್ಠ 4 ಗಂಟೆ ಓದುತ್ತಿದ್ದೆ. ಕ್ಲಿಷ್ಟ ಮತ್ತು ಸಂದೇಹ ಇರುವ ಅಂಶಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳುತ್ತಿದ್ದೆ. ಸಮಾಜ ವಿಜ್ಞಾನದಲ್ಲಿ 99 ಅಂಕ ಬಂದಿದ್ದು, ಮರುಮೌಲ್ಯಮಾಪನಕ್ಕೆ ಹಾಕುವೆ.
–ಸುರಭಿ ಶೆಟ್ಟಿ, ಸಾಂದೀಪನ್‌ ಆಂಗ್ಲಮಾಧ್ಯಮ ಶಾಲೆ, ಕಿರಿಮಂಜೇಶ್ವರ, ಕುಂದಾಪುರ

**
‘ಇಂಗ್ಲಿಷ್‌ ವಿಷಯದಲ್ಲಿ 99 ಅಂಕಗಳು ಬಂದಿವೆ. ಇನ್ನುಳಿದ ಎಲ್ಲ ವಿಷಯಗಳಲ್ಲಿ 100ಕ್ಕೆ 100 ಅಂಕಗಳು ಬಂದಿವೆ. ಲಾಕ್‌ಡೌನ್‌ ಸಂದರ್ಭದಲ್ಲಿ ಊರಲ್ಲಿದ್ದು, ತಾಯಿಯ ಮಾರ್ಗದರ್ಶದಂತೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 5 ಗಂಟೆ ಅಧ್ಯಯನ ಮಾಡುತ್ತಿದ್ದೆ’.
–ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ಅಳಿಕೆ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಬಂಟ್ವಾಳ, ದ.ಕನ್ನಡ

**
ಹೆಚ್ಚು ಅಂಕಗಳನ್ನು ಪಡೆಯಬೇಕು ಎಂದು ಯಾರಿಂದಲೂ ಒತ್ತಡ ಇರಲಿಲ್ಲ. ನಿರಂತರವಾಗಿ ನಿತ್ಯ 6 ಗಂಟೆ ಶ್ರದ್ಧೆಯಿಂದ ಓದಿದ್ದು ಫಲ ನೀಡಿದೆ. ಕುಟುಂಬ ಮತ್ತು ಶಾಲೆಯ ಸಂತೋಷವೇ ಮುಖ್ಯವಾಗಿದೆ.
–ಜಿ.ಎಂ.ಮಹೇಶ್, ಜ್ಞಾನಭಾರತಿ ಶಾಲೆ, ಕುಣಿಗಲ್

**
ಲಾಕ್‌ಡೌನ್‌ ಮಾಡಿದ್ದರಿಂದ ಪರೀಕ್ಷೆ ಮುಂದಕ್ಕೆ ಹೋಯಿತು. ನನ್ನ ಓದಿಗೇನೂ ತೊಂದರೆಯಾಗಲಿಲ್ಲ. ಆರಂಭದಿಂದಲೂ ಪ್ರತಿದಿನ 4ರಿಂದ 5 ತಾಸು ಓದುತ್ತಿದ್ದೆ. ಲಾಕ್‌ಡೌನ್‌ ಅವಧಿಯಲ್ಲೂ ಈ ಓದು ಮುಂದುವರಿದಿತ್ತು. ಪರೀಕ್ಷೆ ದಿನಾಂಕ ಪ್ರಕಟವಾದ ನಂತರ 8ರಿಂದ 10 ತಾಸು ಓದಿದೆ. ಯಾವುದೇ ಟ್ಯೂಷನ್‌ಗೆ ಹೋಗಲಿಲ್ಲ.
–ಟಿ.ಎಸ್‌. ಅಭಿರಾಮ, ಪ್ರಗತಿ ಸಂಯುಕ್ತ ಪ್ರೌಢಶಾಲೆ, ಸಾಗರ

**
ಕೊರೊನಾ ಕಾರಣದಿಂದ ಪರೀಕ್ಷೆ ಆಗುತ್ತೋ ಇಲ್ಲವೋ ಎಂಬ ಗೊಂದಲವಂತೂ ಇತ್ತು. ಶಿಕ್ಷಕರು ಪರೀಕ್ಷೆ ನಡೆದೇ ನಡೆಯುತ್ತೆ ಎಂದು ಹೇಳಿದ್ದರು. ನನಗೆ ರ‍್ಯಾಂಕ್ ಅನಿರೀಕ್ಷಿತ ಎನಿಸಲಿಲ್ಲ. ಸಾಫ್ಟ್‌ವೇರ್‌ ವಿಷಯದಲ್ಲಿ ಶಿಕ್ಷಣ ಮುಂದುವರಿಸುತ್ತೇನೆ, ನನ್ನ ಈ ಸಾಧನೆಗೆ ತಂದೆ, ತಾಯಿ ಮತ್ತು ನನ್ನ ಶಿಕ್ಷಕರು ಕಾರಣ
–ಅನಿರುದ್ಧ ಸುರೇಶ ಗುತ್ತೀಕರ, ಪ್ರಶಾಂತಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ಸಿದ್ದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.