ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್
ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಆಯೋಗ ಸಲ್ಲಿಸಿದ ವರದಿಯ (ಎಸ್‌ಇಪಿ) ಶಿಫಾರಸುಗಳ ಪರಿಶೀಲನೆಗೆ ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಸಚಿವರು, ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲು ಸರ್ಕಾರ ಮುಂದಾಗಿದೆ.
ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಬದಲಿಗೆ ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ ರಚಿಸಲು ರಾಜ್ಯ ಸರ್ಕಾರ ಪ್ರೊ.ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ 2023ರ ನವೆಂಬರ್‌ನಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗ ರಚಿಸಲಾಗಿತ್ತು. ಆಯೋಗವು 379 ತಜ್ಞರನ್ನು ಒಳಗೊಂಡ 35 ಕಾರ್ಯಪಡೆಗಳನ್ನು ರಚಿಸಿ, 22 ತಿಂಗಳಲ್ಲಿ ಸಿದ್ಧಪಡಿಸಿದ 2,197 ಪುಟಗಳ ಅಂತಿಮ ವರದಿಯನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು.
ಆಯೋಗವು 2024ರ ಮಾರ್ಚ್‌ನಲ್ಲಿ ಸಲ್ಲಿಸಿದ್ದ ಮಧ್ಯಂತರ ವರದಿಯಲ್ಲಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿತ್ತು. ಮಧ್ಯಂತರ ವರದಿಯ ಶಿಫಾರಸಿನಂತೆ ಎನ್‌ಇಪಿಯಲ್ಲಿ ಇದ್ದ ನಾಲ್ಕು ವರ್ಷಗಳ ಪದವಿ, ಬಹುಪ್ರವೇಶ–ನಿರ್ಗಮನವನ್ನು 2024–25ನೇ ಸಾಲಿನಿಂದಲೇ ರದ್ದು ಮಾಡಿ, ಮತ್ತೆ ಹಿಂದಿನಂತೆ ಮೂರು ವರ್ಷಗಳ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಅವಕಾಶ ನೀಡಲಾಗಿತ್ತು. ಅಂತಿಮ ವರದಿಯಲ್ಲಿ ಆಯೋಗವು ಶಾಲಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿ 97 ಪ್ರಮುಖ ಶಿಫಾರಸುಗಳನ್ನು ಮಾಡಿದೆ.
‘ಎಸ್‌ಇಪಿ ಆಯೋಗ ಸಲ್ಲಿಸಿದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸ್ವೀಕರಿಸಲಾಗಿದೆ. ಮುಖ್ಯಮಂತ್ರಿಯವರ ಜತೆ ಚರ್ಚಿಸಿದ ನಂತರ ವರದಿಯಲ್ಲಿನ ಶಿಫಾರಸುಗಳ ಪರಿಶೀಲನೆಗೆ ಸಮಿತಿ ರಚಿಸುವ ಚಿಂತನೆ ನಡೆದಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.