ADVERTISEMENT

ಜೈಲುಗಳ ಸ್ಥಿತಿ ಹೇಗಿದೆ: ಹೈಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:00 IST
Last Updated 19 ಜೂನ್ 2019, 20:00 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯ ಮಾನವ ಹಕ್ಕುಗಳ ಆಯೋಗವು (ಎಸ್‌ಎಚ್‌ಆರ್‌ಸಿ) 2018ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅನುಸಾರ ರಾಜ್ಯದಾದ್ಯಂತ ಜೈಲುಗಳಲ್ಲಿರುವ ಕೈದಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ದಿಸೆಯಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಸುಪ್ರೀಂಕೋರ್ಟ್‌ ನಿರ್ದೇಶನದ ಅನುಸಾರ ಹೈಕೋರ್ಟ್ ರಿಜಿಸ್ಟ್ರಾರ್‌ ಜನರಲ್‌ ದಾಖಲಿಸಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಎನ್‌ಎಚ್ಆರ್‌ಸಿ ಪರ ವಕೀಲರು, ‘ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಸ್ಥಳಾಭಾವ ಮತ್ತು ವೈದ್ಯಕೀಯ ಚಿಕಿತ್ಸೆಯ ನೆರವು ಸೂಕ್ತವಾಗಿ ಸಿಗುತ್ತಿಲ್ಲ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಓಕಾ ಅವರು, ‘ಇದೊಂದು ಗಂಭೀರ ವಿಚಾರ. ಕೈದಿಗಳ ಮಾನಸಿಕ ಆರೋಗ್ಯದ ಬಗೆಗೂ ಹೆಚ್ಚು ಕಾಳಜಿ ಮಾಡಬೇಕಾದ ಅಗತ್ಯವಿದೆ’ ಎಂದರು.

‘ದೇಶದ ಹಲವು ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಶೇ 100 ಹಾಗೂ ಇನ್ನೂ ಕೆಲವೆಡೆ ಶೇ 150ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಈಗಾಗಲೇ ಎಲ್ಲ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ. ಜೈಲುಗಳ ಮೂಲಸೌಕರ್ಯ, ವೈದ್ಯಕೀಯ ನೆರವು, ಸಿಬ್ಬಂದಿ ಸಾಮರ್ಥ್ಯಗಳ ಬಗ್ಗೆ ನಿಗಾವಹಿಸುವಂತೆ ನಿರ್ದೇಶಿಸಿದೆ’ ಎಂದರು.

ಇದಕ್ಕೆ ಸರ್ಕಾರದ ಪರ ವಕೀಲ ಡಿ.ನಾಗರಾಜ್ ಅವರು, ‘ಬೀದರ್, ಮಂಗಳೂರು, ಬೆಂಗಳೂರು ಮತ್ತು ಹಾಸನಗಳಲ್ಲಿ ತಲಾ ಒಂದು ಸಾವಿರ ಜನರ ಸ್ಥಳಾವಕಾಶದ ನಾಲ್ಕು ಹೊಸ ಜೈಲುಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೆರಡು ಮೂರು ವರ್ಷಗಳಲ್ಲಿ ಈ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ವಿವರಿಸಿದರು. ‘ಜೈಲುಗಳಲ್ಲಿ ಸಿಬ್ಬಂದಿಯ ಕೊರತೆಯೂ ಇಲ್ಲ’ ಎಂದರು.

ಈ ಮಾತಿಗೆ ಓಕಾ ಅವರು, ‘ನೀವು ಹೊಸ ಜೈಲುಗಳನ್ನು ಕಟ್ಟುವ ವೇಳೆಗೆ ಕೈದಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುತ್ತದೆ’ ಎಂದರು.

ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ.

ವಿವರಣೆ ಕೇಳಿರುವ ಅಂಶಗಳು

* ಸುಪ್ರೀಂಕೋರ್ಟ್ ಆದೇಶದಂತೆ ಕೈದಿಗಳ ಮಕ್ಕಳ ಪುನರ್ವಸತಿಗೆ ಕೈಗೊಂಡಿರುವ ಕ್ರಮಗಳೇನು?

* ಕಾರಾಗೃಹಗಳಲ್ಲಿ ಕೈದಿಗಳಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೆ

* ಅಗತ್ಯ ಇರುವಷ್ಟು ಶೌಚಾಲಯಗಳಿವೆಯೇ?

* ಕೈದಿಗಳನ್ನು ಅವರ ಕುಟುಂಬದವರು ಭೇಟಿ ಮಾಡಲು ಅಗತ್ಯ ಸೌಕರ್ಯ ಮತ್ತು ವ್ಯವಸ್ಥೆ ಕಲ್ಪಿಸಲಾಗಿದೆಯೇ?

* ಜೈಲುಗಳಲ್ಲಿ ಎಷ್ಟು ಮಾನಸಿಕ ರೋಗಿಗಳಿದ್ದಾರೆಂದು ಗುರುತಿಸಲಾಗಿದೆಯೇ?

* ಮಾನಸಿಕ ಆರೋಗ್ಯ ಕಾಯ್ದೆ ಪ್ರಕಾರ ಸೌಕರ್ಯ ಒದಗಿಸಲಾಗಿದೆಯೇ?

* ಮಹಿಳಾ ಕೈದಿಗಳ ಸ್ಥಿತಿಗತಿ ಹೇಗಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.