ADVERTISEMENT

ತುಮಕೂರು: ಕಾಂಗ್ರೆಸ್ ಕಚೇರಿಗೆ ನುಗ್ಗಿ ಕೆ.ಎನ್.ರಾಜಣ್ಣ ಗಲಾಟೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 17:02 IST
Last Updated 27 ಮೇ 2019, 17:02 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ತಮ್ಮ ವಿರುದ್ಧ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಳಿಗ್ಗೆ ನುಗ್ಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರಿಗೆ ನಿಂದಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪರಮೇಶ್ವರ ಹಟಾವೊ ಕಾಂಗ್ರೆಸ್ ಬಚಾವೊ ಎಂದು ಎರಡು ದಿನದ ಹಿಂದೆ ಭಿತ್ತಿಪತ್ರ ಅಂಟಿಸಿದ್ದಕ್ಕೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದವು.

ಈ ಸಂಘಟನೆಗಳ ಪ್ರತಿಭಟನೆ ಬೆಂಬಲಿಸಿದ ರಾಮಕೃಷ್ಣ ಅವರು ಕೆ.ಎನ್. ರಾಜಣ್ಣ ವಿರುದ್ಧ ಪ್ರತಿಭಟನೆ ವೇಳೆ ಘೋಷಣೆ ಕೂಗಬೇಕು ಎಂದು ಸೂಚನೆ ಕೊಟ್ಟಿದ್ದರು ಎಂದು ಹೇಳಲಾಗಿದೆ.

ADVERTISEMENT

ಈ ವಿಷಯ ರಾಜಣ್ಣ ಅವರಿಗೆ ತಿಳಿದು ಆಕ್ರೋಶಗೊಂಡಿದ್ದರು. ಬಳಿಕ ಕಾಂಗ್ರೆಸ್ ಕಚೇರಿಗೆ ನುಗ್ಗಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನಂಥ ಅಧ್ಯಕ್ಷರಿಂದಲ್ಲೇ ಕಾಂಗ್ರೆಸ್‌ಗೆ ದುರ್ಗತಿ ಬಂದಿದೆ ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಕಚೇರಿಯಿಂದ ಹೊರ ಬರುವಾಗ ಕಚೇರಿಯಲ್ಲಿನ ಕುರ್ಚಿಗಳನ್ನು ಒದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಬಿಡಲ್ಲ
‘ಅಪೆಕ್ಸ್ ಬ್ಯಾಂಕಿನ ವಿಚಾರವಾಗಿ ಮೂರು ವರ್ಷದ ಹಿಂದೆ ಸರ್ಕಾರಕ್ಕೆ ಬರೆದ ಮೂಗರ್ಜಿ ಆಧಾರದ ಮೇಲೆ ತನಿಖೆ ನಡೆಸುವಂತೆ ಸಚಿವ ಎಚ್‌.ಡಿ.ರೇವಣ್ಣ ಅಧಿಕಾರಿಗಳಿಗೆ ಹೇಳಿದ್ದಾನೆ. ದ್ವೇಷದ ರಾಜಕಾರಣದಿಂದ ಈ ರೀತಿ ಮಾಡಲಾಗುತ್ತಿದೆ. ಬ್ಯಾಂಕಿನ ಅಧ್ಯಕ್ಷನಾಗಿ 5 ವರ್ಷ ಪೂರ್ಣಗೊಳಿಸುತ್ತೇನೆ’ ಎಂದು ರಾಜಣ್ಣ ತಿಳಿಸಿದರು.

‘ಕೆಎಂಎಫ್‌ನಲ್ಲಿ ರೇವಣ್ಣನೇ ಸಾವಿರಾರು ಕೋಟಿ ಲೂಟಿ ಹೊಡೆದ ದಾಖಲೆಗಳು ನನ್ನ ಬಳಿ ಇವೆ’ ಎಂದು ರೇವಣ್ಣ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ರಾಜಣ್ಣ ವಿರುದ್ಧ ದ್ವೇಷದ ರಾಜಕಾರಣ’
ಮಂಡ್ಯ:
‘ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ವಿರುದ್ಧ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅವರನ್ನು ಕೆಳಗಿಳಿಸಿ, ಜೈಲಿಗೆ ಹೋಗಿ ಬಂದಿರುವ ಮತ್ತೊಬ್ಬ ವ್ಯಕ್ತಿಗೆ ಹುದ್ದೆ ನೀಡಲು ಸಿದ್ಧತೆ ಮಾಡಿಕೊಂಡಿದೆ’ ಎಂದು ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಸೋಮವಾರ ಆರೋಪಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಧಿಕಾರದ ಆಸೆಗಾಗಿ ಅಪೆಕ್ಸ್‌ ಬ್ಯಾಂಕ್‌ ಅನ್ನು ಸೂಪರ್‌ಸೀಡ್‌ ಮಾಡಲಾಗುತ್ತಿದೆ. ಬೆಂಗಳೂರು ಡೇರಿ ಚುನಾವಣೆಯಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಿದೆ. ಮಂಡ್ಯ ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟ (ಮನ್‌ಮುಲ್‌)ದ ಕಾಂಗ್ರೆಸ್‌ ಸದಸ್ಯರನ್ನು ಅನರ್ಹಗೊಳಿಸಿದೆ. ದ್ವೇಷದ ರಾಜಕಾರಣ ಮುಂದುವರಿಯುತ್ತಲೇ ಇದೆ. ಕಾಂಗ್ರೆಸ್‌ ಮುಖಂಡರು ನಡೆಸುತ್ತಿರುವ ಕ್ಲಬ್‌ಗಳ ಮೇಲೆ ದಾಳಿ ನಡೆಯುತ್ತಿದೆ’ ಎಂದು ದೂರಿದರು.

