ADVERTISEMENT

ಕಾರ್ಯಕರ್ತರ ಕಡೆಗಣನೆ: ಕಣ್ಣೀರು

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 18:41 IST
Last Updated 28 ಜುಲೈ 2019, 18:41 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ಬೆಂಗಳೂರು: ‘ನಿಷ್ಠಾವಂತ ಕಾರ್ಯಕರ್ತರನ್ನು ನಾನು ಕಡೆಗಣಿಸಿದ್ದೇನೆ. 14 ತಿಂಗಳ ಮೈತ್ರಿ ಸರ್ಕಾರದಲ್ಲಿ ಅವರಿಗೆ ಯೋಗ್ಯಸ್ಥಾನಮಾನ ಕೊಡಲು ಸಾಧ್ಯವಾಗಿಲ್ಲ’ ಎಂದು ಹೇಳಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕಣ್ಣೀರು ಹಾಕಿದರು.

ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರ ಹಂಚುವಲ್ಲಿ ತಪ್ಪಾಗಿದೆ. ಇನ್ನು ಮುಂದೆ ಇಂತಹ ಪ್ರಮಾದಕ್ಕೆ ಅವಕಾಶ ನೀಡುವುದಿಲ್ಲ. ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಲಿರುವ ಹಣಕಾಸು ವಿಧೇಯಕಕ್ಕೆ ಜೆಡಿಎಸ್‌ನ ತಕರಾರು ಇಲ್ಲ. ಕುಮಾರಸ್ವಾಮಿ ಅವರು ಸಿದ್ಧಪಡಿಸಿದ ವಿಧೇಯಕವನ್ನು ಯಡಿಯೂರಪ್ಪ ಅವರು ಇದೀಗ ಒಪ್ಪಿಗೆಗಾಗಿ ಸದನದ ಮುಂದಿಡುತ್ತಿದ್ದಾರೆ’ ಎಂದರು.

ADVERTISEMENT

‘ಅತೃಪ್ತ ಶಾಸಕರನ್ನು ಅನರ್ಹತಗೊಳಿಸುವ ಮೂಲಕ ಸಭಾಧ್ಯಕ್ಷ ರಮೇಶ್‌ ಕುಮಾರ್ ಅವರು ಯೋಗ್ಯ ಕ್ರಮವನ್ನೇ ಕೈಗೊಂಡಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಶಾಸಕರನ್ನು ಅನರ್ಹಗೊಳಿಸುವ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಸಭಾಧ್ಯಕ್ಷರು ಬೇರೆ ಬೇರೆಯ ಕ್ರಮ ಕೈಗೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಸಭಾಧ್ಯಕ್ಷರು ನೀಡಿರುವ ತೀರ್ಪು ಐತಿಹಾಸಿಕ. ಪಕ್ಷಾಂತರ ಮಾಡುವವರಿಗೆ ಇದರಿಂದ ತಕ್ಕ ಪಾಠ ದೊರೆತಂತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.