‘ಕಾಂಗ್ರೆಸ್‌ ಮುಖಂಡರ ವಿರುದ್ಧದ ಇಂಥ ದೌರ್ಜನ್ಯ ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಕಾರ್ಯಕರ್ತರ ರಕ್ಷಣೆ ಮಾಡುವಂತೆ ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ, ದಿನೇಶ್‌ ಗುಂಡೂರಾವ್‌ ಅವರಿಗೆ ಮನವಿ ಮಾಡುತ್ತೇವೆ’ ಎಂದರು.

ತಿರುಗೇಟು: ‘ಸುಮಲತಾ ಅವರು ಗೆದ್ದು ಇನ್ನೂ ನಾಲ್ಕು ದಿನ ಕಳೆದಿಲ್ಲ. ಆಗಲೇ ಕೆಆರ್‌ಎಸ್‌ ನೀರು ಬಿಡಿಸಲಿ ಎಂದು ಜೆಡಿಎಸ್‌ ಮುಖಂಡರು ಹೇಳಿದ್ದಾರೆ. ಏಳು ಜನ ಶಾಸಕರಿದ್ದು ಅವರಲ್ಲಿ ಇಬ್ಬರು ಸಚಿವರಿದ್ದಾರೆ. ಅವರು ಮೊದಲು ತಮ್ಮ ಕೆಲಸ ಮಾಡಲಿ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

‘ಸುಮಲತಾ ಅವರು ಜಿಲ್ಲೆಯ ಜನರ ಹಿತ ಕಾಯುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಸಮಾಧಾನಿತರು ಬಂದರೆ ಸರ್ಕಾರ’
ಹೊಸಪೇಟೆ:
‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದಲ್ಲಿನ ಅಸಮಾಧಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಅವರೆಲ್ಲ ನಮ್ಮ ಪಕ್ಷಕ್ಕೆ ಬಂದರೆ ರಾಜ್ಯದಲ್ಲಿ ಸರ್ಕಾರ ರಚಿಸಿ ಉತ್ತಮ ಆಡಳಿತ ಕೊಡುತ್ತೇವೆ. ಚುನಾವಣೆಗೆ ಹೋದರೆ ಜನರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ’ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರೂ ಬಿಟ್ಟಿರುವ ಮಂದಿಗೆ (ಮುಖ್ಯಮಂತ್ರಿ ಕುಮಾರಸ್ವಾಮಿಗೆ) ರಾಜೀನಾಮೆ ಕೊಡುವಂತೆ ಒತ್ತಾಯಿಸುವುದಿಲ್ಲ. ಆದರೆ, ಎರಡೂ ಪಕ್ಷಗಳ ಶಾಸಕರು, ಪಕ್ಷೇತರರು ಅವರಿಂದ ದೂರವಾಗಿದ್ದಾರೆ. ಮೈತ್ರಿ ಸರ್ಕಾರದಲ್ಲಿದ್ದೂ ಅವರೊಡನೆ ಗುರುತಿಸಿಕೊಳ್ಳದವರು, ಬೆಂಬಲ ಕೊಟ್ಟರೆ ಸರ್ಕಾರ ರಚಿಸುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಮೈತ್ರಿ ಸರ್ಕಾರ ಮುಂದುವರಿದರೆ ಇನ್ನೂ ನಾಲ್ಕು ವರ್ಷ ಇವರ ನಾಟಕ ನೋಡಿಕೊಂಡು ಇರಬೇಕಾಗುತ್ತದೆ. ಇಂಥವರೆಲ್ಲ ಅಧಿಕಾರದಿಂದ ತೊಲಗುವುದು ಲೇಸು. ಎಚ್‌.ಡಿ.ಕೆ. ರಾಜೀನಾಮೆ ಕೊಡಬೇಕು. ನಾಟಕವಾಡುವುದು ಬಿಡಬೇಕು. ದೆಹಲಿ ಪರೇಡ್‌ ಮಾಡಿರುವುದು ಸಾಕು’ ಎಂದು ಆಗ್ರಹಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.